ಮೊದಲ ಸ್ವದೇಶಿ ಬಾಂಬರ್‌ ಏರ್‌ಕ್ರಾಫ್ಟ್‌ ಅನಾವರಣ

KannadaprabhaNewsNetwork |  
Published : May 04, 2024, 01:31 AM ISTUpdated : May 04, 2024, 12:52 PM IST
Flying Wedge | Kannada Prabha

ಸಾರಾಂಶ

ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಫೈಯಿಂಗ್ ವೆಡ್ಜ್ ಡಿಫೆನ್ಸ್ ಆಂಡ್ ಏರೋಸ್ಪೇಸ್ ಟೆಕ್ನಾಲಜೀಸ್ ಕಂಪನಿಯು ಮಾನವರಹಿತ ಸ್ವದೇಶಿ ಬಾಂಬರ್ "ಎಫ್‌ಡಬ್ಲ್ಯೂಡಿ-200 ಬಿ ಏರ್‌ಕ್ರಾಫ್ಟ್ " ರೂಪಿಸಿರುವುದಾಗಿ ತಿಳಿಸಿದೆ. ಜೊತೆಗೆ ಇದನ್ನು ಭಾರತೀಯ ಸೇನೆಯ ಸೇವೆಗೆ ನಿಯೋಜಿಸುವ ಪ್ರಯತ್ನ ನಡೆದಿರುವುದಾಗಿ ಹೇಳಿದೆ.

 ಬೆಂಗಳೂರು :  ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಫೈಯಿಂಗ್ ವೆಡ್ಜ್ ಡಿಫೆನ್ಸ್ ಆಂಡ್ ಏರೋಸ್ಪೇಸ್ ಟೆಕ್ನಾಲಜೀಸ್ ಕಂಪನಿಯು ಮಾನವರಹಿತ ಸ್ವದೇಶಿ ಬಾಂಬರ್ "ಎಫ್‌ಡಬ್ಲ್ಯೂಡಿ-200 ಬಿ ಏರ್‌ಕ್ರಾಫ್ಟ್ " ರೂಪಿಸಿರುವುದಾಗಿ ತಿಳಿಸಿದೆ. ಜೊತೆಗೆ ಇದನ್ನು ಭಾರತೀಯ ಸೇನೆಯ ಸೇವೆಗೆ ನಿಯೋಜಿಸುವ ಪ್ರಯತ್ನ ನಡೆದಿರುವುದಾಗಿ ಹೇಳಿದೆ.

ಶುಕ್ರವಾರ ನಗರದಲ್ಲಿ "ಎಫ್‌ಡಬ್ಲ್ಯೂಡಿ-200 ಬಿ ಏರ್‌ಕ್ರಾಫ್ಟ್ ಮಾದರಿ " ಅನಾವರಣಗೊಳಿಸಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಕಂಪನಿಯ ಸಂಸ್ಥಾಪಕ ಸುಹಾಸ್ ತೇಜಸ್ಕಂದ, ಖಾಸಗಿ ವಲಯದ ಪ್ರಯತ್ನ ಎಂಬಂತೆ ನಾವು ಭಾರತದ ಮೊದಲ ಸ್ವದೇಶಿ ಮಾನವರಹಿತ ಬಾಂಬರ್ ಏರ್‌ಕ್ರಾಫ್ಟ್ ನಿರ್ಮಿಸಿದ್ದೇವೆ. ಈ ವಿಮಾನ ಪೈಲಟ್ ಇಲ್ಲದೆ ಚಾಲನೆ ಆಗಲಿದ್ದು, ಇದರಿಂದ ಸೈನಿಕರ ಸಂಭಾವ್ಯ ಪ್ರಾಣತ್ಯಾಗ ತಪ್ಪಿದಂತಾಗಲಿದೆ ಎಂದು ಹೇಳಿದರು.

ಈ ಬಾಂಬರ್ ಏರ್ ಕ್ರಾಫ್ಟ್ 100 ಕೆಜಿ ಇಂಧನ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ನಿಖರ ವಾಯುದಾಳಿಯ ಕ್ಷಿಪಣಿ, ಇತರೆ ಶಸ್ತ್ರಗಳನ್ನು ಅಳವಡಿಸಬಹುದು. ಗರಿಷ್ಠ 200 ಕೆಟಿಎಸ್/ 370 ಕಿ.ಮೀ. (ಪ್ರತಿ ಗಂಟೆ) ವೇಗದಲ್ಲಿ 12ರಿಂದ 20 ತಾಸುಗಳ ಕಾಲ ಹಾರಾಟ ನಡೆಸಬಲ್ಲದು. ಇದು ಗರಿಷ್ಠ 498 ಕೆ.ಜಿ ತೂಕ ಹೊತ್ತು ಟೇಕಾಫ್ ಮಾಡಬಲ್ಲದು. ಅಲ್ಲದೆ, ಗೌಂಡ್ ಕಂಟ್ರೋಲ್ ಸ್ಟೇಶನ್‌ನಿಂದ (ಜಿಸಿಎಸ್) ಇದು ನಿಯಂತ್ರಣ ಆಗಲಿದ್ದು, 200 ಕಿ.ಮೀ. ದೂರದವರೆಗೆ ಸಂಪರ್ಕ ಹೊಂದಿರುವ ಸಾಮರ್ಥ್ಯ ಹೊಂದಿದೆ. ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲೂ ಪ್ರಯತ್ನ ನಡೆದಿದೆ ಎಂದು ವಿವರಿಸಿದರು.

ಕಡಿಮೆ ವೆಚ್ಚದಲ್ಲಿ ಇದು ನಿರ್ಮಾಣವಾಗಿರುವುದು ಇನ್ನೊಂದು ವಿಶೇಷ. ಅಮೆರಿಕದ ಪ್ರಿಡೇಟರ್‌ಗೆ ಬರೋಬ್ಬರಿ ₹250 ಕೋಟಿ ವೆಚ್ಚವಾದರೆ, ನಾವು ಉತ್ಪಾದಿಸಿದ ಎಫ್‌ಡಬ್ಲ್ಯುಡಿ-200ಬಿ ಏರ್ ಕ್ರಾಫ್ಟ್ ಕೇವಲ ₹25 ಕೋಟಿ ವೆಚ್ಚವಾಗುತ್ತದೆ ಎಂದರು.

ಮುಂದಿನ ಮೂರು ತಿಂಗಳಲ್ಲಿ ಸೆಮಿಲ್ಯಾಕ್ ಪರೀಕ್ಷೆ ( ಸೆಂಟರ್ ಫಾರ್ ಮಿಲಿಟ್ರಿ ಏರ್‌ವರ್ತಿನೆಸ್ ಆಂಡ್ ಸರ್ಟಿಫಿಕೇಶನ್ ) ನಡೆಯಲಿದೆ. ನಾವು ಆರ್ಮಿ ಡಿಸೈನ್ ಬ್ಯೂರೋ ಅಧಿಕಾರಿಗಳು ಕೂಡ ಆಗಮಿಸಿ ಇದರ ತಪಾಸಣೆ, ಆಗಬೇಕಾದ ಬದಲಾವಣೆ ಸೂಚಿಸಲಿದ್ದಾರೆ. ಇದಾದ ನಂತರ ಸೈನ್ಯಕ್ಕೆ ಇದನ್ನು ನಿಯೋಜಿಸುವ ಪ್ರಯತ್ನ ಆಗಲಿದೆ ಎಂದರು.

ಈ ವೇಳೆ ಕರ್ನಲ್ ಬಿ. ರವಿ, ಆಯುಶ್ ಸಬತ್, ನರಸಿಂಹನ್ ಸೇರಿ ಇತರರಿದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ