ಕನ್ನಡಪ್ರಭ ವಾರ್ತೆ ಶಿರಾ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅವಿಭಾಜ್ಯ ಅಂಗವಾಗಿರುವ ಶಿರಾ ತಾಲೂಕಿಗೆ ಭೇಟಿ ನೀಡಿ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಹೆಚ್ಚಿನ ಉತ್ಸಾಹದಿಂದ ಕೆಲಸ ಮಾಡಲು ಬಂದಿದ್ದೇನೆ. ಪಕ್ಷ ಟಿಕೆಟ್ ನೀಡಿದರೆ ಖಂಡಿತ ಸ್ಪರ್ಧೆ ಮಾಡುತ್ತೇನೆ. ನರೇಂದ್ರ ಮೋದಿಯವನ್ನು ಮೂರನೇ ಬಾರಿಗೆ ಪ್ರಧಾನಿಗಳನ್ನಾಗಿ ನೋಡಬೇಕೆಂಬುದು ನಮ್ಮ ಆಸೆಯಾಗಿದೆ ಎಂದು ಮಾಜಿ ಸಂಸದರಾದ ಜನಾರ್ಧನ ಸ್ವಾಮಿ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರುರು. ಇಂದು ಭಾರತ ದೇಶ ವಿಶ್ವಮಟ್ಟದಲ್ಲಿ ಗುರುತಿಸುವ ರೀತಿಯಲ್ಲಿ ಅಭಿವೃದ್ಧಿ ಹೊಂದಿದೆ. ನರೇಂದ್ರ ಮೋದಿ 3ನೇ ಬಾರಿ ಪ್ರಧಾನಮಂತ್ರಿಯನ್ನಾಗಿ ಮಾಡಲು ಎಲ್ಲಾ ಬಿಜೆಪಿ ಕಾರ್ಯಕರ್ತರು ದೇಶಾದ್ಯಂತ ಕಂಕಣಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ. ಮೋದಿ ಪ್ರಧಾನಮಂತ್ರಿಯಾದ ನಂತರ ದೇಶದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 100 ವರ್ಷಗಳು ಆಗುವ ಸಂದರ್ಭದಲ್ಲಿ ಭಾರತದ ಆರ್ಥಿಕತೆಯನ್ನು 30 ಟ್ರಿಲಿಯನ್ ಡಾಲರ್ ದಾಟಬೇಕು. ದೇಶ ಈ ಸ್ಥಾನದಿಂದ ನಂಬರ್ ಒನ್ ಸ್ಥಾನಕ್ಕೆ ಹೋಗಬೇಕು ಎಂಬ ಉದ್ದೇಶದಿಂದ ಪ್ರಧಾನಿಯವರು ವಿಕಸಿತ ಭಾರತಕ್ಕಾಗಿ ತಮ್ಮ ಜೀವನ ಮುಡುಪಾಗಿಟ್ಟು ಕೆಲಸ ಮಾಡುತ್ತಿದ್ದಾರೆ. ಹಾಗೂ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ ಎಂದರು.ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ 2009ರಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿಯಿಂದ ನನ್ನನ್ನು ಗೆಲ್ಲಿಸಿದ್ದೀರಿ. ಆದ್ದರಿಂದ ಅಭಿವೃದ್ಧಿ ಪರ ಚಿಂತನೆ ಇಟ್ಟುಕೊಂಡು ನಾನು ಕೆಲಸ ಮಾಡಿದ್ದೆ. ಶಿರಾ ಭಾಗದಲ್ಲಿ ಸುಮಾರು ೫೦ ವರ್ಷಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದೆ. ನೀರಿನ ಸಮಸ್ಯೆ ನಿವಾರಣೆಗೆ ಅನೇಕ ಹೋರಾಟಗಾರರು, ರಾಜಕೀಯ ಮುಖಂಡರು, ಜನಪ್ರತಿನಿಧಿಗಳು, ಸ್ವಾಮೀಜಿಗಳು ಹೋರಾಟ ಮಾಡಿಕೊಂಡು ಬಂದಿದ್ದರು.ಆ ಸಂದರ್ಭದಲ್ಲಿ ಭದ್ರ ಮೇಲ್ದಾಂಡ ಯೋಜನೆ ಸುದ್ದಿಯಲ್ಲಿತ್ತು. ಆಗ ೨೦೦೮ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಭದ್ರ ಮೇಲ್ದಂಡೆ ಯೋಜನೆಗೆ ಅನುಮೋದನೆ ನೀಡಿದ್ದರು. ಶಿರಾ ತಾಲೂಕಿನ ಸುಮಾರು 40 ಕೆರೆಗೆ ನೀರು ಹರಿಸಲು ಅನುಮೋದನೆ ನೀಡಲಾಗಿತ್ತು. ಯಡಿಯೂರಪ್ಪ ಅವರು ಸುಮಾರು 24000 ಕೋಟಿ ರೂ. ಯೋಜನೆಗೆ, 30 ಟಿಎಂಸಿ ನೀರು ಹರಿಸುವ ಯೋಜನೆ ಅನುಮೋದನೆ ಕೊಟ್ಟು ಹಣವನ್ನು ನೀಡಿದ್ದರು ಎಂದರು
ಆಗ ಹಲವು ಅಡೆಗಡೆಗಳು ಬಂದವು ಪರಿಸರ ಇಲಾಖೆಯಿಂದ ಅನುಮೋದನೆ ಸಿಗಬೇಕಿತ್ತು. ಅಜ್ಜಂಪುರ ಬಳಿ ೭ ಕಿ.ಮೀ. ಸುರಂಗ ಮಾಡಬೇಕಾ ಗಿತ್ತು. ಇದೆಲ್ಲದರಲ್ಲೂ ನಮ್ಮ ಅವಧಿಯಲ್ಲಿ ಕಾಮಗಾರಿಯಲ್ಲೂ ಗಣನೀಯ ಪ್ರಗತಿ ಸಾಧಿಸಲಾಗಿತ್ತು. ಹಾಗೂ ತುಮಕೂರು-ದಾವಣಗೆರೆ ರೈಲು ಯೋಜನೆಯನ್ನು ೨೦೧೦-೧೧ರ ಕೇಂದ್ರ ಬಜೆಟ್‌ನಲ್ಲಿ ಅನುಮೋದನೆ ಮಾಡಲಾಗಿತ್ತು. ಅಂದು ರಾಜ್ಯದಲ್ಲಿ ಮುಖ್ಯಮಂತ್ರಿಗಳಾಗಿದ್ದ ಯಡಿಯೂ ರಪ್ಪ ಅವರು ಹಣ ನೀಡಲಾಗುವುದು ಎಂದು ಹೇಳಿದ್ದರು. ಆ ಕಾರಣದಿಂದ ರೈಲ್ವೆ ಯೋಜನೆಗೆ ಅಂದಿನ ಕೇಂದ್ರದ ಮನಮೋಹನ್ ಸಿಂಗ್ ಸರ್ಕಾರ ಅನುಮೋದನೆ ಕೊಟ್ಟಿತ್ತು. ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರೈಲ್ವೆ ಯೋಜನೆಗೆ ಹಣ ನೀಡದೆ ಭೂಮಿಯನ್ನು ನೀಡದ ಕಾರಣ ಯೋಜನೆ ಇಲ್ಲಿಯವರೆಗೂ ಪ್ರಾರಂಭವಾಗಿಲ್ಲ ಎಂದರು. ಹಿಂದುಳಿದ ಪ್ರದೇಶವೆಂದೇ ಹೆಸರು ಪಡೆದಿದ್ದ ಚಿತ್ರದುರ್ಗದಲ್ಲಿ ಡಿ.ಆರ್.ಡಿ.ಓ. ಸ್ಥಾಪನೆ ಮಾಡಲಾಗಿದೆ. ಡಿ.ಆರ್.ಡಿ.ಓ ದೇಶದ ೫ನೇ ಅತಿ ದೊಡ್ಡ ವಿಮಾನ ನಿಲ್ದಾಣ ಹೊಂದಿದೆ. ದೇಶದ ಅತ್ಯಂತ ಉನ್ನತ ಶಿಕ್ಷಣ ಸಂಸ್ಥೆ ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್.ಸಿ.)ಯನ್ನು ದೇಶದಲ್ಲಿ ಎರಡನೇಯದಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಮಾಡಿಸಲು ೧೫೦೦ ಎಕರೆ ಜಮೀನು ನೀಡಲಾಗಿದೆ. ಚಳ್ಳಕೆರೆಯಲ್ಲಿ ಇಸ್ರೋ ಚಂದ್ರಯಾನ-೩ ಯೋಜನೆಯನ್ನು ಪರೀಕ್ಷೆ ಮಾಡಿದೆ. ಹೀಗೆ ಕೇವಲ ಹಿಂದುಳಿದ ಕ್ಷೇತ್ರವಾಗಿದ್ದ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷ ಸಾಕಷ್ಟು ಕೊಡುಗೆ ನೀಡಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಯಲಿಯೂರು ಮಂಜುನಾಥ್, ಬಸವರಾಜು, ಹನುಮಂತನಾಯ್ಕ ಸೇರಿದಂತೆ ಹಲವರು ಹಾಜರಿದ್ದರು.