ಕನ್ನಡಪ್ರಭ ವಾರ್ತೆ ಕುಣಿಗಲ್
ಅವರು ಕುಣಿಗಲ್ ತಾಲೂಕಿನ ಯಡಿಯೂರು ಸೇರಿದಂತೆ ವಿವಿಧೆಡೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಇದೇ 26 ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಹಸ್ತದ ಗುರುತಿಗೆ ಮತ ಕೇಳಲು ಬಂದಿದ್ದೇನೆ. ನಾನು ಮಾಡಿರುವ ಕೆಲಸಕ್ಕೆ ಕೂಲಿ ಕೊಡಿ, ನೀವು ಮತ ಹಾಕಬೇಕು, ಬೇರೆಯವರಿಂದಲೂ ಹಾಕಿಸಬೇಕು ಎಂದರು.ಈ ಕ್ಷೇತ್ರ ಹಾಗೂ ತಾಲೂಕಿನ ಅಭಿವೃದ್ಧಿಗೆ ನಾನು ಶ್ರಮಿಸುವುದಾಗಿ ಮಾತು ನೀಡಿದ್ದೆ. ನೀವೆಲ್ಲರೂ ಬೋರ್ ವೆಲ್ ನೀರು ಕುಡಿಯುತ್ತಿದ್ದೀರಿ. ಅದರಿಂದ ಆರೋಗ್ಯ ಹಾಳಾಗುತ್ತಿತ್ತು. ನಾನು ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಿ ಅವರಿಗೆ ಶುದ್ಧ ನೀರು ಪೂರೈಸಿದ್ದೇನೆ. ಈ ಕಾರ್ಯಕ್ರಮವನ್ನು ದೇಶದಲ್ಲೇ ಮೊದಲು ರೂಪಿಸಿದ್ದು ನಾನು ಎಂದರು.
ಕರ್ನಾಟಕಕ್ಕೆ ಆಗುತ್ತಿರುವ ತೆರಿಗೆ ಅನ್ಯಾಯದ ವಿರುದ್ಧ ಹೋರಾಟ ಮಾಡಿದ್ದೇನೆ. ಬಿಜೆಪಿ ಸರ್ಕಾರ ರೈತರಿಗೆ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದರು. ಆದರೆ ಆ ಸರ್ಕಾರ ರೈತರಿಂದಲೇ ಜಿಎಸ್ ಟಿ ವಸೂಲಿ ಮಾಡುತ್ತಿದೆ. ಜನ ಸಾಮಾನ್ಯರು ಬಳಸುವ ಎಲ್ಲಾ ಅಗತ್ಯ ವಸ್ತುಗಳ ಮೇಲೆ ಜಿಎಸ್ ಟಿ ಹಾಕಿ ನಿಮ್ಮ ಜೀವನ ದುಬಾರಿ ಮಾಡಿದ್ದಾರೆ. ಇದು ಬಿಜೆಪಿ ಹಾಗೂ ಮೋದಿ ಸರ್ಕಾರದ ಸಾಧನೆ ಎಂದು ವ್ಯಂಗ್ಯವಾಡಿದರು.
ನಾವು ಕಾಂಗ್ರೆಸಿಗರಿಗೆ ಮಾತ್ರವಲ್ಲ, ಬಿಜೆಪಿ, ಜೆಡಿಎಸ್ ಸೇರಿ ಎಲ್ಲರಿಗೂ ಈ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಹೀಗಾಗಿ ನಮ್ಮ ಸರ್ಕಾರ ಅನ್ನಭಾಗ್ಯ ಯೋಜನೆ ಮೂಲಕ 10 ಕೆಜಿ ಅಕ್ಕಿ ನೀಡಲು ನಿರ್ಧರಿಸಿತು. ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ನೀಡದೇ ಇದ್ದಾಗ ಅದರ ಪ್ರತಿಯಾಗಿ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು 170 ರೂ. ನೀಡಲಾಗುತ್ತಿದೆ. ಕುಣಿಗಲ್ ಕ್ಷೇತ್ರದಲ್ಲಿ 60 ಸಾವಿರ ಕುಟುಂಬಗಳು ಈ ಯೋಜನೆಯ ಲಾಭ ಪಡೆಯುತ್ತಿವೆ ಎಂದರು.
ದಕ್ಷಿಣ ಭಾರತದ ಹಣ ಉತ್ತರದ ರಾಜ್ಯಗಳಿಗೆ:
ಬಿಜೆಪಿಯವರಿಗೆ ಮತ ಹಾಕಲು ಅವರು ಮೇಕೆದಾಟು ಯೋಜನೆಗೆ ಅನುಮತಿ ನೀಡಿದ್ದಾರಾ? ಕಳಸಾ ಬಂಡೂರಿ ಯೋಜನೆ, ಕೃಷ್ಣಾ ಮೇಲ್ದಂಡೆ, ಭದ್ರ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ ಮಾಡಿದ್ದಾರಾ? ಕೇವಲ ಸುಳ್ಳು ಹೇಳಿಕೊಂಡು ದಕ್ಷಿಣ ಭಾರತದ ಹಣವನ್ನು ಉತ್ತರ ಭಾರತದ ರಾಜ್ಯಗಳಿಗೆ ನೀಡಿ, ಕನ್ನಡಿಗರು ಭಿಕ್ಷೆ ಬೇಡುವ ಪರಿಸ್ಥಿತಿಗೆ ನೂಕುತ್ತಿದ್ದಾರೆ ಎಂದರು. ಈ ತಾಲೂಕಿನಲ್ಲಿ ನೀವು ಕೃಷ್ಣಕುಮಾರ, ನಾಗರಾಜಯ್ಯ ಅವರಿಗೆ ಮತ ಹಾಕಿದ್ದೀರಿ. ಈಗ ಇಬ್ಬರೂ ನಿಂತಿಲ್ಲ. ನಿಮ್ಮ ತಾಲೂಕಿನವರು ಯಾರೂ ನಿಂತಿಲ್ಲ. ನಿಮ್ಮ ತಾಲೂಕಿಗೆ ಸೇವೆ ಮಾಡಿ ಕೂಲಿ ಕೇಳುತ್ತಿದ್ದೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ತಾಲೂಕಿಗೆ ಒಂದೂವರೆ ಸಾವಿರ ಕೋಟಿಯಷ್ಟು ಅನುದಾನವನ್ನು ಕೊಡಿಸಿದ್ದೇನೆ. ಬಿಜೆಪಿಯವರು ಕೊಡಿಸಿದ್ದಾರಾ?ಅವರು ನಾವು ಕೊಟ್ಟಿದ್ದನ್ನು ಕಿತ್ತುಕೊಂಡಿದ್ದರು ಎಂದರು. ಈಗ ಬಿಜೆಪಿಯಿಂದ ಈ ತಾಲೂಕಿನವರು, ಈ ಕ್ಷೇತ್ರದವರು ನಿಂತಿಲ್ಲ, ದೇವಗೌಡರ ಅಳಿಯ ಹಾಸನದವರು ನಿಂತಿದ್ದಾರೆ. ಅವರು ಅಲ್ಲಿರಲಿ, ನೀವು ನನಗೆ ಆಶೀರ್ವಾದ ಮಾಡಿ. ನಿಮ್ಮ ಋಣ ತೀರಿಸುತ್ತೇನೆ ಎಂದರು.