ಸುಪ್ರೀಂಕೋರ್ಟ್ ಆದೇಶ ಪುನರ್ ಪರಿಶೀಲನೆಯಾಗಲಿ

KannadaprabhaNewsNetwork |  
Published : Sep 20, 2024, 01:34 AM IST
14 | Kannada Prabha

ಸಾರಾಂಶ

ಎಂಎಸ್ಪಿ ಗ್ಯಾರಂಟಿ ಕಾನೂನು ಆಗಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಪಂಜಾಬ್, ಹರಿಯಾಣದಲ್ಲಿ ನಡೆಯುತ್ತಿರುವ ರೈತರ ಹೋರಾಟದ ಬಗ್ಗೆ ವರದಿ ಪಡೆಯಲು ಸುಪ್ರೀಂಕೋರ್ಟ್ ಸಮಿತಿ ರಚಿಸಿ ಆದೇಶ ಹೊರಡಿಸಿದ್ದು, ಈ ಆದೇಶವನ್ನು ಪುನರ್ ಪರಿಶೀಲಿಸಬೇಕು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಜಾಬ್, ಹರಿಯಾಣದಲ್ಲಿ ಹೋರಾಟ ನಡೆಸುತ್ತಿರುವ ರೈತರ ಸಮಸ್ಯೆಗಳ ಪರಿಹಾರಕ್ಕೆ ಸುಪ್ರೀಂಕೋರ್ಟ್ ಅಲ್ಲಿನ ಹೈಕೋರ್ಟ್‌ ನ ನಿವೃತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ 5 ಜನ ಪರಿಣಿತರನ್ನು ಸೇರಿಸಿ ಸಮಿತಿ ರಚಿಸಿದೆ. ಎಂಎಸ್ಪಿ ಗ್ಯಾರಂಟಿ ಕಾನೂನು ಆಗಬೇಕು ಎಂದು ದೇಶದ ರೈತರ ಪರವಾಗಿ ಅಲ್ಲಿನ ರೈತರು ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟವನ್ನು ಇಡೀ ದೇಶದ ರೈತರು ಬೆಂಬಲಿಸಿ ಮುಂದುವರಿಸಿದ್ದಾರೆ. ಈಗ ರಚಿಸಿರುವ ಸಮಿತಿ ಇಡೀ ದೇಶಕ್ಕೆ ಅನ್ವಯವಾಗುವಂತೆ ದಕ್ಷಿಣ ಭಾರತ ರಾಜ್ಯಗಳ ಪರಿಣಿತರನ್ನು ಸೇರಿಸಿ ಸಮಿತಿ ರಚಿಸಿ, ಈಗ ಹೊರಡಿಸಿರುವ ಆದೇಶ ಪುನರ್ ಪರಿಶೀಲಿಸಲಿ ಎಂದು ಒತ್ತಾಯಿಸಿದರು.

ಕುಲಾಂತರಿ ಬೀಜವನ್ನು (ಜಿಎಂ ಸೀಡ್ಸ್) ರೈತರ ಹಿತದೃಷ್ಟಿಯಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಹಿಷ್ಕಾರ ಮಾಡಲಿ. ಖಾಸಗಿ ಫೈನಾನ್ಸ್‌ ಗಳು, ಖಾಸಗಿ ಬ್ಯಾಂಕುಗಳ ಹಾವಳಿ, ಕಿರುಕುಳ ತಪ್ಪಿಸಲು ಕೂಡಲೇ ರಿಸರ್ವ್ ಬ್ಯಾಂಕ್ ಕಠಿಣ ನೀತಿ ರೂಪಿಸಲಿ. ರೈತರ ಕೃಷಿ ಸಾಲ ವಸೂಲಾತಿಗಾಗಿ ರೂಪಿಸಿರುವ ಸರ್ಪ್ರೈಸರಿ ಕಾಯ್ದೆ ರದ್ದುಗೊಳಿಸಲಿ. ಈ ಬಗ್ಗೆ ರಾಜ್ಯದ ಸಂಸದರು ಒತ್ತಾಯಿಸಬೇಕು ಎಂದು ಅವರು ತಿಳಿಸಿದರು.

ಪ್ರಸಕ್ತ ಸಾಲಿನ ಹೆಚ್ಚುವರಿ ಕಬ್ಬು ದರ ನಿಗದಿ ಮಾಡಬೇಕು. ಕಳೆದ ವರ್ಷದ 150 ರೂ. ಬಾಕಿ ಕೊಡಿಸಲು ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು. ಭತ್ತ ಉತ್ಪಾದನಾ ವೆಚ್ಚ ಏರಿಕೆಯಾಗಿದೆ. ರಾಜ್ಯ ಸರ್ಕಾರ ಕನಿಷ್ಠ ಬೆಂಬಲ ಬೆಲೆಗೆ ಹೆಚ್ಚುವರಿ 500 ರೂ. ಪ್ರೋತ್ಸಾಹ ಧನ ನೀಡಬೇಕು. ಕೇರಳ ಹಾಗೂ ಒರಿಸ್ಸಾ ಮಾದರಿಯಲ್ಲಿ ರಾಜ್ಯದ ರೈತರ ಸಮಸ್ಯೆಗಳ ಕುರಿತು ಅಕ್ಟೋಬರ್‌ ನಲ್ಲಿ ರಾಜ್ಯ ರೈತ ಸಮಾವೇಶ ನಡೆಸಲಾಗುತ್ತದೆ ಎಂದರು.

ರೈತ ಮುಖಂಡರಾದ ಬಲ್ಲೂರ್ ರವಿಕುಮಾರ್, ಮಂಜೇಶಗೌಡ, ಅಜಯಕುಮಾರ್, ಧರ್ಮರಾಜ, ಅಯೂಬ್ ಖಾನ್, ಜಗದೀಶ, ರವೀಶ, ಕೊಟ್ರೇಶ ಚೌದರಿ, ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಉಡಿಗಾಲ ರೇವಣ್ಣ. ಸುಂದ್ರಪ್ಪ, ನೀಲಕಂಠಪ್ಪ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳನ್ನು ಅಧ್ಯಯನ ಪ್ರವಾಸಕ್ಕೆ ಟಿಪ್ಪರಲ್ಲಿ ಕರೆದೊಯ್ದ ಹೆಡ್‌ಮಾಸ್ಟರ್‌!
ಬೆಂಗಳೂರು ರೇಸ್‌ಕೋರ್ಸ್‌ ಕುಣಿಗಲ್‌ಗೆ ಶಿಫ್ಟ್‌ : ಸಂಪುಟ