ಚುನಾವಣೆ ಬಳಿಕ ಹುಣ್ಣಿಗೆರೆ ಬಿಡಿಎ ವಿಲ್ಲಾ ಮಾರಾಟ

KannadaprabhaNewsNetwork |  
Published : May 04, 2024, 01:32 AM ISTUpdated : May 04, 2024, 07:08 AM IST
Hunnigere | Kannada Prabha

ಸಾರಾಂಶ

31 ಎಕರೇಲಿ ವಿಲ್ಲಾಗಳು ನಿರ್ಮಿಸಲಾಗಿದ್ದು, ಸದ್ಯ ವಿಲ್ಲಾ ಮತ್ತು 1 ಬಿಎಚ್‌ಕೆ ಮನೆಗಳ ದರವನ್ನು ಬಿಡಿಎ ಸಿದ್ಧಪಡಿಸಿ ಕೊಂಡಿದೆ. 30/40 ಅಳತೆಯ 3 ಬಿಎಚ್‌ಕೆಯ 152 ಮನೆಗಳಿದ್ದು, ಪ್ರತಿ ಮನೆಗೆ ₹73 ಲಕ್ಷ ದರ ನಿಗದಿಪಡಿಸಲಾಗಿದೆ.

ಸಂಪತ್‌ ತರೀಕೆರೆ

 ಬೆಂಗಳೂರು :  ತುಮಕೂರು ರಸ್ತೆಯ ಹುಣ್ಣಿಗೆರೆಯಲ್ಲಿ (ದಾಸನಪುರ ಹೋಬಳಿ) ನಿರ್ಮಿಸಿರುವ ವಿಲ್ಲಾಗಳನ್ನು ಚುನಾವಣಾ ನೀತಿ ಸಂಹಿತೆ ಅಂತ್ಯಗೊಂಡ ಬಳಿಕ ಸಾರ್ವಜನಿಕ ಹಂಚಿಕೆ ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸಿದ್ಧತೆ ನಡೆಸಿದೆ.

ಹುಣ್ಣಿಗೆರೆಯಲ್ಲಿ 31 ಎಕರೆಯಲ್ಲಿ ₹271.46 ಕೋಟಿ ವೆಚ್ಚದಲ್ಲಿ ವಿಲ್ಲಾಗಳನ್ನು ನಿರ್ಮಿಸಲಾಗಿದೆ. ವಿಲ್ಲಾ ಮತ್ತು ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆಂದು ಹೊಂಬಾಳೆ ಕನ್‌ಸ್ಟ್ರಕ್ಷನ್ಸ್‌ ಆ್ಯಂಡ್‌ ಎಸ್ಟೇಟ್‌ ಪ್ರೈ.ಲಿ. ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ನಿಗದಿಯಂತೆ 2023 ಮಾರ್ಚ್‌ ಅಂತ್ಯದೊಳಗೆ ಯೋಜನೆ ಪೂರ್ಣಗೊಳ್ಳಬೇಕಿತ್ತು. ವಿವಿಧ ಕಾರಣಗಳಿಂದ ನಿಗದಿತ ಅವಧಿಗೆ ಯೋಜನೆ ಮುಗಿಯದಿದ್ದರೂ ಏಪ್ರಿಲ್‌- ಮೇ ತಿಂಗಳ ಅಂತ್ಯದೊಳಗೆ ಪೂರ್ಣಗೊಂಡಿತ್ತು. ಈ ನಡುವೆ ಚುನಾವಣೆ ಬಂದಿದ್ದರಿಂದ ವಿಲ್ಲಾ ಮತ್ತು ಫ್ಲಾಟ್‌ಗಳನ್ನು ಸಾರ್ವಜನಿಕ ಹಂಚಿಕೆಗೆ ಬಿಡಿಎ ಮುಂದಾಗಿರಲಿಲ್ಲ.

ಸದ್ಯ ವಿಲ್ಲಾ ಮತ್ತು 1 ಬಿಎಚ್‌ಕೆ ಮನೆಗಳ ದರವನ್ನು ಬಿಡಿಎ ಸಿದ್ಧಪಡಿಸಿಕೊಂಡಿದೆ. 30/40 ಅಳತೆಯ 3 ಬಿಎಚ್‌ಕೆಯ 152 ಮನೆಗಳಿದ್ದು, ಪ್ರತಿ ಮನೆಗೆ ₹73 ಲಕ್ಷ ದರ ನಿಗದಿಪಡಿಸಲಾಗಿದೆ. ಅದೇ ರೀತಿ 35/50 ಅಳತೆಯ 4 ಬಿಎಚ್‌ಕೆ ಮನೆಗಳು 170 ಇವೆ. ಇವುಗಳ ದರ ಪ್ರತಿ ವಿಲ್ಲಾಗೆ ₹1.10 ಕೋಟಿಗಳಾಗಿವೆ. ಅಲ್ಲದೆ ಬಡ ವರ್ಗದವರಿಗಾಗಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನಲ್ಲಿ 1 ಬಿಎಚ್‌ಕೆಯ 320 ಮನೆಗಳಿದ್ದು, ಪ್ರತಿ ಮನೆಗೆ ₹13.50 ಲಕ್ಷ ದರ ನಿಗದಿಪಡಿಸಲಾಗಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.

ಲೋಕಸಭಾ ಚುನಾವಣಾ ನೀತಿ ಸಂಹಿತೆ ಜೂನ್‌ 7ರಂದು ಅಂತ್ಯಗೊಳ್ಳಲಿದೆ ಎಂದು ಚುನಾವಣಾ ಆಯೋಗ ಈಗಾಗಲೇ ಘೋಷಣೆ ಮಾಡಿದೆ. ಆ ನಂತರ ಬಿಡಿಎ ಹುಣ್ಣಿಗೆರೆಯಲ್ಲಿ ನಿರ್ಮಿಸಿರುವ ವಿಲ್ಲಾ ಮತ್ತು 1 ಬಿಎಚ್‌ಕೆ ಮನೆಗಳನ್ನು ಸಾರ್ವಜನಿಕ ಹಂಚಿಕೆ ಮಾಡಲು ಅರ್ಜಿ ಕರೆಯುವ ಪ್ರಕ್ರಿಯೆ ಆರಂಭಿಸಲು ಉದ್ದೇಶಿಸಿದೆ. ನಿರ್ಮಾಣ ಹಂತದಲ್ಲಿರುವಾಗಲೇ ನೂರಾರು ಮಂದಿ ಗ್ರಾಹಕರು ಭೇಟಿ ನೀಡಿ ವಿಲ್ಲಾ ಮತ್ತು ಮನೆಗಳನ್ನು ವೀಕ್ಷಿಸಿದ್ದು, ಬೇಡಿಕೆಯೂ ಹೆಚ್ಚಾಗಿದೆ. ವಿಲ್ಲಾ ಮಾರಾಟದಿಂದ ಬರುವ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಿ ಹೊಸ ಯೋಜನೆಗೆ ಬಳಕೆ ಮಾಡಿಕೊಳ್ಳುವ ಉದ್ದೇಶವನ್ನು ಬಿಡಿಎ ಹೊಂದಿದೆ. 

ಆಧುನಿಕ ತಂತ್ರಜ್ಞಾನ ಬಳಕೆ

ಬಿಡಿಎ ನಿರ್ಮಿಸಿರುವ 3 ಮತ್ತು 4 ಬಿಎಚ್‌ಕೆ ವಿಲ್ಲಾಗಳನ್ನು ಆರ್‌ಸಿಸಿ ಫ್ರೇಮ್‌ ಸ್ಟ್ರಕ್ಚರ್‌ನಲ್ಲಿ ವಾಸ್ತು ಪ್ರಕಾರ ನಿರ್ಮಿಸಲಾಗಿದೆ. ಇವು ಡ್ಯೂಪ್ಲೆಕ್ಸ್‌ ಮನೆಗಳಾಗಿದ್ದು, ಇಟ್ಟಿಗೆಯಿಂದ ಕಟ್ಟಲಾಗಿದೆ. ಪ್ರತಿ ಮನೆಗೆ ಎರಡು ಪೈಪಿಂಗ್‌ ವ್ಯವಸ್ಥೆ ಅಳವಡಿಸಿದ್ದು, ಸಂಪು ಮತ್ತು ಓವರ್‌ ಹೆಡ್‌ ಟ್ಯಾಂಕಿರುತ್ತದೆ ಮತ್ತು ಸೋಲಾರ್‌ ವಾಟರ್‌ ಹಿಟರ್‌ ವ್ಯವಸ್ಥೆ ಇದೆ. ಒಂದು ಬಿಎಚ್‌ಕೆ ಮನೆಗಳನ್ನು ಆರ್‌ಸಿಸಿ ಗೋಡೆಗಳನ್ನು ಅಳವಡಿಸಿ ಜಿ+3 ಮಹಡಿಯಲ್ಲಿ ನಿರ್ಮಿಸಲಾಗಿದೆ. 3 ಮತ್ತು 4 ಬಿಎಚ್‌ಕೆ ವಿಲ್ಲಾಗಳಿಗೆ ಪ್ರತ್ಯೇಕವಾದ ಗೇಟ್‌ ಅಳವಡಿಸಿ, ಮುಖ್ಯರಸ್ತೆಯಿಂದ ಪ್ರತ್ಯೇಕವಾಗಿ ಸಂಪರ್ಕ ಕಲ್ಪಿಸಲಾಗಿದೆ. ಕಾರ್‌ ಚಾರ್ಜಿಂಗ್‌ಗೆ ಅನುಕೂಲವಾಗುವಂತೆ ವ್ಯವಸ್ಥೆಯೂ ಇದೆ. ಎಲ್ಲ ವಿಲ್ಲಾಗಳಿಗೂ ಕಾರ್‌ ಪಾರ್ಕಿಂಗ್‌ ವ್ಯವಸ್ಥೆ ಒದಗಿಸಲಾಗಿದೆ. ಈ ಯೋಜನೆಯಲ್ಲಿ 100 ಕೆವಿ ಸಾಮರ್ಥ್ಯದ ಸೋಲಾರ್‌ ಪ್ಯಾನಲ್‌ಗಳನ್ನು ಅಳವಡಿಸಲಾಗಿದೆ. ಮಳೆ ನೀರು ಕೊಯ್ಲಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಸುಸಜ್ಜಿತ ಮೂಲಸೌಕರ್ಯ

ವಿಲ್ಲಾ ಯೋಜನೆಯಲ್ಲಿ 27 ಉದ್ಯಾನವನಗಳಿದ್ದು, ಹಸಿರಿನ ಗಿಡ-ಮರಗಳಿಗೆ ಪ್ರಾಮುಖ್ಯತೆ ಕೊಡಲಾಗಿದೆ. ಈ ವಸತಿ ಯೋಜನೆಯಲ್ಲಿ ಸುತ್ತ 2.1 ಮೀ. ಎತ್ತರದ ರಕ್ಷಣಾ ಗೋಡೆ ನಿರ್ಮಿಸಲಾಗಿದೆ. ವಸತಿ ಯೋಜನೆಯ ಸುತ್ತ ರಸ್ತೆ ನಿರ್ಮಿಸಲಾಗಿದೆ. ಯೋಜನೆಯಲ್ಲಿ ಮನೋರಂಜನಾ ಕೇಂದ್ರವನ್ನು ನಿರ್ಮಿಸಿದ್ದು, ಈ ಕೇಂದ್ರದಲ್ಲಿ ಒಳಾಂಗಣ ಆಟಗಳಿಗೆ ಪ್ರಾಮುಖ್ಯತೆ ಕೊಡಲಾಗಿದೆ. ಒಳಾಂಗಣ ಸೆಟಲ್‌ ಕೋರ್ಟ್‌, ರೆಸ್ಟೋರೆಂಟ್‌, ಜಿಮ್‌, ಏರೋಬಿಕ್ಸ್‌ ರೂಮ್‌, ಪ್ರಾಥಮಿಕ ಆರೋಗ್ಯ ಕೇಂದ್ರ, ಕಮ್ಯೂನಿಟಿ ಹಾಲ್‌, ಗ್ರಂಥಾಲಯ, ಈಜುಕೊಳ ನಿರ್ಮಿಸಲಾಗಿದೆ ಹಾಗೂ ಸೂಪರ್‌ ಮಾರ್ಕೆಟ್‌ಗೆ ಸ್ಥಳಾವಕಾಶ ಕಲ್ಪಿಸಲಾಗಿದೆ ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

PREV

Recommended Stories

ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥ ಸಂಚಲನ ಶಾಂತಿಯುತ
ವಲಸಿಗರಿಂದ ಗ್ರಾಮೀಣ ಭಾಗದ ಕಾರ್ಮಿಕರಿಗೂ ಸಂಕಷ್ಟ