ಮಡಿಕೇರಿ: ದೇಶದಲ್ಲಿ ಉತ್ಸವ, ಸಮಾವೇಶ ನಡೆಯುತ್ತಲೇ ಇರುತ್ತದೆ. ಆಚರಣೆಯಲ್ಲಿ ವಿಭಿನ್ನತೆಯೂ ಇರುತ್ತದೆ. ಆದರೆ, ಭಾರತಾಂಬೆ ಇದ್ದರೆ ಮಾತ್ರ ಹಿಂದುತ್ವ ಪೋಷಣೆಯಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗೀಯ ಸಾಮರಸ್ಯ ವಿಭಾಗದ ಸಹಸಂಯೋಜಕ ಶಿವಪ್ರಸಾದ್ ಮಲೆಬೆಟ್ಟು ಹೇಳಿದರು.ಮಡಿಕೇರಿ ನಗರ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಶನಿವಾರ ವಿರಾಟ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲೆಲ್ಲೂ ಕೇಸರಿ..: ನಗರದ ಎಲ್ಲೆಲ್ಲೂ ಕೇಸರಿ ಬಣ್ಣ ರಾರಾಜಿಸಿತು. ಪಂಚ ಪರಿವರ್ತನೆಯ ಧ್ಯೇಯೋದ್ದೇಶದೊಂದಿಗೆ ಎಲ್ಲೆಡೆ ವಿರಾಟ ಹಿಂದೂ ಸಂಗಮ ಕಾರ್ಯಕ್ರಮ ನಡೆಯುತ್ತಿದ್ದು, ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಶನಿವಾರ ಬೃಹತ್ ಕಾರ್ಯಕ್ರಮ ನಡೆಯಿತು. ನಗರದ ನಾಲ್ಕು ದಿಕ್ಕುಗಳಲ್ಲಿ ಏಕ ಕಾಲದಲ್ಲಿ ಸಭೆ ನಡೆಸಿ ಮೆರವಣಿಗೆ ಮೂಲಕ ತೆರಳಿ ಗಾಂಧಿ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳುವಂತಾಗಲು ನಗರದ ವಿವಿಧ ವಾರ್ಡ್‌ಗಳನ್ನೊಳಗೊಂಡು ನಾಲ್ಕು ವಿಭಾಗಗಳನ್ನಾಗಿ ಮಾಡಿ ಅದಕ್ಕೆ ವಸತಿ ಎಂದು ಹೆಸರಿಸಲಾಗಿತ್ತು. ಅಭಿಮನ್ಯು ವಸತಿ, ಛತ್ರಪತಿ, ಅಶ್ವಿನಿ ಹಾಗೂ ಸಮರ್ಥ ವಸತಿ ಎಂದು ನಾಮಕರಣ ಮಾಡಲಾಗಿತ್ತು. ನಗರದ ನಾಲ್ಕೂ ದಿಕ್ಕುಗಳಿಂದ ಹಳೆ ಖಾಸಗಿ ಬಸ್‌ನಿಲ್ದಾಣಕ್ಕೆ ಮೆರವಣಿಗೆ ಮೂಲಕ ಆಗಮಿಸಿ ಇಲ್ಲಿ ಒಟ್ಟು ಸೇರಿ ನಂತರ ಕಾರ್ಯಕ್ರಮ ನಡೆದ ಗಾಂಧಿ ಮೈದಾನದ ತನಕ ಬೃಹತ್ ಮೆರವಣಿಗೆ ನಡೆಸಲಾಯಿತು.
ದೇಶದಲ್ಲಿ ಸಂಘಟನೆ ಕಾರಣಕ್ಕಾಗಿಯೇ 100 ವರ್ಷಗಳ ಹಿಂದೆ ಆರ್‌ಎಸ್‌ಎಸ್ ಆರಂಭಿಸಲಾಯಿತು. ಬೇರೆ ಬೇರೆ ಸಂಘಟನೆಗಳ ಪರಿಸ್ಥಿತಿ ಏನೇನೋ ಆಗಿದೆ. ಆದರೆ ಆರ್‌ಎಸ್‌ಎಸ್ ಸದೃಢವಾಗಿ ಬೆಳೆದು ನಿಂತಿದೆ. ಮನಸ್ಸಿನ ಒಳಗಿನ ಕೊಳೆ ಶುದ್ಧ ಮಾಡುವ ಕೆಲಸ ಇಂದು ಆಗಬೇಕಿದೆ. ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಎನ್ನುವ ಮಾನಸಿಕತೆ ಸೃಷ್ಟಿ ಆಗಬೇಕು.
- ಶಿವಪ್ರಸಾದ್ ಮಲೆಬೆಟ್ಟು, ಆರ್ ಎಸ್ ಎಸ್ ಮಂಗಳೂರು ವಿಭಾಗೀಯ ಸಾಮರಸ್ಯ ವಿಭಾಗದ ಸಹಸಂಯೋಜಕ