ಬಿಜೆಪಿಯ ₹50 ಕೋಟಿ ಆಫರ್ ‌ನನಗೆ ಬಂದಿಲ್ಲ, ನನ್ನನ್ನು ಸಂಪರ್ಕಿಸಿಲ್ಲ ; ಶಾಸಕ‌ ರಾಜು ಕಾಗೆ

KannadaprabhaNewsNetwork |  
Published : Nov 23, 2024, 01:17 AM ISTUpdated : Nov 23, 2024, 12:16 PM IST
ಶಾಸಕ‌ ರಾಜು ಕಾಗೆ | Kannada Prabha

ಸಾರಾಂಶ

 ಬಿಜೆಪಿಯ ₹50 ಕೋಟಿ ಆಫರ್ ‌ನನಗೆ ಬಂದಿಲ್ಲ, ಬಿಜೆಪಿಯವರು ಈ ಸಂಬಂಧ ನನ್ನನ್ನು ಸಂಪರ್ಕಿಸಿಲ್ಲ ಎಂದು ಕಾಗವಾಡ ಶಾಸಕ ರಾಜು ಕಾಗೆ ಸ್ಪಷ್ಟಪಡಿಸಿದರು.  

ಕಾಗವಾಡ: ಬಿಜೆಪಿಯ ₹50 ಕೋಟಿ ಆಫರ್ ‌ನನಗೆ ಬಂದಿಲ್ಲ, ಬಿಜೆಪಿಯವರು ಈ ಸಂಬಂಧ ನನ್ನನ್ನು ಸಂಪರ್ಕಿಸಿಲ್ಲ ಎಂದು ಕಾಗವಾಡ ಶಾಸಕ ರಾಜು ಕಾಗೆ ಸ್ಪಷ್ಟಪಡಿಸಿದರು. ಕಾಗವಾಡ ಮತಕ್ಷೇತ್ರದ ಪಾರ್ಥನಳ್ಳಿ, ಚಮಕೇರಿ, ಬೇಡರಹಟ್ಟಿ, ಗುಂಡೇವಾಡಿ, ಬಳ್ಳಿಗೇರಿ ಗ್ರಾಮಗಳಲ್ಲಿ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ವಿರೋಧ ಪಕ್ಷದವರು ರಾಜಕೀಯ ದುರುದ್ದೇಶಕ್ಕಾಗಿ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು, ಜನ ವಿರೋಧ ಪಕ್ಷದವರ ಸುಳ್ಳು ಆರೋಪಗಳಿಗೆ ಸೊಪ್ಪು ಹಾಕುವುದಿಲ್ಲ ಎಂದರು. ಬೆಳಗಾವಿಯ ಚಳಿಗಾಲದ ಅಧಿವೇಶನ ಸಿಎಂ ಸಿದ್ದರಾಮಯ್ಯನವರಿಗೆ ಕೊನೆಯ ಅಧಿವೇಶನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ವಿರೋಧ ಪಕ್ಷದವರು ಇದನ್ನು ಬಿಟ್ಟು ಬೇರೆ ಇನ್ನೇನು ಹೇಳಲು ಸಾಧ್ಯ ಎಂದು ಮರುಪ್ರಶ್ನಿಸಿದರು.

ಚಳಿಗಾಲದ ಅಧಿವೇಶನದ ಒಳಗಾಗಿಯೇ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯನ್ನು ಎರಡು ಮೋಟರ್ ಗಳ ಮೂಲಕ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗುವುದು ಮತ್ತು ಮುಂಬರುವ ಜೂನ್ ತಿಂಗಳಲ್ಲಿಯೇ ಈ ಯೋಜನೆಯ ನಾಲ್ಕೂ ಮೋಟಾರ್‌ಗಳ ಮೂಲಕ ಪೂರ್ಣಪ್ರಮಾಣದಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಸಕ್ಕರೆ ಕಾರಖಾನೆಯ ಮಾಲೀಕರು ರೈತರಿಗೆ ತೂಕದಲ್ಲಿ ಮೋಸ ಮಾಡುತ್ತಿದ್ದಾರೆ. ಈ ಸಂಬಂಧ ಕಳೆದ ವರ್ಷ ಸಕ್ಕರೆ ಸಚಿವ ಶಿವಾನಂದ ಪಾಟೀಲ ಸಕ್ಕರೆ ಕಾರ್ಖಾನೆಗಳ ಹೊರಗೆ ತೂಕದ ಮಷೀನ್ ಅಳವಡಿಸುವುದಾಗಿ ಹೇಳಿದ್ದರು. ಆದರೆ ಈವರೆಗೂ ತೂಕದ ಮಷೀನ್ ಅಳವಡಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಈಗ ತಾನೆ ಕಬ್ಬು ನುರಿಸುವ ಹಂಗಾಮು ಪ್ರಾರಂಭಗೊಂಡಿದ್ದು, ತಕ್ಷಣ ಎಲ್ಲ ಸಕ್ಕರೆ ಕಾರಖಾನೆಗಳ ಹೊರಗೆ ಸರ್ಕಾರದಿಂದ ತೂಕದ ಮಷೀನ್‌ ಅಳವಡಿಸಬೇಕು ಎಂದು ಒತ್ತಾಯಿಸಿದರು.

ಕಾಗವಾಡ ಮತಕ್ಷೇತ್ರದ ಪ್ರತಿ ಗ್ರಾಮಗಳಿಗೆ ಬೇಡಿಕೆ ಅನುಸಾರ 1₹2.5 ಕೋಟಿ ಅನುದಾನದಲ್ಲಿ ರಸ್ತೆ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ. 72 ಗ್ರಾಮಗಳಲ್ಲಿ ಒಂದೊಂದು ಸಮುದಾಯ ಭವನಗಳು ಮಂಜೂರು ಅನುಷ್ಠಾನದ ಹಂತದಲ್ಲಿವೆ ಎಂದ ಅವರು, ಕಾಗವಾಡ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹25 ಕೋಟಿ ವಿಶೇಷ ಅನುದಾನ ಮಂಜೂರು ಮಾಡಿದೆ ಎಂದು ಹೇಳಿದರು.

ಧುರೀಣರಾದ ಘೂಳಪ್ಪ ಜತ್ತಿ, ಶಿವಾನಂದ ಗೊಲಭಾವಿ, ಸಿದರಾಯ ತೇಲಿ, ಶರೀಫ್ ಮುಲ್ಲಾ, ರಫೀಕ್ ಪಟೇಲ್, ಚಂದ್ರಕಾಂತ ಇಮ್ಮಡಿ,ಶಿವು ಗುಡ್ಡಾಪುರ. ಬಸವರಾಜ ನಾವಿ, ಬಸವರಾಜ ಪಾಟೀಲ, ಗುತ್ತಿಗೆದಾರರಾದ ದಿಲೀಪ ಕಾಂಬಳೆ. ಶಂಕರ ಮುಜಗೋಣಿ, ಮಲ್ಲಿಕಾರ್ಜುನ ದಳವಾಯಿ, ಈರಪ್ಪ ಶಿರಗುರ, ಪಿಂಟು ಮಗದುಮ್, ಶಿವಾನಂದ ಹುಚ್ಚಗೌಡರ, ವಿನಯ ಇಮ್ಮಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV

Recommended Stories

ಊರ ಹಬ್ಬ ಮಾದರಿಯಲ್ಲಿ ಬಪ್ಪನಾಡು ಗಣೇಶೋತ್ಸವ ಸುವರ್ಣ ಸಂಭ್ರಮ: ಸುನಿಲ್ ಆಳ್ವ
ಉಡುಪಿ ನಗರ ಬಿಜೆಪಿಯಿಂದ ‘ಕಮಲ ಕಲರವ - ಕೆಸರ್ಡ್ ಒಂಜಿ ದಿನ’ ಕ್ರೀಡಾಕೂಟ