ನಾನು ನುಡಿದಂತೆ ನಡೆದಿದ್ದೇನೆ: ಸಿದ್ದು

KannadaprabhaNewsNetwork |  
Published : May 29, 2026, 01:45 AM IST
ಸಿದ್ದುಗೆ ಡಿಕೆಶಿ ನಮನ | Kannada Prabha

ಸಾರಾಂಶ

‘ಹೈಕಮಾಂಡ್‌ ಸೂಚಿಸಿದ ತಕ್ಷಣ ಸ್ವಯಂಪ್ರೇರಿತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ರಾಜ್ಯಸಭೆಗೆ ಬರುವಂತೆ ನೀಡಿದ ಆಹ್ವಾನವನ್ನು ವಿನಮ್ರವಾಗಿ ತಿರಸ್ಕರಿಸಿದ್ದು, ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿ ಮುಂದುವರೆಯುತ್ತೇನೆ. ಕೊನೆ ಉಸಿರು ಇರುವವರೆಗೂ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

‘ಹೈಕಮಾಂಡ್‌ ಸೂಚಿಸಿದ ತಕ್ಷಣ ಸ್ವಯಂಪ್ರೇರಿತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ರಾಜ್ಯಸಭೆಗೆ ಬರುವಂತೆ ನೀಡಿದ ಆಹ್ವಾನವನ್ನು ವಿನಮ್ರವಾಗಿ ತಿರಸ್ಕರಿಸಿದ್ದು, ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿ ಮುಂದುವರೆಯುತ್ತೇನೆ. ಕೊನೆ ಉಸಿರು ಇರುವವರೆಗೂ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಗುರುವಾರ ಮಧ್ಯಾಹ್ನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್‌ ನಾಯಕರೊಂದಿಗೆ ಲೋಕಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಅವರು, ಬಳಿಕ ಸುದ್ದಿಗೋಷ್ಠಿ ನಡೆಸಿ ವಿದಾಯ ತಿಳಿಸಿದರು.

‘ನಾನೆಂದೂ ಅಧಿಕಾರ, ಹಣದ ಹಿಂದೆ ಬಿದ್ದವನಲ್ಲ. ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಆಸ್ತಿ ಪಾಸ್ತಿ ಮಾಡಿದವನಲ್ಲ. ಮಾತಿಗೆ ತಪ್ಪುವ ಕೆಲಸವನ್ನೂ ಎಂದೂ ಮಾಡಿಲ್ಲ. ಹೈಕಮಾಂಡ್‌ನವರು ಯಾವಾಗ ಸೂಚಿಸುತ್ತಾರೆಯೋ ಆಗ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ಮೊನ್ನೆ (ಮಂಗಳವಾರ) ಹೈಕಮಾಂಡಿನವರು ರಾಜೀನಾಮೆ ನೀಡುವಂತೆ ಸೂಚಿಸಿದರು. ಎರಡು ದಿನ ಸಮಯಾವಕಾಶ ಕೇಳಿ ಇಂದು ಸ್ವಯಂ ಪ್ರೇರಿತವಾಗಿ ರಾಜೀನಾಮೆ ಸಲ್ಲಿಸಿದ್ದೇನೆ’ ಎಂದು ಹೇಳಿದರು.

ನನ್ನನ್ನು ಜನರು ಐದು ವರ್ಷಗಳಿಗೆ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಹೀಗಾಗಿ 2028ರವರೆಗೂ ನಾನು ಸಕ್ರಿಯ ರಾಜಕಾರಣದಲ್ಲೇ ಮುಂದುವರೆಯುತ್ತೇನೆ. ನನ್ನ ಕೊನೆ ಉಸಿರು ಇರೋವರೆಗೂ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮಾಡುತ್ತೇನೆ. ಸಂವಿಧಾನಕ್ಕೆ ಯಾರೇ ಧಕ್ಕೆ ತಂದರೂ ಅದರ ವಿರುದ್ಧ ಹಾಗೂ ಜನರಿಗೆ ಸಮಾನ ಅವಕಾಶಗಳನ್ನು ಕೊಡಿಸಲು ಹೋರಾಡುತ್ತೇನೆ. ನೆಲ, ಜಲ, ಭಾಷೆ ವಿಚಾರವಾಗಿ ಎಂದಿಗೂ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ರಾಜ್ಯದ ಜನತೆಗೆ ಭರವಸೆ ನೀಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಸಂವಿಧಾನ ಇಲ್ಲದಿದ್ದರೆ ನಾನು ಏನೂ ಆಗುತ್ತಿರಲಿಲ್ಲ. ಸಂವಿಧಾನ ಇಲ್ಲದಿದ್ದರೆ ನಾನು ಎಲ್ಲಿಯೋ ಕುರಿ ಮೇಯಿಸಿಕೊಂಡೋ, ಹೊಲ ಉಳುಮೆ ಮಾಡಿಕೊಂಡೋ ಇರಬೇಕಾಗಿತ್ತು. ಸಂವಿಧಾನ ನನಗೆ ಅವಕಾಶಗಳನ್ನು ನೀಡಿದೆ. ಹೀಗಾಗಿ ಸಂವಿಧಾನದ ಪರವಾಗಿ ಹಾಗೂ ಸಂವಿಧಾನ ವಿರುದ್ಧ ಇರುವ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುತ್ತೇನೆ ಎಂದರು.

ರಾಷ್ಟ್ರ ರಾಜಕಾರಣದ ಆಸಕ್ತಿ ಇಲ್ಲ:

ಹೈಕಮಾಂಡಿನವರು ರಾಜ್ಯಸಭೆಗೆ ಹೋಗಿ ಎಂದು ಹೇಳಿದರು. ಆದರೆ, ನಾನು ಬಹಳ ವಿನಮ್ರವಾಗಿ ಹೋಗುವುದಿಲ್ಲ ಎಂದು ಹೇಳಿದ್ದೇನೆ. ರಾಷ್ಟ್ರ ರಾಜಕಾರಣದ ಬಗ್ಗೆ ನನಗೆ ಆಸಕ್ತಿ ಇಲ್ಲ. ನನ್ನನ್ನು ಜನ 5 ವರ್ಷಕ್ಕೆ ಆಯ್ಕೆ ಮಾಡಿದ್ದಾರೆ. ಅಲ್ಲಿಯವರೆಗೆ ನಾನು ಸಕ್ರಿಯ ರಾಜಕಾರಣದಲ್ಲೇ ಮುಂದುವರೆಯುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.ವರಿಷ್ಠರಿಗೆ ಧನ್ಯವಾದ:ನಾನು ಕಾಂಗ್ರೆಸ್‌ಗೆ ಸೇರಿದ್ದು 2006ರಲ್ಲಿ. ಕಳೆದ 20 ವರ್ಷಗಳಿಂದ ನನಗೆ ಹಲವು ಅವಕಾಶ ಒದಗಿಸಿಕೊಟ್ಟ ಪಕ್ಷದ ವರಿಷ್ಠರಾದ ಸೋನಿಯಾಗಾಂಧಿ, ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್‌ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಪಾರ ಧನ್ಯವಾದ ತಿಳಿಸುತ್ತಿದ್ದೇನೆ. ಜತೆಗೆ, ಕಳೆದ 20 ವರ್ಷದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ತೋರಿದ ವಿಶ್ವಾಸಕ್ಕೆ ಕೃತಜ್ಞತೆ ತಿಳಿಸುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.ಹೈಕಮಾಂಡ್‌ನಿಂದ ಮುಂದಿನ ಸಿಎಂ ಆಯ್ಕೆ:

ಮುಂದಿನ ಮುಖ್ಯಮಂತ್ರಿ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ‘ಅದನ್ನು ಶಾಸಕಾಂಗ ಪಕ್ಷದ ಸಭೆ ಹಾಗೂ ಹೈಕಮಾಂಡ್‌ ನಿರ್ಧಾರ ಮಾಡುತ್ತದೆ’ ಎಂದಷ್ಟೇ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಕ್ಷತೆ, ಪಾರದರ್ಶಕತೆ ಇದ್ದರೆ ಸಂಘಟನೆ ಪ್ರಗತಿ: ಮಲ್ಲಿಕಾರ್ಜುನ ಬಳ್ಳಾರಿ
ಫಾಸ್ಟ್‌ಫುಡ್‌ ಬದಲು ತರಕಾರಿ, ಹಣ್ಣು ದೇಹಕ್ಕೆ ಉತ್ತಮ