ಕೊಪ್ಪಳ: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ ಹಾಗೂ ಅವರ ಪಾಲಕರ ಮೇಲೆ ಕೌಟುಂಬಿಕ ನ್ಯಾಯಾಲಯದ ಆವರಣದ ಮಧ್ಯಸ್ಥಿಕೆಯ ಕೊಠಡಿಯಲ್ಲಿಯೇ ಪತಿಯೋರ್ವ ಪೆಟ್ರೋಲ್ ಸುರಿದು ಹತ್ಯೆಗೆ ಯತ್ನಿಸಿದ ಘಟನೆ ಕೊಪ್ಪಳದಲ್ಲಿ ಬುಧವಾರ ನಡೆದಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನೀಚ ಕೃತ್ಯಕ್ಕೆ ಮುಂದಾಗಿದ್ದ ಪತಿಯನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.ಜಿಲ್ಲೆಯ ಸಿದ್ದಾಪುರ ಗ್ರಾಮದ ನಿವಾಸಿ ಚಿರಂಜೀವಿ ಎನ್ನುವ ಪಾಪಿ ಪತಿಯೇ ಈ ಕೃತ್ಯಕ್ಕೆ ಯತ್ನಿಸಿದ ವ್ಯಕ್ತಿ. ಚಿರಂಜೀವಿ ಜಿಲ್ಲೆಯ ಹಳೇ ಕುಮಟಾ ಗ್ರಾಮದ ರೋಜಾ ಎನ್ನುವ ಯುವತಿಯನ್ನು ಪ್ರೀತಿಸಿ ಕಳೆದ ೧೨ ವರ್ಷಗಳ ಹಿಂದೆ ಮದುವೆ ಮಾಡಿಕೊಂಡಿದ್ದರು. ಇಬ್ಬರ ಮನೆಯವರೂ ಒಪ್ಪಿ ಮದುವೆ ಮಾಡಿದ್ದರು.
ಆದರೆ ಕಳೆದ ಕೆಲ ವರ್ಷಗಳ ನಂತರ ಚಿರಂಜೀವಿ ತನ್ನ ಪತ್ನಿಯ ಮೇಲೆ ಅನುಮಾನ ವ್ಯಕ್ತಪಡಿಸಿ ಪದೇ ಪದೆ ಕಿರುಕುಳ ನೀಡಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ, ಪತ್ನಿಯ ಹೆತ್ತವರ ಬಗ್ಗೆಯೂ ಕೆಟ್ಟದಾಗಿ ಬೈದಿದ್ದಾನೆ. ಹಲವು ಬಾರಿ ಪತಿ-ಪತ್ನಿಯ ಜಗಳ ಇತ್ಯರ್ಥಪಡಿಸಿದ್ದ ಕುಟುಂಬವು ಇವರ ಜಗಳಕ್ಕೆ ಬೇಸತ್ತಿತ್ತು. ಕಳೆದ ತಿಂಗಳ ಹಿಂದಷ್ಟೇ ಪತ್ನಿ ರೋಜಾ ತನ್ನ ಗಂಡನ ಕಿರುಕುಳಕ್ಕೆ ಬೇಸತ್ತು ಕೌಟುಂಬಿಕ ಕೋರ್ಟ್‌ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ಬುಧವಾರ ಮೊದಲ ವಿಚಾರಣೆಯಿತ್ತು. ಪತಿ-ಪತ್ನಿಗೂ ತಿಳಿವಳಿಕೆ ಹೇಳಲು ಮಧ್ಯಸ್ಥಿಕಾ ಕೊಠಡಿಯಲ್ಲಿ ಇರಿಸಲಾಗಿತ್ತು. ಆದರೆ ಪತಿ ಚಿರಂಜೀವಿ ಏಕಾಏಕಿ ತನ್ನ ಬಳಿ ಇದ್ದ ಬ್ಯಾಗ್‌ನಿಂದ ಬಾಟಲ್ ತೆಗೆದು ಪೆಟ್ರೋಲ್ ಅನ್ನು ಪತ್ನಿ ರೋಜಾ ಹಾಗೂ ಪತ್ನಿಯ ತಂದೆ-ತಾಯಿ ಮೇಲೆ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಪೆಟ್ರೋಲ್ ಸುರಿದಿದ್ದನ್ನು ಗಮನಿಸಿದ ವಕೀಲರು ಸೇರಿ ಸ್ಥಳೀಯರು ತಕ್ಷಣ ಆತನ ಕೈಯಿಂದ ಲೈಟರ್ ವಶಕ್ಕೆ ಪಡೆದು ದೊಡ್ಡ ಅವಘಡ ತಪ್ಪಿಸಿದ್ದಾರೆ.ಕೋರ್ಟ್ ಆವರಣದಲ್ಲಿ ಖಿನ್ನತೆಗೆ ಒಳಗಾದವರಂತೆ ವರ್ತಿಸಿದ ಪತಿಯನ್ನು ತಕ್ಷಣ ಪೊಲೀಸರು ವಶಕ್ಕೆ ಪಡೆದಿದ್ದು, ನಗರ ಠಾಣೆಯ ಪೊಲೀಸರು ಪತ್ನಿ ರೋಜಾ ಹಾಗೂ ಹೆತ್ತವರ ದೂರಿನ ಮೇರೆಗೆ ಪತಿ ಚಿರಂಜೀವಿ ವಿರುದ್ಧ ಕೊಲೆ ಯತ್ನದಡಿ ಪ್ರಕರಣ ದಾಖಲಿಸಿದ್ದಾರೆ.