ಮುರುಡೇಶ್ವರ ಬಸ್ತಿಮಕ್ಕಿಯಲ್ಲಿ 12ನೇ ವರ್ಷದ ಪೌರಾಣಿಕ ಯಕ್ಷಗಾನ ಸಪ್ತಾಹಕ್ಕೆ ಚಾಲನೆ
ಮುರುಡೇಶ್ವರದ ಬಸ್ತಿಮಕ್ಕಿಯ ಶ್ರೀ ರಾಘವೇಶ್ವರಭಾರತೀ ಹವ್ಯಕ ಸಭಾ ಭವನದಲ್ಲಿ ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಗಾನ ಪ್ರತಿಷ್ಠಾನ ಗೋಳಿಕುಂಬ್ರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಶ್ರೀಪಾದ ಹೆಗಡೆ ಹಡಿನಬಾಳ ವೇದಿಕೆಯಲ್ಲಿ ಏರ್ಪಡಿಸಲಾಗಿದ್ದ ೧೨ನೇ ವರ್ಷದ ಪೌರಾಣಿಕ ಯಕ್ಷಗಾನ ಸಪ್ತಾಹ ಕಾರ್ಯಕ್ರಮವನ್ನು ವೇ.ಮೂ. ಗಜು ಭಟ್ಟ ಖರ್ವಾ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಯಕ್ಷಗಾನ ಇಂದಿಗೂ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಇದೊಂದು ಉತ್ತಮ ಕಲೆಯಾಗಿದ್ದು ಇದರಲ್ಲಿ ನೃತ್ಯ, ವೇಷ-ಭೂಷಣ, ಚಿತ್ರಕಲೆ, ಸಂಗೀತಗಳನ್ನೊಳಗೊಂಡ ಒಂದು ಪರಿಪೂರ್ಣವಾದ ಶಾಸ್ತ್ರೀಯ ಹಾಗೂ ಧಾರ್ಮಿಕ ಹಿನ್ನೆಲೆಯಿದೆ. ಇಂತಹ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಾಗರಾಜ ಮಧ್ಯಸ್ಥ ಅವರು ಕಳೆದ 12 ವರ್ಷಗಳಿಂದ ಯಕ್ಷಗಾನ ಸಪ್ತಾಹ ನಡೆಸಿಕೊಂಡು ಬರುತ್ತಿದ್ದು, ಇದು ಸುಲಭದ ಕೆಲಸವಲ್ಲ. ಅವರು ಯಕ್ಷಗಾನ ಕಲೆ ಉಳಿಸಿ ಬೆಳೆಸಲು ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ, ಯಕ್ಷಗಾನ ಕಲೆ ಎಲ್ಲರನ್ನೂ ಆಕರ್ಷಿಸುವ ಶಕ್ತಿ ಹೊಂದಿದ್ದರೂ, ಇಂದು ಯುವ ಜನರನ್ನು ತಲುಪುವಲ್ಲಿ ಸಾಧ್ಯವಾಗಿಲ್ಲ. ಯುವ ಜನರಿಗೆ ಯಕ್ಷಗಾನದ ಮಹತ್ವವನ್ನು ಅರಿವು ಮೂಡಿಸುವ ಕಾರ್ಯ ಆಗಬೇಕಾಗಿದೆ ಎಂದರು.