ಕನ್ನಡಪ್ರಭ ವಾರ್ತೆ ಬೆಂಗಳೂರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ದೇಶಾದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚಾಗಿದೆ. ಇದೀಗ ಪ್ರಜ್ವಲ್ ರೇವಣ್ಣ ಕೃತ್ಯವು ದೇಶವೇ ತಲೆ ತಗ್ಗಿಸುವಂತಾಗಿದೆ. ಅವರಷ್ಟೇ ಅಲ್ಲದೆ ಬೇರೆ ರಾಜಕಾರಣಿಗಳು ಮತ್ತು ಅವರ ಮಕ್ಕಳು ಸಹ ಲೈಂಗಿಕ ದೌರ್ಜನ್ಯದಲ್ಲಿ ತೊಡಗಿರುವ ಅನುಮಾನವಿದೆ.
ಅದಕ್ಕೆ ಪುಷ್ಠಿ ನೀಡುವಂತೆ ಹೈಕೋರ್ಟ್ ಸೇರಿದಂತೆ ಇತರ ನ್ಯಾಯಾಲಯಗಳಲ್ಲಿ 600ಕ್ಕೂ ಹೆಚ್ಚು ಮಂದಿ ತಮ್ಮ ಅಶ್ಲೀಲ ವಿಡಿಯೋ ಪ್ರಸಾರಕ್ಕೆ ವಿರುದ್ಧವಾಗಿ ತಡೆಯಾಜ್ಞೆ ತಂದಿದ್ದಾರೆ. ಇದನ್ನು ಗಮನಿಸಿದರೆ ರಾಜ್ಯದಲ್ಲಿ ಬೆಳಕಿಗೆ ಬರದ ಮತ್ತಷ್ಟು ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದಿವೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದರು.ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ)ವನ್ನು ನೇಮಿಸದೆ. ಆದರೆ, ಪ್ರಜ್ವಲ್ ಹಾಗೂ ಅವರ ತಂದೆ ರೇವಣ್ಣ ವಿರುದ್ಧ ದಾಖಲಾಗಿರುವ ಪ್ರಕರಣದ ಸೆಕ್ಷನ್‌ಗಳು ದುರ್ಬಲವಾಗಿವೆ. ಇದೀಗ ಅತ್ಯಾಚಾರ ಪ್ರಕರಣಗಳಿಗೆ ಹಾಕಲಾಗುವ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ. ಇದನ್ನು ಗಮನಿಸಿದರೆ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು ಕಾಟಾಚಾರಕ್ಕೆ ತನಿಖೆ ನಡೆಸುವಂತಹ ಮನಸ್ಥಿತಿ ರಾಜ್ಯ ಸರ್ಕಾರಕ್ಕಿದೆ ಎಂದು ಹೇಳಿದರು.
ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಮಾತನಾಡಿ, ಹಾಸನ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಂತ್ರಸ್ತೆಯರ ಮೇಲೆ ತಪ್ಪು ಹೊರಿಸುವಂತಹ ಪರಿಸ್ಥಿತಿ ನಿರ್ಮಿಸಲಾಗುತ್ತಿದೆ. ಜೆಡಿಎಸ್ ಮತ್ತು ಬಿಜೆಪಿ ರೀತಿಯಲ್ಲಿಯೇ ಕಾಂಗ್ರೆಸ್ ಕೂಡ ಆರೋಪಿಗಳ ರಕ್ಷಣೆಗೆ ಮುಂದಾಗಿದೆ. ಅಲ್ಲದೆ, ವಿಡಿಯೋ ಬಿಡುಗಡೆಯಿಂದ ಜೆಡಿಎಸ್-ಬಿಜೆಪಿಗಿಂತ ಕಾಂಗ್ರೆಸ್‌ಗೆ ಹೆಚ್ಚಿನ ಲಾಭವಾಗಲಿದ್ದು, ಅದಕ್ಕಾಗಿ ಕಾಂಗ್ರೆಸ್‌ನಿಂದಲೇ ವಿಡಿಯೋ ಬಿಡುಗಡೆಯಾಗಿದೆ ಎಂಬ ವಾದ ನಡೆಯುತ್ತಿದೆ. ಆ ಬಗ್ಗೆಯೂ ತನಿಖೆ ನಡೆಸಿ ವಿಡಿಯೋ ಬಿಡುಗಡೆ ಮಾಡಿದವರಿಗೂ ಶಿಕ್ಷೆಯಾಗುವಂತೆ ಮಾಡಬೇಕು. ಕಾಂಗ್ರೆಸ್ ಪಕ್ಷದವರು ಜೆಡಿಎಸ್-ಬಿಜೆಪಿ ನಾಯಕರ ಮೇಲೆ ಆರೋಪ ಮಾಡುತ್ತಾ ಇಡೀ ಪ್ರಕರಣವನ್ನು ರಾಜಕಾರಣ ಮಾಡುತ್ತಿದ್ದು, ಅದನ್ನು ಮೊದಲು ನಿಲ್ಲಿಸಬೇಕು ಎಂದು ಆಗ್ರಹಿಸಿದರು.ಅಹಿಂದ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮಹೇಶ್, ಪ್ರಮುಖರಾದ ಭಾಸ್ಕರ್ ಪ್ರಸಾದ್ ಇತರರಿದ್ದರು.