ನಾನೇನು ಸನ್ಯಾಸತ್ವ ಸ್ವೀಕರಿಸಿಲ್ಲ : ಡಿಸಿಎಂಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿರುಗೇಟು

KannadaprabhaNewsNetwork |  
Published : Oct 21, 2024, 12:47 AM ISTUpdated : Oct 21, 2024, 12:57 PM IST
೨೦ಕೆಎಂಎನ್‌ಡಿ-೨ಪಾಂಡವಪುರ ಪಟ್ಟಣದಲ್ಲಿ  ಶ್ರೀರಂಗಪಟ್ಟಣ - ಪಾಂಡವಪುರ ನಡುವಿನ ಹೆದ್ದಾರಿ ಕಾಮಗಾರಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭೂಮಿಪೂಜೆ ನೆರವೇರಿಸಿದರು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹಾಜರಿದ್ದರು. | Kannada Prabha

ಸಾರಾಂಶ

ಸಿಎಂ ಸಿದ್ದರಾಮಯ್ಯ ನನಗೆ ಮಣ್ಣಿನ ಮೇಲೆ ಆಸೆಯೇ ಇಲ್ಲ ಎಂದು ಪದೇ ಪದೇ ಹೇಳುತ್ತಾರೆ. ಒಂದು ಕಡೆ ಅವರು ಹಾಗೆ ಹೇಳುತ್ತಿದ್ದರೆ ಇನ್ನೊಂದು ಕಡೆ ಒಂದೊಂದೇ ವಿಕೆಟ್ ಉದುರುತ್ತಿವೆ. ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಏನು ಬೇಕಾದರೂ ಆಗಬಹುದು ಎನ್ನುವಂತೆ ಇವೆ.

 ಪಾಂಡವಪುರ :ಚನ್ನಪಟ್ಟಣವನ್ನು ಜೆಡಿಎಸ್ ಬಿಟ್ಟಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ನಾವೇನು ಸನ್ಯಾಸ ಸ್ವೀಕಾರ ಮಾಡಿದ್ದೇವೆಯೇ? ನಾವು ಕ್ಷೇತ್ರ ಉಳಿಸಿಕೊಳ್ಳುವುದಕ್ಕೆ ಹೋರಾಟ ಮಾಡುತ್ತೇವೆ ಎಂದು ತಿರುಗೇಟು ನೀಡಿದರು.

ಭಾನುವಾರ ಪಟ್ಟಣದಲ್ಲಿ ಶ್ರೀರಂಗಪಟ್ಟಣ- ಪಾಂಡವಪುರ ನಡುವಿನ ಹೆದ್ದಾರಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಸುದ್ದಿಗಾರರ ಜೊತೆ ಮಾತನಾಡಿದರು. ಅವರ ಹೇಳಿಕೆ ಏನೇ ಇರಲಿ, ಅವರು ಹೇಳಿದಂತೆ ಎಲ್ಲವೂ ಆಗುತ್ತದೆಯೇ? ನಾವು ಸನ್ಯಾಸತ್ವ ಸ್ವೀಕಾರ ಮಾಡಿದ್ದೇವಾ? ನಾವು ಚುನಾವಣೆ ಗೆಲ್ಲಲು ಏನು ನಿರ್ಧಾರ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ನೇರವಾಗಿ ನುಡಿದರು.

ಡಿ.ಕೆ.ಸುರೇಶ್ ಸಂಸ್ಕೃತಿ ಎಲ್ಲರಿಗೂ ಗೊತ್ತಿದೆ:

ತಮ್ಮ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದ ಮಾಜಿ ಸಂಸದ ಡಿ.ಕೆ.ಸುರೇಶ್‌ಗೆ ಪ್ರತ್ಯುತ್ತರ ನೀಡಿದ ಕೇಂದ್ರ ಸಚಿವರು, ಡಿ.ಕೆ.ಸುರೇಶ್ ಸಂಸ್ಕೃತಿಯ ಬಗ್ಗೆ ನಾನು ಮಾತನಾಡುವುದಿಲ್ಲ. ಅದು ಎಲ್ಲರಿಗೂ ಗೊತ್ತಿದೆ. ಅವರು ಏನೇ ಚರ್ಚೆ ಮಾಡಿದರೂ ನನಗೆ ಸಂಬಂಧ ಇಲ್ಲ. ಜನರು ಬಹುನಿರೀಕ್ಷೆ ಇಟ್ಟು ಕಾಂಗ್ರೆಸ್‌ಗೆ ಬಹುಮತ ನೀಡಿದ್ದಾರೆ. ಕಾಂಗ್ರೆಸ್‌ಗೆ ೧೩೬ ಸ್ಥಾನಗಳನ್ನು ಕೊಟ್ಟಿರುವುದು ನಿಜ. ಈ ಕಾಂಗ್ರೆಸ್ ರಾಜ್ಯದಲ್ಲಿ ಯಾವ ರೀತಿ ಕೆಲಸ ಮಾಡುತ್ತಿದೆ ಎನ್ನುವುದನ್ನು ಜನರು ನೋಡುತ್ತಿದ್ದಾರೆ. ದಿನವೂ ಒಂದೊಂದು ಅಕ್ರಮಗಳು ಬೆಳಕಿಗೆ ಬರುತ್ತಿವೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ನನಗೆ ಮಣ್ಣಿನ ಮೇಲೆ ಆಸೆಯೇ ಇಲ್ಲ ಎಂದು ಪದೇ ಪದೇ ಹೇಳುತ್ತಾರೆ. ಒಂದು ಕಡೆ ಅವರು ಹಾಗೆ ಹೇಳುತ್ತಿದ್ದರೆ ಇನ್ನೊಂದು ಕಡೆ ಒಂದೊಂದೇ ವಿಕೆಟ್ ಉದುರುತ್ತಿವೆ. ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಏನು ಬೇಕಾದರೂ ಆಗಬಹುದು ಎನ್ನುವಂತೆ ಇವೆ ಎಂದು ಕುಮಾರಸ್ವಾಮಿ ಸೂಕ್ಷ್ಮವಾಗಿ ತಿಳಿಸಿದರು.

ಬಹುಮತದ ಸರ್ಕಾರ ಸಿಗುವ ವಿಶ್ವಾಸ:

ನನಗೆ ಐದು ವರ್ಷದ ಪೂರ್ಣ ಬಹುಮತದ ಸರ್ಕಾರ ಜನರು ನೀಡಬಹುದು ಎಂದು ವಿಶ್ವಾಸ ಹೊಂದಿದ್ದೇನೆ. ನಾನು ವಿಶ್ವಾಸ ಇಟ್ಟುಕೊಳ್ಳಲು ಅವರ ಪರ್ಮಿಷನ್ ತೆಗೋಬೇಕಾ? ಐದು ವರ್ಷದ ಸರ್ಕಾರ ಬಂದರೆ ನನ್ನದೇ ಆದ ಅಭಿವೃದ್ಧಿ ಪರಿಕಲ್ಪನೆಗಳು ಇವೆ. ಜನರ ಸಮಸ್ಯೆ ಬಗೆಹರಿಸಲು ಕಾರ್ಯಕ್ರಮ ಹಾಕಿಕೊಂಡಿದ್ದೇನೆ ಎಂದು ಹೇಳಿದರು.

ನಮ್ಮ ರಾಜ್ಯದಲ್ಲಿ ಹಣದ ಕೊರತೆ ಇಲ್ಲ. ಕರ್ನಾಟಕ ಸಂಪತ್ಭರಿತ ರಾಜ್ಯ. ಆದರೆ ಈ ಸರ್ಕಾರ ಜನರ ಹಣವನ್ನು ಪೋಲು ಮಾಡುತ್ತಿದೆ. ಇದಕ್ಕೆ ಕಡಿವಾಣ ಹಾಕಿ ಜನರ ನೆಮ್ಮದಿ ಬದುಕಿಗಾಗಿ ನನಗೆ ಅವಕಾಶ ನೀಡುತ್ತಾರೆ ಅನ್ನೋದು ತಪ್ಪಾ? ನನ್ನ ಮಾತಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನನ್ನ ತೀರ್ಮಾನದಲ್ಲೂ ಯಾವುದೇ ಬದಲಾವಣೆ ಇಲ್ಲ ಎಂದು ಕೇಂದ್ರ ಸಚಿವರು ಸ್ಪಷ್ಟಪಡಿಸಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ವಿಧಾನಪರಿಷತ್ ಶಾಸಕ ಕೆ.ವಿವೇಕಾನಂದ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ