ಕನ್ನಡಪ್ರಭ ವಾರ್ತೆ ಬೆಳಗಾವಿ
ಚನ್ನಮ್ಮನ ಕಿತ್ತೂರು ಉತ್ಸವದಲ್ಲಿ ಸಮಯದ ವಿಚಾರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರ ಜೊತೆಗೆ ವಾಗ್ವಾದ ನಡೆಸಿದ್ದು ನಿಜ. ಭಾಷೆ ವಿಚಾರವಾಗಿ ಅಲ್ಲ. ನಾನು ಕನ್ನಡ ವಿರೋಧಿಯಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಸ್ಪಷ್ಟಪಡಿಸಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾನಪದ ಗಾಯಕರಾದ ಬಾಳು ಬೆಳಗುಂದಿ ಮತ್ತು ಹನುಮಂತ ಲಮಾಣಿ ಅವರ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಸಮಯದಲ್ಲಿ ವ್ಯತ್ಯಾಸ ಆಗಿತ್ತು. ಹಾಗಾಗೀ, ಸಮಯದ ವೇಳಾಪಟ್ಟಿಯಂತೆ ಅನ್ಯ ಭಾಷಿಕರಿಗೆ ಅವಕಾಶ ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗೆ ಹೇಳಿದ್ದೇನೆ. ಆದರೆ, ಕನ್ನಡ ಮತ್ತು ಅನ್ಯ ಭಾಷೆ ವಿಚಾರವಾಗಿ ವಾಗ್ವಾದ ಮಾಡಿದ್ದೇನೆ ಎನ್ನುವುದು ತಪ್ಪು ಎಂದು ಹೇಳಿದರು.
ಮೂರು ದಿನಗಳಿಂದ ಪೊಲೀಸ್ ಸಿಬ್ಬಂದಿ ಕರ್ತವ್ಯದ ಮೇಲಿದ್ದರು. ಹಾಗಾಗೀ ಅವರನ್ನು ಬೇಗನೆ ಕರ್ತವ್ಯದಿಂದ ಬಿಡುಗಡೆಗೊಳಿಸುವ ಹಿನ್ನೆಲೆಯಲ್ಲಿ ಸಮಯದ ಪಟ್ಟಿಯಂತೆ ಆಯಾ ಕಲಾವಿದರಿಗೆ ಅವಕಾಶ ನೀಡುವಂತೆ ಹೇಳಿದೆ. ಕನ್ನಡ ಅಧಿಕಾರಿಯಾದ ನನಗೂ ಕನ್ನಡದ ಬಗ್ಗೆ ಅಭಿಮಾನವಿದೆ. ಅನವಶ್ಯಕವಾಗಿ ಭಾಷಾ ವಿಚಾರ ತಂದಿರುವುದು ಸರಿಯಲ್ಲ. ಒಂದು ವೇಳೆ ಇದನ್ನು ಅನವಶ್ಯಕವಾಗಿ ಭಾಷಾ ವಿಚಾರ ಎಳೆದು ತಂದರೆ, ಅಂತಹವರ ವಿರುದ್ಧ ವೈಯಕ್ತಿಕವಾಗಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಎಚ್ಚರಿಕೆ ನೀಡಿದರು.ಕಿತ್ತೂರು ಉತ್ಸವವನ್ನು ರಾಷ್ಟ್ರವ್ಯಾಪಿ ಮಾಡಬೇಕೆಂದರೆ ನಮ್ಮ ಭಾಷೆ, ಸಂಸ್ಕೃತಿಯನ್ನು ಬೇರೆಯವರಿಗೆ ಕಲಿಸಬೇಕಾಗುತ್ತದೆ. ಬೇರೆಯವರ ಸಂಸ್ಕೃತಿಯನ್ನು ನಾವು ಕಲಿಯಬೇಕಾಗುತ್ತದೆ. ಅನ್ಯ ಭಾಷಿಕ ಕಲಾವಿದರೆ ಕಿತ್ತೂರು ಉತ್ಸವ ನೋಡಿ ಅಭಿಮಾನ ವ್ಯಕ್ತಪಡಿಸಿದ್ದಾರೆ. ನಾಡು, ನುಡಿ ಬಗ್ಗೆ ಎಲ್ಲೆಡೆ ಪ್ರಚಾರ ಆಗಬೇಕೆಂದರೆ ಅನ್ಯ ಭಾಷಿಕರು ಸೇರಿದಂತೆ ಎಲ್ಲ ಕಲಾವಿದರಿಗೂ ಗೌರವ ಕೊಡಬೇಕಾಗುತ್ತದೆ ಎಂದು ಹೇಳಿದರು.
ಕಲಾವಿದರು ಸಾಂಸ್ಕೃತಿಕ ರಾಯಭಾರಿಗಳು. ಅವರಿಗೆ ಗೌರವ ಕೊಡಬೇಕಾಗುತ್ತದೆ. ಹಾಗೇ ನೋಡಿದರೆ ಕಿತ್ತೂರು ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಎರಡ್ಮೂರು ಕಲಾವಿದರಷ್ಟೇ ಅನ್ಯ ಭಾಷಿಕರಿದ್ದರು. ಆದರೆ, ಕನ್ನಡ ಅಧಿಕಾರಿ ವಿರುದ್ಧ ಕನ್ನಡ ವಿರೋಧಿ ಪಟ್ಟ ಕಟ್ಟಲಾಗುತ್ತಿದ್ದು, ಇದು ಖೇದಕರ ಸಂಗತಿಯಾಗಿದೆ. ಕನ್ನಡ ನಾಡು, ನುಡಿಗೆ ನಾವು ಗೌರವ ಕೊಡಲೇಬೇಕು. ಇದು ನಮ್ಮ ಕರ್ತವ್ಯ ಎಂದು ಹೇಳಿದರು.