ಹರಪನಹಳ್ಳಿ: ನಾನು ಶ್ರೇಷ್ಠ, ನನ್ನದು ಶ್ರೇಷ್ಠ ಎಂದು ಹೇಳಿಕೊಳ್ಳುವವ ಹಿಂದೂ ಆಗಲು ಸಾಧ್ಯವಿಲ್ಲ ಎಂದು ಕರ್ನಾಟಕ ರಾಜ್ಯ ದೇವಾಲಯ ಸಂವರ್ಧನಾ ಸಮಿತಿ ಸಂಯೋಜಕ ಮನೋಹರ ಮಠದ ಹೇಳಿದರು.
ಇಲ್ಲಿಯ ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಾರತದ ಆತ್ಮವೆಂದರೆ ಸನಾತನ ಹಿಂದೂ ಧರ್ಮ. ಸಾವಿರಾರು ವರ್ಷಗಳಿಂದ ಮಾನವತೆಯನ್ನು ದಾರಿ ತೋರಿಸಿದ ಧರ್ಮ ಇದು. ವಸುದೈವ ಕುಟುಂಬಕಂ ಎಂಬ ಮಹಾಮಂತ್ರವನ್ನು ಜಗತ್ತಿಗೆ ನೀಡಿದ ನಮ್ಮ ಧರ್ಮ ಸರ್ವರಲ್ಲೂ ಒಂದೇ ಚೈತನ್ಯವಿದೆ ಎಂಬ ಸಂದೇಶವನ್ನು ಸಾರಿದೆ ಎಂದು ಹೇಳಿದರು.
ಹಿಂದೂ ಧರ್ಮ ಕೇವಲ ಪೂಜಾ ವಿಧಾನವಲ್ಲ; ಅದು ಜೀವನ ವಿಧಾನ. ಸತ್ಯ, ಅಹಿಂಸೆ, ತ್ಯಾಗ, ಸಹಿಷ್ಣುತೆ ಮತ್ತು ಕರುಣೆ ಇವೇ ನಮ್ಮ ಸಂಸ್ಕಾರದ ಆಧಾರಸ್ತಂಭಗಳು. ಕಾಲಕ್ರಮೇಣ ವಿಭಿನ್ನ ಮತ-ಪಂಥಗಳು ಉದಯವಾದರೂ ಎಲ್ಲರನ್ನೂ ಅಪ್ಪಿಕೊಂಡು ಸಾಗಿದ ಸನಾತನ ಧರ್ಮದ ವಿಶಾಲತೆ ಅಪಾರ ಎಂದು ನುಡಿದರು.ಎಲ್ಲರೂ ಜಾತಿ- ಭೇದ ಮರೆತು ಧರ್ಮದ ಮೂಲ ಮೌಲ್ಯಗಳೊಂದಿಗೆ ಒಗ್ಗಟ್ಟಾಗಿ ನಡೆಯೋಣ. ಸನಾತನ ಧರ್ಮದ ಬೆಳಕು ಸದಾ ನಮ್ಮ ಬದುಕನ್ನು ದೀಪಿಸುವಂತೆ ಮಾಡೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿಂದೂ ಸಮಿತಿಯ ಅಧ್ಯಕ್ಷ ರಾಮನಗೌಡ ಪಾಟೀಲ್, ಉಪಾಧ್ಯಕ್ಷ ಕೆ.ಸಿ. ಗಂಗಾಧರ ವೇದಿಕೆಯಲ್ಲಿ ಆಸೀನರಾಗಿದ್ದರೆ ಮಾಜಿ ಶಾಸಕ ಜಿ.ಕರುಣಾಕರ ರೆಡ್ಡಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ, ಬಿಜೆಪಿ ಮುಖಂಡರಾದ ಆರುಂಡಿ ನಾಗರಾಜ, ಜಿ.ನಂಜನಗೌಡ, ಬಿಜೆಪಿ ಮಂಡಲ ಅಧ್ಯಕ್ಷ ಯಡಿಹಳ್ಳಿ ಶೇಖರಪ್ಪ, ವಿಎಚ್‌ಪಿಯ ಎಚ್.ಎಂ. ಜಗದೀಶ, ಶಿರಗಾನಹಳ್ಳಿ ವಿಶ್ವನಾಥ, ಆರ್.ಲೋಕೇಶ, ಮುತ್ತಿಗೆ ವಾಗೀಶ, ಕೃಷ್ಣಮೂರ್ತಿ, ಮಂಜುನಾಥ ಇಜಂತಕರ್, ಮುದುಕನವರ್ ಶಂಕರ ಇದ್ದರು.