ಕನ್ನಡಪ್ರಭ ವಾರ್ತೆ ಮಂಡ್ಯ
ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿರುವ ಪಿಇಟಿ ಶಿಕ್ಷಣ ಸಂಸ್ಥೆ ಕಟ್ಟಿದ ನಿತ್ಯ ಸಚಿವ ಕೆ.ವಿ.ಶಂಕರಗೌಡರ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ನಾನೇ ಭಾಗ್ಯಶಾಲಿ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ರಾಜಪ್ಪ ದಳವಾಯಿ ಶ್ಲಾಘಿಸಿದರು.ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ನಿತ್ಯಸಚಿವ ಕೆ.ವಿ.ಶಂಕರಗೌಡ ತರಬೇತಿ ಮತ್ತು ಉದ್ಯೋಗ ಕೇಂದ್ರ ಸಭಾಂಗಣದಲ್ಲಿ ಜನತಾ ಶಿಕ್ಷಣ ಟ್ರಸ್ಟ್‌ನಿಂದ ನಿತ್ಯಸಚಿವ ಕೆ.ವಿ.ಶಂಕರಗೌಡರ 109ನೇ ಜನ್ಮದಿನಾಚರಣೆ ಅಂಗವಾಗಿ ಸೋಮವಾರ ಆಯೋಜಿಸಿದ್ದ 2024ನೇ ಸಾಲಿನ ರಾಜ್ಯ ಮಟ್ಟದ ಕೆ.ವಿ.ಶಂಕರಗೌಡ ಮತ್ತು ಕೆ.ಎಸ್.ಸಚ್ಚಿದಾನಂದ ರಂಗಭೂಮಿ ಮತ್ತು ಸಮಾಜ ಸೇವಾ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ರಂಗಭೂಮಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಒಬ್ಬ ಕವಿ ಬರೆದಿರುವ ಹಾಗೆ ಮೂರು ಗಜದ ಟೇಪಿನಲ್ಲಿ ಅಳೆಯ ಬಹುದೇ ಆಕಾಶವ ಎನ್ನುವ ಮಾತಿನಷ್ಟೇ ಅದ್ಭುತವಾದ ಜೀವನ ಶಂಕರಗೌಡರದ್ದು. ಎಂಜಿನಿಯರ್ ಕಾಲೇಜಿನ್ನು ಕಟ್ಟಲು ಎಷ್ಟು ಕಷ್ಟ ಪಟ್ಟಿದ್ದಾರೆ ಎನ್ನುವುದು ಸಹ ಇದರಲ್ಲಿದೆ. ಬಿಎ, ಬಿಎಸ್ಸಿ, ಬಿಇಡಿ ಸೇರಿದಂತೆ ಶೈಕ್ಷಣಿಕವಾಗಿ ಯಾವ ಕೋರ್ಸ್‌ನ್ನು ತೆರೆದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂಬುದನ್ನು ನೋಡಿಕೊಂಡೇ ಇಷ್ಟು ದೊಡ್ಡ ಮಟ್ಟದಲ್ಲಿ ಸಂಸ್ಥೆ ಕಟ್ಟಿದ್ದಾರೆ. ಇದನ್ನು ಯಾರು ಮರೆಯಲು ಸಾಧ್ಯವಿಲ್ಲ ಎಂದರು.ಸಮಾಜ ಸೇವಾ ಪ್ರಶಸ್ತಿಯನ್ನು ಹಂಚಿಕೊಂಡ ಡಾ.ಟಿಪ್ಪುಸುಲ್ತಾನ್ ಅವರ ಜೊತೆ ನಾನು ಸಹ ಪ್ರಶಸ್ತಿ ಹಂಚಿಕೊಂಡಿದ್ದು ಸುಂದರ ಕ್ಷಣವಾಗಿದೆ. ಕೆ.ವಿ.ಶಂಕರಗೌಡರ ನಾಟಕವನ್ನು ಬರೆಯಲು ಹೋದಾಗ ಹತ್ತು ನಾಟಕಗಳನ್ನು ಬರೆಯುವಷ್ಟು ಮಾಹಿತಿ ಸಿಕ್ಕಿತು. ಆದರೆ, ಒಂದು ನಾಟಕಕ್ಕೆ ಹೇಗೆ ಬರೆಯುವುದು ಎಂಬ ಸ್ಥಿತಿ ನನಗೆ ಬಂದಿತ್ತು. ನನ್ನ ಮೇಲೆ ನಂಬಿಕೆ ಇಟ್ಟಿದ್ದ ಪ್ರೊ.ಜಯಪ್ರಕಾಶಗೌಡರು ಹೇಳಿದ ಮಾತು ಉಳಿಸಿಕೊಳ್ಳುತ್ತೇನೋ ಎಂಬ ಭಯ ಆವರಿಸಿತ್ತು ಎಂದರು.
ಕನ್ನಡ ಭಾಷೆಗೆ ದೊಡ್ಡ ಶಕ್ತಿ, ಸಾವಿರಾರು ವರ್ಷಗಳ ಇತಿಹಾಸವಿದೆ. ಜೈನರು, ವೀರಶೈವ ಸಾಹಿತ್ಯ, ಶರಣರ ಸಾಹಿತ್ಯ, ದಾಸ ಸಾಹಿತ್ಯ, ಆಧುನಿಕ ಸಂದರ್ಭದಲ್ಲಿ ರಾಜಾಶ್ರಿತರು ಹೀಗೆ ಹಲವು ಆಯಾಮಾಗಳಲ್ಲಿ ಕನ್ನಡ ಎನ್ನುವುದು ತೆರೆದುಕೊಳ್ಳುತ್ತದೆ ಎಂದು ವಿವರಿಸಿದರು.ಸಮಾಜ ಸೇವಾ ಪ್ರಶಸ್ತಿ ಸ್ವೀಕರಿಸಿದ ನಾಗಮಂಗಲ ತಾಲೂಕಿನ ಹೊನ್ನಾವರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಟಿಪ್ಪು ಸುಲ್ತಾನ್, ನಾನು ಕನ್ನಡ ಮಾಧ್ಯಮದಲ್ಲೇ ಓದಿದ್ದೇನೆ. ಎಂಬಿಬಿಎಸ್ ಪ್ರವೇಶ ಪಡೆದು ಸರ್ಕಾರಿ ಕೆಲಸ ಸಿಕ್ಕಿರುವುದು, ಈಗ ಶಂಕರಗೌಡರ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ಕನ್ನಡ ಭಾಷೆಯಿಂದಲೇ ಕಾರಣ ಎಂದರು.
ಸರ್ಕಾರಿ ಆಸ್ಪತ್ರೆಗೆ ದೂರದ ಊರಿನಿಂದ ಬಡವರು ಬರುತ್ತಾರೆ. ನಾವು ಕೆಲಸ ಮಾಡುತ್ತಿರುವಾಗ ಒಂದು ಅನುಭವ ಆಗಿದೆ. ಸರ್ಕಾರಿ ಕೆಲಸ ಸಿಕ್ಕಿದರೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉನ್ನತೀಕರಿಸುವ ಆಲೋಚನೆ ಬಂತು. ಯಾವುದೇ ವೈದ್ಯರು ಗ್ರಾಮೀಣ ಭಾಗದ ರೋಗಿಗಳನ್ನು ಮುಟ್ಟಿ ಮಾತನಾಡಿಸಿ ಚಿಕಿತ್ಸೆ ನೀಡಿದರೆ ಆ ರೋಗಿಯ ಅರ್ಧ ರೋಗ ವಾಸಿಯಾಗುತ್ತದೆ. ಆಯುಷ್ಮಾನ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಿಂದ ಅನುದಾನ ಬರುತ್ತದೆ. ಅದನ್ನು ಆಸ್ಪತ್ರೆಗೆ ಸೌಲಭ್ಯಕೆ ಏಕೆ ಬಳಸಿಕೊಳ್ಳಬಾರದು ಎಂದರು.ಖಾಸಗಿ ಆಸ್ಪತ್ರೆ ಅಥವಾ ಕ್ಲಿನಿಕ್‌ಗಳಿಗಿಂತ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚು ಸೌಲಭ್ಯ ಸಿಗುವ ಹಾಗೆ ಮಾಡಲು ಗ್ರಾಪಂ, ಅಧಿಕಾರಿಗಳು, ನಮ್ಮ ಸಿಬ್ಬಂದಿ ಹಾಗೂ ಗ್ರಾಮಸ್ಥರ ಸಹಾಯದಿಂದ ಉನ್ನತೀಕರಿಸಿರುವೆ. ಆಸ್ಪತ್ರೆಗೆ ಮೊದಲು 18 ರೋಗಿಗಳು ಬರುತ್ತಿದ್ದರು. ಈಗ 120 ರೋಗಿ ಬರುತ್ತಿದ್ದಾರೆ ಎಂದರು.
ಇದೇ ವೇಳೆ ರಾಜ್ಯ ಮಟ್ಟದ ಕೆ.ವಿ.ಶಂಕರಗೌಡ ಮತ್ತು ಕೆ.ಎಸ್.ಸಚ್ಚಿದಾನಂದ ರಂಗಭೂಮಿ ಪ್ರಶಸ್ತಿಯನ್ನು ನಿವೃತ್ತ ಪ್ರಾಧ್ಯಾಪಕ ರಾಜಪ್ಪ ದಳವಾಯಿ, ಸಮಾಜ ಸೇವಾ ಪ್ರಶಸ್ತಿಯನ್ನು ಡಾ.ಟಿಪ್ಪು ಸುಲ್ತಾನ್ ಅವರಿಗೆ ತಲಾ 25 ಸಾವಿರ ರು ನಗದು ಹಾಗೂ ಫಲಕದೊಂದಿಗೆ ಪ್ರದಾನ ಮಾಡಲಾಯಿತು.ಸಮಾರಂಭದಲ್ಲಿ ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‌ನ ಕಾರ್ಯದರ್ಶಿ ಎಸ್.ಎಲ್. ಶಿವಪ್ರಸಾದ್, ನಿರ್ದೇಶಕ ರಾಮಲಿಂಗಯ್ಯ, ಪ್ರಾಂಶುಪಾಲರಾದ ಡಿ.ವಿ.ಸುವರ್ಣಾ, ಉಪನ್ಯಾಸಕರಾದ ವೀರೇಶ್, ನಂದೀಶ್ ಭಾಗವಹಿಸಿದ್ದರು.