ನೇಮಕಾತಿಯಲ್ಲಿ ಅಕ್ರಮವಾಗಿಲ್ಲ । ಇಡಿ ದಾಳಿಯಿಂದ ತುಂಬ ನೋವಾಗಿದೆ । ಶಾಸಕ ನಂಜೇಗೌಡಕನ್ನಡಪ್ರಭ ವಾರ್ತೆ ಮಾಲೂರು
ತಾಲೂಕಿನಲ್ಲಿ ಶಾಸಕನಾಗಿ ಕೋಲಾರ, ಚಿಕ್ಕಬಳ್ಳಾಪುರ ಹಾಲು ಉತ್ಪಾದಕ ಒಕ್ಕೂಟದ ಅಧ್ಯಕ್ಷನಾದರೂ ತಾಲೂಕಿನ ಗೌರವ ಉಳಿಸಿದ್ದೇನೆ. ಎಂದಿಗೂ ತಾಲೂಕಿನ ಜನತೆಗೆ ಮೋಸ ಮಾಡಿಲ್ಲ, ಇಡಿ ದಾಳಿಯಿಂದ ನಾನು ಹಾಗೂ ನನ್ನ ಕುಟುಂಬದವರು ತುಂಬಾ ನೋವು ಅನುಭವಿಸಿದ್ದೇವೆ. ಒಕ್ಕೂಟದ ೮೧ ಖಾಲಿ ಹುದ್ದೆಗಳ ನೇಮಕಾತಿಗಾಗಿ ಅಭ್ಯರ್ಥಿಗಳಿಗೆ ಪಾರದರ್ಶಕ ಪರೀಕ್ಷೆ ನಡೆಸಿ ಒಕ್ಕೂಟದ ನಿಯಮಾನುಸಾರ ನೇಮಕ ಮಾಡಲಾಗಿದೆ ಎಂದು ಕೋಚಿಮುಲ್ ಅಧ್ಯಕ್ಷ ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಪಟ್ಟಣದ ಶಿಬಿರ ಕಚೇರಿಯ ಸಭಾಂಗಣದಲ್ಲಿ ಶಿಬಿರ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮರಣ ಹೊಂದಿದ ರಾಸುಗಳ ರೈತರಿಗೆ ವಿಮಾ ಪರಿಹಾರ ಹಣ, ೨೩ ಹಾಲು ಉತ್ಪಾದಕ ರೈತರಿಗೆ ೧೪ ಲಕ್ಷ, ೭೩ ಸಾವಿರ ಮೌಲ್ಯದ ಚೆಕ್ಕುಗಳ ವಿತರಣೆ ಹಾಗೂ ನೂತನ ವರ್ಷದ ಕ್ಯಾಲೆಂಡರ್ ಡೈರಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಾನು ತಾಲೂಕಿನಲ್ಲಿ ಎರಡನೇ ಬಾರಿಗೆ ಜನತೆಯ ಆಶೀರ್ವಾದದಿಂದ ಶಾಸಕನಾಗಿ ಕೋಲಾರ- ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷನಾಗಿ ಒಕ್ಕೂಟದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಒಕ್ಕೂಟದಲ್ಲಿ ಹಲವಾರು ಬದಲಾವಣೆಗಳನ್ನು ತರಲಾಗಿದೆ. ಎಂದಿಗೂ ತಾಲೂಕಿನ ಜನತೆಗೆ ಮೋಸ ಮಾಡಿಲ್ಲ, ಇಡಿ ದಾಳಿಯಿಂದ ನಾನು ಹಾಗೂ ನನ್ನ ಕುಟುಂಬದವರು ತುಂಬಾ ನೋವು ಅನುಭವಿಸಿದ್ದೇವೆ. ಒಕ್ಕೂಟದ ನೇಮಕಾತಿಗಾಗಿ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಿ ಪಾರದರ್ಶಕ ನೇಮಕಾತಿ ಮಾಡಿಕೊಳ್ಳಲಾಗಿದೆ, ನೇಮಕಾತಿಯಲ್ಲಿ ಯಾವುದೇ ಅಕ್ರಮಗಳಾಗಿಲ್ಲ, ಆದರೆ ನೂರಾರು ಕೋಟಿ ಅಕ್ರಮವಾಗಿದೆ ಎಂದು ಕೆಲವರು ನನ್ನ ಮನೆಗೆ ಇಡಿಯನ್ನು ಕಳಿಸಿಕೊಟ್ಟಿದ್ದಾರೆ, ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದರು.
ಆದರೆ, ಇಡಿಯವರಿಗೆ ನಮ್ಮ ಮನೆಯಲ್ಲಿ ಏನೂ ಸಿಗಲಿಲ್ಲ. ಇಡಿಯ ಮಾಧ್ಯಮ ಪ್ರಕಟಣೆಯಂತೆ ನೇಮಕಾತಿಯಲ್ಲಿ ಯಾವುದೇ ಅಕ್ರಮಗಳಾಗಲಿಲ್ಲ. ಯಾವುದೇ ಅಭ್ಯರ್ಥಿಯ ಬಳಿ ೨೦ ರಿಂದ ೩೦ ಲಕ್ಷ ಹಣ ವಸೂಲಿ ಮಾಡಿಲ್ಲ. ತಾಲೂಕು ಕಚೇರಿಯ ದರಖಾಸ್ತು ಸಮಿತಿ ೧೫೦ ಕೋಟಿ ಬೆಲೆ ಬಾಳುವ ಸರಕಾರಿ ಆಸ್ತಿಯನ್ನು ಅಕ್ರಮ ಭೂ ಮಂಜೂರು ಮಾಡಿಕೊಡಲಾಗಿದೆ ಎಂಬುದು ಸಹ ಸುಳ್ಳು ಸುದ್ದಿಯಾಗಿದೆ. ಅಕ್ರಮವಾಗಿ ಯಾರಿಗೂ ಭೂಮಿಯನ್ನು ಹಂಚಿಕೆ ಮಾಡಲಿಲ್ಲ, ಭೂ ಸ್ವಾಧೀನದಲ್ಲಿರುವ ಬಡ ರೈತರಿಗೆ ಮಾತ್ರ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ತಾಂತ್ರಿಕ ಸಮಿತಿ ಸಭೆ ಮುಂದೆ ಇಟ್ಟು ಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ನೀಡಿದ್ದೇವೆ. ಭೂ ಮಂಜೂರಾತಿಗಾಗಿ ದರಖಾಸ್ತು ಸಮಿತಿಗೆ ಭೂಸ್ವಾಧೀನದಲ್ಲಿರುವ ರೈತರು ೮೦೦೦ ಅರ್ಜಿಗಳನ್ನು ಸಲ್ಲಿಸಿದ್ದು ೨೦ ವರ್ಷಗಳಿಂದ ಬಾಕಿ ಉಳಿದಿವೆ ಎಂದರು.ನಾವು ಸಭೆಯಲ್ಲಿ ಮಂಜೂರಾತಿ ಮಾಡಿರುವವರಿಗೆ ಸಾಗುವಳಿ ಪತ್ರ ವಿತರಣೆ ಮಾಡಲಿಲ್ಲ, ಸರ್ಕಾರಕ್ಕೆ ಕಿಮ್ಮತ್ತು ಕಟ್ಟಿದರೆ ಅಂತವರಿಗೆ ಸ್ವಂತ ಜಮೀನಾಗುತ್ತದೆ, ಆದರೆ ಯಾರು ಕಿಮ್ಮತ್ತು ಕಟ್ಟಲ್ಲಿಲ್ಲ. ಯಾರಿಗೂ ಜಮೀನು ಹಂಚಿಕೆ ಮಾಡಿಲ್ಲ, ೧೫೦ ಕೋಟಿ ಹೇಗೆ ಅಕ್ರಮವಾಗುತ್ತದೆ ಎಂದು ಪ್ರಶ್ನಿಸಿದ ಶಾಸಕರು, ಈಗಾಗಲೇ ನನ್ನ ಮೇಲೆ ಕೆಲವರು ಐಟಿ, ಸಿಐಡಿ, ಇಡಿ ಎಲ್ಲಾ ದಾಳಿಗಳನ್ನು ಮಾಡಿಸಿದ್ದಾರೆ. ಆದರೆ ದಾಳಿಯಲ್ಲಿ ಯಾವುದೇ ರೀತಿಯ ಅಕ್ರಮಗಳು ಪತ್ತೆಯಾಗಿಲ್ಲ, ತಾಲೂಕಿನ ಜನತೆ ಹಾಗೂ ದೇವರ ಆಶೀರ್ವಾದದಿಂದ ನನಗೆ ಎಲ್ಲವೂ ಒಳ್ಳೆಯದಾಗುತ್ತದೆ. ನನ್ನ ಮೇಲೆ ಕಾರ್ಯಕರ್ತರು, ಮುಖಂಡರು ತಾಲೂಕಿನ ಜನತೆ ಇಟ್ಟುಕೊಂಡಿರುವ ನಂಬಿಕೆ, ಪ್ರೀತಿಯನ್ನು ಎಂದಿಗೂ ಹುಸಿಗೊಳಿಸುವುದಿಲ್ಲ ಎಂದರು.
ರಾಜ್ಯದಲ್ಲಿ ೧೧ನೇ ಸ್ಥಾನದಲ್ಲಿದ್ದ ಹಾಲು ಉತ್ಪಾದಕರ ಒಕ್ಕೂಟವನ್ನು ಮೊದಲನೇ ಸ್ಥಾನಕ್ಕೆ ತರಲಾಗಿದೆ. ಗುಣಮಟ್ಟದ ಹೆಚ್ಚುವರಿ ಹಾಲು ಉತ್ಪಾದನೆಗೆ ಹಲವು ಸವಲತ್ತುಗಳನ್ನು ಹಾಲು ಉತ್ಪಾದಕರಿಗೆ ನೀಡಲಾಗಿದೆ. ಉತ್ಪಾದನೆ ಹೆಚ್ಚಿಸಲು ಹಾಗೂ ನಂದಿನಿ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಕಲ್ಪಿಸಲಾಗಿದೆ, ಹೈನುಗಾರಿಕೆಯನ್ನು ಅವಲಂಬಿಸಿಕೊಂಡಿರುವ ಹಾಲು ಉತ್ಪಾದಕ ರೈತರಿಗೆ ಅನುಕೂಲವಾಗಲು ಪ್ರತಿ ಗ್ರಾಮದಲ್ಲಿ ಹಾಲು ಉತ್ಪಾದಕ ಸ್ವಂತ ಕಟ್ಟಡಗಳ ನಿರ್ಮಾಣಕ್ಕೆ ಒಕ್ಕೂಟದಿಂದ ಆರ್ಥಿಕ ಸಹಕಾರ ನೀಡಲಾಗುತ್ತಿದೆ. ಹಾಲು ಉತ್ಪಾದಕರು ತಮ್ಮ ರಾಸುಗಳಿಗೆ ಕಡ್ಡಾಯವಾಗಿ ಒಕ್ಕೂಟದ ವಿಮಾ ಕಂತಿನ ಹಣವನ್ನು ಬಳಸಿಕೊಂಡು ವಿಮೆ ಮಾಡಿಸುವಂತೆ ಹೇಳಿದರು. ಒಕ್ಕೂಟವು ರಾಜ್ಯದಲ್ಲಿ ಲಾಭದಾಕವಾಗಿದ್ದು, ಈಗಾಗಲೇ ಒಕ್ಕೂಟದ ಹಣದಿಂದ ಆವರಣದಲ್ಲಿ ೨೦೦ ಕೋಟಿ ವೆಚ್ಚದಲ್ಲಿ ಮೆಗಾ ಡೈರಿ, ಚಿಂತಾಮಣಿ ಬಳಿ ಐಸ್ ಫ್ಯಾಕ್ಟರಿ, ಸೋಲಾರ್ ಪ್ಲಾಂಟ್ ನಿರ್ಮಿಸಲಾಗುತ್ತಿದೆ ಎಂದರು.ಕೊಚಿಮಲ್ ಉಪ ವ್ಯವಸ್ಥಾಪಕ ಡಾ.ರೋಹಿತ್ ಮಾತನಾಡಿ, ಪ್ರತಿಯೊಬ್ಬ ಹಾಲು ಉತ್ಪಾದಕ ರೈತನು, ತಮ್ಮ ಹಸುಗಳಿಗೆ ವಿಮೆ ಮಾಡಿಸಿದರೆ ಆಕಸ್ಮಿಕವಾಗಿ ಹಸುಗಳು ಮೃತಪಟ್ಟರೆ ವಿಮಾ ಪರಿಹಾರ ಹಣ ಪಡೆಯಬಹುದಾಗಿದೆ. ಜನವರಿ ತಿಂಗಳಲ್ಲಿ ರಾಸುಗಳು ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದೆ, ಪ್ರಸ್ತುತ ೨೩ ಜನ ಫಲಾನುಭವಿಗಳಿಗೆ ಚೆಕ್ಕುಗಳನ್ನು ವಿತರಿಸಲಾಗುತ್ತಿದೆ, ಫೆಬ್ರವರಿಯಲ್ಲಿ ೩೦ ಜನರಿಗೆ ಚೆಕ್ಕುಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಪಘಾತದಲ್ಲಿ ನಿಧನರಾದ ವಿಸ್ತರಣಾಧಿಕಾರಿ ನಾರಾಯಣಸ್ವಾಮಿಯವರಿಗೆ ಸಭೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ತಾಪಂ ಮಾಜಿ ಅಧ್ಯಕ್ಷ ಬಿ.ಆರ್.ಶ್ರೀನಿವಾಸ್, ದರಖಾಸ್ತು ಸಮಿತಿ ಸದಸ್ಯ ಸತೀಶ್ ಬಾಬು, ಗ್ರಾಪಂ ಮಾಜಿ ಸದಸ್ಯ ರಾಮು, ಮುಖಂಡ ತಿಮ್ಮೇಗೌಡ, ಗ್ರಾಪಂ ಸದಸ್ಯ ಶ್ರೀನಿವಾಸ್ ವಿಸ್ತರಣಾಧಿಕಾರಿಗಳಾದ ಹುಲ್ಲೂರಪ್ಪ, ಕರಿಯಪ್ಪ, ನಹೀಂ ಇನ್ನಿತರರಿದ್ದರು.
-----