)
ರಾಮನಗರ: ಸಾರ್ವಜನಿಕ ಜೀವನದಲ್ಲಿ ಇದ್ದಷ್ಟು ದಿನವೂ ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ಕೆಲಸ ಮಾಡಿದ ತೃಪ್ತಿ ನನಗಿದೆ. ಬೇರೆಯವರು ಮಾಡದ ಸಾಧನೆಯನ್ನೇನೂ ನಾನು ಮಾಡಿಲ್ಲ. ಆದ್ದರಿಂದ ಪೌರ ಸನ್ಮಾನದೊಂದಿಗೆ ನೀಡಿರುವ ಸ್ಮರಣಿಕೆಯನ್ನು ನಗರಸಭೆಯಲ್ಲಿಯೇ ಇಟ್ಟುಕೊಳ್ಳುವಂತೆ ಹೇಳಿ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ವಾಪಸ್ ನೀಡಿದರು.
ನನ್ನ ಅಧಿಕಾರದ ಅವಧಿಯಲ್ಲಿ ಬಡವರಿಗೆ ನಿವೇಶನ, ಸೂರು ಕಲ್ಪಿಸಿದೆ. 3 ಸಾವಿರ ಗೇಣಿದಾರರಿಗೆ ಗೇಣಿ ಒದಗಿಸಿಕೊಟ್ಟು ನೂರಕ್ಕೆ ನೂರರಷ್ಟು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ ತೃಪ್ತಿಯಿದೆ. ನಾನೆಂದೂ ಗೌರವವನ್ನು ಮಾಡಿಸಿಕೊಂಡವನಲ್ಲ. ಅಭಿನಂದನೆಗೆ ಅರ್ಹವಾಗುವ ಕೆಲಸ ಮಾಡಿದ್ದರೆ ಅಭಿನಂದನೆ ಸ್ವೀಕರಿಸುತ್ತಿದ್ದೆ. ಕರ್ತವ್ಯ ಮಾಡಿದ್ದೇನೆ ಅಷ್ಟೆ. ಅಭಿನಂದನೆಗೆ ಅರ್ಹವಾಗುವ ಕೆಲಸ ಮಾಡಿಲ್ಲ ಎಂದು ಹೇಳಿದರು.
ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ಜನಪರ ಕಾರ್ಯಗಳ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಭವಿಷ್ಯದಲ್ಲಿ ಅವರಿಗೂ ಪೌರ ಸನ್ಮಾನ ಮಾಡುವ ದಿನಗಳು ಬರಲಿ ಎಂದು ಸಿ.ಎಂ.ಲಿಂಗಪ್ಪ ಆಶಿಸಿದರು.ಸಿ.ಎಂ.ಲಿಂಗಪ್ಪ ನಿಜವಾದ ರಾಷ್ಟ್ರಕಾರಣಿ:
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ನಾನು ಮತ್ತು ಸಿ.ಎಂ.ಲಿಂಗಪ್ಪ ಸ್ನೇಹಿತರಷ್ಟೇ ಅಲ್ಲ ಸಹೋದರರಂತೆ ಇದ್ದೇವೆ. 75ರ ದಶಕದಲ್ಲಿ ನಾವು ಪಂಚ ಪಾಂಡವರಂತೆ ಜಿಲ್ಲೆಯಲ್ಲಿ ಕೆಲಸ ಮಾಡಿದವರು. ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಧರ್ಮರಾಯ, ನಾನು ಭೀಮ, ಡಿ.ಕೆ.ಶಿವಕುಮಾರ್ ಅರ್ಜುನ, ಮುನಿನರಸಿಂಹಯ್ಯ ನಕುಲರ ರೀತಿಯಲ್ಲಿ ಕೆಲಸ ಮಾಡಿದೆವು. ಲಿಂಗಪ್ಪಅವರು ಮಾಡಿರುವ ಕೆಲಸಕ್ಕೆ ಸಲ್ಲಿಸಿರುವ ಗೌರವ ಶ್ಲಾಘನೀಯ ಎಂದು ಹೇಳಿದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 17 ಮಂದಿಗೆ ಕೆಂಗಲ್ ಹನುಮಂತಯ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಾಸಕ ಇಕ್ಬಾಲ್ ಹುಸೇನ್ ಅಧ್ಯಕ್ಷತೆ ವಹಿಸಿದ್ದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ, ಜಿಲ್ಲಾಧ್ಯಕ್ಷ ಕೆ.ರಾಜು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್, ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ), ಆಯುಕ್ತರಾದ ಜಯಣ್ಣ, ಛಲವಾದಿ ಮಹಾಸಭಾ ಅಧ್ಯಕ್ಷೆ ವಾಣಿ ಶಿವರಾಂ, ಹಿಂದುಳಿದ ಸಮುದಾಯಗಳ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಸಾಗರ್ ಮತ್ತಿತರರು ಉಪಸ್ಥಿತರಿದ್ದರು.
22ಕೆಆರ್ ಎಂಎನ್ .ಜೆಪಿಜಿ