)
ರಾಮನಗರ: ನನ್ನ ಮೇಲೆ ವಿಶ್ವಾಸ ಇಟ್ಟು ಇಕ್ಬಾಲ್ ಹುಸೇನ್ ಅವರನ್ನು ಗೆಲ್ಲಿಸಿದ್ದೀರಿ. ಇಕ್ಬಾಲ್ ಹುಸೇನ್ ಹೆಸರಿಗೆ ಮಾತ್ರ, ರಾಮನಗರ ಕ್ಷೇತ್ರಕ್ಕೂ ನಾನೇ ಶಾಸಕ .ರಾಮನಗರ ಮತ್ತು ಹಾರೋಹಳ್ಳಿಯಲ್ಲಿ ಸೂರಿಲ್ಲದ ಜನರಿಗೆ ನಿವೇಶನ ನೀಡಲು ಸೂಚಿಸಿದ್ದೇನೆ. ಆ ಕೆಲಸವನ್ನು ಶೀಘ್ರದಲ್ಲಿಯೇ ಶಾಸಕ ಇಕ್ಬಾಲ್ ಹುಸೇನ್ ಮಾಡುತ್ತಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಕನಕಪುರದಲ್ಲಿ ಶೀಘ್ರದಲ್ಲಿಯೇ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುತ್ತೇನೆ. ನೀವು ಯಾರು ಬೆಂಗಳೂರು ಆಸ್ಪತ್ರೆಗೆ ಹೋಗಬಾರದು ಅಂತ ಮೆಡಿಕಲ್ ಕಾಲೇಜು ಮಾಡಲು ಹೊರಟಿದ್ದೇನೆ. ಆರೇಳು ವರ್ಷಗಳ ಹಿಂದೆಯೇ ಮೆಡಿಕಲ್ ಕಾಲೇಜಿಗೆ ಭೂಮಿ ಪೂಜೆ ಆಗಬೇಕಾಗಿತ್ತು. ಆದರೆ, ಯಡಿಯೂರಪ್ಪರವರ ಸರ್ಕಾರ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸಿದರು.
ಈಗ ನೀವೇ ಮೆಡಿಕಲ್ ಕಾಲೇಜು ಮಾಡುವ ಶಕ್ತಿ ಕೊಟ್ಟಿದ್ದೀರಿ. ಇಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾದರೆ ತುಮಕೂರು - ಬೆಂಗಳೂರು ಗ್ರಾಮಾಂತರ ಭಾಗದವರಿಗೂ ಅನುಕೂಲವಾಗುತ್ತದೆ. ಇಲ್ಲಿನ ಜನರು ಶಿಕ್ಷಣಕ್ಕಾಗಿ ಬೆಂಗಳೂರಿಗೆ ವಲಸೆ ಹೋಗುವುದನ್ನು ತಪ್ಪಿಸುತ್ತೇವೆ. ಉತ್ತಮ ವಿದ್ಯಾಭ್ಯಾಸ ಇಲ್ಲೇ ದೊರಕುವಂತೆ ಮಾಡುತ್ತೇವೆ ಎಂದರು.ಜಿಲ್ಲೆಯ ಜನರ ಬದುಕಿನಲ್ಲಿ ಬದಲಾವಣೆ ತರುತ್ತೇನೆ. ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡುತ್ತಿದ್ದೇವೆ. ಸಿಲ್ಕ್ ಮತ್ತು ಮಿಲ್ಕ್ ದೊಡ್ಡ ಶಕ್ತಿಯಾಗಿದ್ದು, ಯಾರೂ ವ್ಯವಸಾಹಯ ಮಾಡುವುದನ್ನು ಬಿಡಬೇಡಿ. ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ನೀಡಬೇಕೆಂದು ಕೈಗಾರಿಗಳಿಗೆ ಸ್ಪಷ್ಟ ನಿರ್ದೇಶನ ಕೊಡುತ್ತೇನೆ. ನೀವುಗಳು ಅಲ್ಲಿ ಯೂನಿಯನ್ ಮಾಡಿಕೊಂಡು ಪ್ರತಿಭಟನೆ ಮಾಡುವ ಹಾಗಿಲ್ಲ. ಅವರು ಕೊಟ್ಟ ಕೆಲಸವನ್ನು ಮಾಡಿಕೊಂಡು ಹೋಗಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ನನ್ನನ್ನು ಜೈಲಿಗೆ ಕಳುಹಿಸಿದಾಗ ನೀವು ನನಗಾಗಿ ಪ್ರಾರ್ಥನೆ ಮಾಡಿದಿರಿ, ಕಣ್ಣೀರು ಹಾಕಿದಿರಿ. ಇವತ್ತು ನಿಮ್ಮ ಆಶೀರ್ವಾದದಿಂದ ನಾಡಿನ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದೆ. ಸಾಕ್ಷಿ ಗುಡ್ಡೆ ಬಿಟ್ಟು ಹೋಗುವ ಕೆಲಸ ಮಾಡುತ್ತೇನೆ. ನಿಮ್ಮ ಆಶೀರ್ವಾದದಿಂದ 2028ರಲ್ಲು ಗೆಲ್ಲಬೇಕಿದೆ. ಆದ್ದರಿಂದ ನಾವು ಮುಂದಕ್ಕೂ ಒಗ್ಗಟ್ಟಾಗಿ ಕೆಲಸ ಮಾಡೋಣ.