ಹೈದರಾಲಿ ರಸ್ತೆಯಲ್ಲಿ ಮರಗಳ ಹನನಕ್ಕೆ ಖಂಡನೆ

KannadaprabhaNewsNetwork | Published : Apr 21, 2025 12:48 AM

ಸಾರಾಂಶ

ರಿಸರ ಪ್ರೇಮಿಗಳು ಅಭಿವೃದ್ಧಿಯ ವಿರೋಧಿಗಳಲ್ಲ, ಅಭಿವೃದ್ಧಿ ಪರಿಸರ ಸಂರಕ್ಷಣೆಯೊಂದಿಗೆ ಮಾಡಿ ಎನ್ನುವುದು ನಮ್ಮ ಅಗ್ರಹ.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಹೈದರಾಲಿ ರಸ್ತೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಇತ್ತೀಚಿಗೆ 40 ಹೆಚ್ಚು ಮರಗಳ ಹನನ ಮಾಡಿರುವ ಕೃತ್ಯವನ್ನು ಖಂಡಿಸಿ ಟೀಂ ಮೈಸೂರು ತಂಡದವರು ಭಾನುವಾರ ಪ್ರತಿಭಟಿಸಿದರು.

ಈ ವೇಳೆ ತಂಡದ ಮನೋಹರ್ ಅವರು ಮರವು ತನ್ನನ್ನು ಕಡಿದಾಗ ವೇದಿಸುತ್ತಿರುವ ಹಾಗೂ ಇದಕ್ಕೆ ಕಾರಣರಾದ ಕಾರ್ಯಾಂಗ ಹಾಗೂ ಶಾಸಕಾಂಗವನ್ನು ತಮ್ಮ ಕೈ ಕುಂಚದ ಮುಖಾಂತರ ರಸ್ತೆಯಲ್ಲಿ ಚಿತ್ರಬಿಡಿಸುವ ಮೂಲಕ ವನದೇವಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ನಂತರ ತಂಡದ ಗೋಕುಲ್ ಗೋವರ್ಧನ್ ಮಾತನಾಡಿ, ಪರಿಸರ ಪ್ರೇಮಿಗಳು ಅಭಿವೃದ್ಧಿಯ ವಿರೋಧಿಗಳಲ್ಲ, ಅಭಿವೃದ್ಧಿ ಪರಿಸರ ಸಂರಕ್ಷಣೆಯೊಂದಿಗೆ ಮಾಡಿ ಎನ್ನುವುದು ನಮ್ಮ ಅಗ್ರಹ. ಇಲ್ಲಿ ರಸ್ತೆ ವಿಸ್ತರಣೆಯನ್ನು ಮರಗಳನ್ನು ಉಳಿಸಿಕೊಂಡು ಮಾಡಬಹುದಿತ್ತು. ಆದರೆ, ನಿಮಗೆ ಪರಿಸರದ ಬಗ್ಗೆ ಕಾಳಜಿ ಇಲ್ಲ ಎಂದು ಕಿಡಿಕಾರಿದರು.

ನಗರದಲ್ಲಿ ಅನೇಕ ರಸ್ತೆಗಳು ವಿಸ್ತರಣೆ ಆಗಬೇಕಿದೆ. ಆದರೆ, ಅಧಿಕಾರಿಗಳು ಅವುಗಳನ್ನು ಮಾಡುವುದಿಲ್ಲ. ಹೈದರಾಲಿ ರಸ್ತೆಯಲ್ಲಿದ್ದ ಮರಗಳನ್ನು ಕಡಿಯುವ ಮೂಲಕ ಮರಗಳಲ್ಲಿ ಆಶ್ರಯ ಪಡೆದಿದ್ದ ಪಕ್ಷಿಗಳು ಮೇಲೆ ಗದಾಪ್ರಹಾರ ಮಾಡಲಾಗಿದೆ. ಮುಂದಾದರೂ ಅಧಿಕಾರಿಗಳು ಈ ಪರಿಸರ ಸಂರಕ್ಷಸಿ ಅಭಿವೃದ್ಧಿ ಮಾಡಿ ಎಂದು ಆಗ್ರಹಿಸಿದರು.

ಆದಿತ್ಯ ಆಸ್ಪತ್ರೆಯ ಡಾ. ಚಂದ್ರಶೇಖರ್ ಮಾತನಾಡಿ, ಈ ರೀತಿಯಲ್ಲಿ ಮರಗಳ ಮಾರಣಹೋಮ ಮಾಡಿರುವುದು ಸರಿಯಲ್ಲ. ತಂತ್ರಜ್ಞಾನ ಬಳಿಸಿ ಅವುಗಳನ್ನ ಸಂರಕ್ಷಸಿಬಹುದಿತ್ತು. ಆದರೆ, ಅಧಿಕಾರಿಗಳು ಯಾವುದೋ ಒತ್ತಡಕ್ಕೆ ಮಣಿದು ಈ ರೀತಿ ಮಾಡಿರುವುದು ಸರಿಯಲ್ಲ ಎಂದು ಖಂಡಿಸಿದರು.

ಟೀಂ ಮೈಸೂರು ತಂಡದ ಕಿರಣ್ ಜೈರಾಮ್ ಗೌಡ, ಅನಿಲ್ ಜೈನ್ , ಹಿರಿಯಣ್ಣ, ರಾಮ್ ಪ್ರಸಾದ್, ಮುರಳಿ, ಮನೋಹರ್, ವಸಂತ್ ಕುಮಾರ್, ಬಸವರಾಜು, ಆನಂದ್, ನವೀನ್, ಹೇಮಂತ್, ಬಾಲಕೃಷ್ಣ, ಸುನಿಲ್, ಮನೋಜ್, ಗೋವಿತ್ ಕಿರಣ್, ಮೂರ್ತಿ, ಮಂಜು, ಹರೀಶ್, ಧರ್ಮೇಂದ್ರ, ತಿಲಕ್, ಸ್ವರೂಪ್, ಅಭಿಷೇಕ್, ತ್ರಿಮೂರ್ತಿ, ಸಹನಾ, ಸುಕೃತಾ, ಕಲ್ಯಾಣಿ, ವರ್ಷಿಣಿ, ಅಹ್ಮದ್ ಮೊದಲಾದವರು ಇದ್ದರು.

Share this article