ಹಾಸನಾಂಬೆ ದರ್ಶನ ಪಡೆದ ಎಚ್ಡಿಕೆ ದಂಪತಿ । ಕುಟುಂಬ ಸಮೇತ ಆಗಮನ
ಭಗವಂತ ನಮ್ಮಿಂದ ಒಳ್ಳೆ ಕೆಲಸ ಮಾಡಲು ಶಕ್ತಿ ಕೊಡು ಎಂದು ಕೇಳಿದ್ದೇನೆ. ಈ ಬಾರಿ ನನ್ನ ಮಗ ಚುನಾವಣೆಗೆ ನಿಂತಿದ್ದಾನೆ. ಕೆಲ ಕಾರಣಗಳಿಂದ ಕಳೆದ ಎರಡು ಬಾರಿ ಚುನಾವಣೆಯಲ್ಲಿ ಸೋತಿದ್ದನು. ಈ ಬಾರಿ ಚುನಾವಣೆಯಲ್ಲಿ ಗೆಲ್ಲಿಸುವಂತೆ ಹಾಸನಾಂಬೆಯಲ್ಲಿ ಬೇಡಿದ್ದೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಭಾನುವಾರ ಪತ್ನಿ ಅನಿತಾ ಕುಮಾರಸ್ವಾಮಿ, ಸೊಸೆ ರೇವತಿ ನಿಖಿಲ್ ಹಾಗೂ ಮೊಮ್ಮಗ, ಶಾಸಕ ಎಚ್‌ಪಿ.ಸ್ವರೂಪ್ ಜೊತೆಗೆ ಬಂದು ಅಧಿದೇವತೆ ಹಾಸನಾಂಬೆ ದೇವಿಯ ದರ್ಶನ ಪಡೆದು ಮಾತನಾಡಿದರು.ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹಾಸನಾಂಬೆ ಗರ್ಭಗುಡಿ ಬಾಗಿಲು ತೆರೆದು ನಾಡಿನ ಜನತೆಗೆ ವಿಶೇಷ ದರ್ಶನ ಕೊಡುತ್ತಿರುವುದನ್ನು ನಾವು ನೋಡಿದ್ದೇವೆ. ಈ ಬಾರಿ ಹಾಸನ ಜಿಲ್ಲಾಡಳಿತದಿಂದ ಉತ್ತಮವಾಗಿ ವ್ಯವಸ್ಥೆ ಕಲ್ಪಿಸಿ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದೆ. ಭಕ್ತರ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹಾಸನಾಂಬೆ ಪವಾಡವನ್ನು ನಾವು ಚಿಕ್ಕಮಕ್ಕಳಿಂದ ಗಮನಿಸಿದ್ದೇವೆ. ನಾನು ಚಿಕ್ಕವಯಸ್ಸಿನಲ್ಲಿ ಇದ್ದಾಗ ಇಲ್ಲಿ ಒಂದುವರೆ ತಿಂಗಳು ಜಾತ್ರೆ ನಡೆಯುತ್ತಿತ್ತು ಎಂದು ಸ್ಮರಿಸಿಕೊಂಡರು.
ಎಚ್.ಡಿ.ಕುಮಾರಸ್ವಾಮಿ ಅವರು ಮೊದಲು ಹಾಸನಾಂಬ ದೇವಿ ದರ್ಶನ ಪಡೆದು, ದರ್ಭಾರ್ ಗಣಪತಿ ನಂತರ ಶ್ರೀ ಸಿದ್ದೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಜಿಲ್ಲಾಡಳಿತದಿಂದ ಗೌರವ ಸ್ವೀಕರಿಸಿದರು.