ಕಾರ್ಖಾನೆ ಬೇರೆಡೆ ಸ್ಥಾಪಿಸುವಂತೆ ಹೇಳಿದ್ದೇನೆ: ರಾಯರಡ್ಡಿ

KannadaprabhaNewsNetwork |  
Published : Apr 16, 2025, 12:43 AM IST
15ಕೆಪಿಎಲ್29 ಬಿಎಸ್ ಪಿಎಲ್ ಕಾರ್ಖಾನೆ ಸ್ಥಾಪಿಸದಂತೆ ಲಿಖಿತ ಆದೇಶ ಮಾಡಿಸುವಂತೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರಿಗೆ ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಕಾರ್ಖಾನೆಯವರು ಈಗಗಾಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುಮತಿ ಪಡೆದುಕೊಂಡಿರುವುದಾಗಿ ಹೇಳಿದ್ದಾರೆ. ಅದಕ್ಕೆ ಬೇಕಾಗಿರುವ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೂ ಸಹ ನಾವು ಮಾನವೀಯತೆ ದೃಷ್ಟಿಯಿಂದ ಕೊಪ್ಪಳ ನಗರಕ್ಕೆ ಹೊಂದಿಕೊಂಡು ಕಾರ್ಖಾನೆ ಸ್ಥಾಪಿಸುವುದು ಸೂಕ್ತವಲ್ಲ.

ಕೊಪ್ಪಳ:

ಬಿಎಸ್‌ಪಿಎಲ್ ಕಾರ್ಖಾನೆಯನ್ನು ಕೊಪ್ಪಳ ಬಳಿ ಸ್ಥಾಪಿಸುವುದು ಸೂಕ್ತವಲ್ಲ, ಅದನ್ನು ಬೇರೆಡೆ ಸ್ಥಾಪಿಸುವಂತೆ ಈಗಾಗಲೇ ಹೇಳಿದ್ದೇವೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪಿಸದಂತೆ ಲಿಖಿತ ಆದೇಶ ಮಾಡಿಸುವಂತೆ ಒತ್ತಾಯಿಸಿ ನಗರದ ಪ್ರವಾಸಿಮಂದಿರದಲ್ಲಿ ಕೊಪ್ಪಳ ತಾಲೂಕು ಹಿತರಕ್ಷಣಾ ವೇದಿಕೆ ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಈ ಬಗ್ಗೆ ನಾನು ಸೇರಿದಂತೆ ಶಾಸಕ ರಾಘವೇಂದ್ರ ಹಿಟ್ನಾಳ, ಸಚಿವ ಶಿವರಾಜ ತಂಗಡಗಿ ಒಟ್ಟಾಗಿಯೇ ಶ್ರಮಿಸುತ್ತಿದ್ದೇವೆ. ಆದರೆ, ಕಾರ್ಖಾನೆಯವರು ಈಗಗಾಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುಮತಿ ಪಡೆದುಕೊಂಡಿರುವುದಾಗಿ ಹೇಳಿದ್ದಾರೆ. ಅದಕ್ಕೆ ಬೇಕಾಗಿರುವ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೂ ಸಹ ನಾವು ಮಾನವೀಯತೆ ದೃಷ್ಟಿಯಿಂದ ಕೊಪ್ಪಳ ನಗರಕ್ಕೆ ಹೊಂದಿಕೊಂಡು ಕಾರ್ಖಾನೆ ಸ್ಥಾಪಿಸುವುದು ಸೂಕ್ತವಲ್ಲ. ಹೀಗಾಗಿ, ಬೇರೆಡೆ ಸ್ಥಾಪಿಸಬೇಕು ಎಂದು ಹೇಳಿದ್ದೇವೆ ಎಂದರು.ಕಾರ್ಖಾನೆಯವರು ಅದನ್ನು ಮೀರಿ ನ್ಯಾಯಾಲಯದ ಮೊರೆ ಹೋಗಬಹುದು ಎನ್ನಲಾಗುತ್ತಿದೆ. ಹೀಗಾಗಿ, ಹೋರಾಟ ಸಮಿತಿಯವರು ಸಹ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ. ಈ ದಿಸೆಯಲ್ಲಿ ಸರ್ಕಾರದ ಸಹಕಾರವನ್ನು ನಾನು ಸಂಪೂರ್ಣವಾಗಿ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ಈ ನಡುವೆ ಕಾರ್ಖಾನೆಯವರನ್ನೆ ಕರೆದು ನಿಮ್ಮೆದುರಿಗೆ ಮಾತನಾಡಿಸುವ ಪ್ರಯತ್ನ ಮಾಡುತ್ತೇನೆ. ಕೈಗಾರಿಕಾ ಮತ್ತು ಮೂಲಭೂತ ಸೌಕರ್ಯ ಸಚಿವ ಎಂ.ಬಿ. ಪಾಟೀಲ್ ಅವರೊಂದಿಗೆ ನಿಮ್ಮೆಲ್ಲರನ್ನು ಸೇರಿಸಿ ಮಾತನಾಡಿಸುವೆ ಎಂದರು.

ಬಿಎಸ್‌ಪಿಎಲ್ ಕಾರ್ಖಾನೆಯವರು ತಮ್ಮಿಂದ ಧೂಳು ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಈಗಾಗಲೇ ಇರುವ ಕಾರ್ಖಾನೆಯಿಂದ ಆಗುತ್ತಿರುವ ಸಮಸ್ಯೆ ನಮಗೆ ತಿಳಿದಿದೆ. ಹೀಗಾಗಿ, ಅದಕ್ಕೆ ಅವಕಾಶ ನೀಡದೆ, ಅವರು ಮಾನವೀಯತೆಯಿಂದ ಬೇರೆಡೆ ಮಾಡಿಕೊಳ್ಳುವಂತೆ ಹೇಳಿದ್ದೇವೆ ಎಂದರು.

ಈ ವೇಳೆ ಪರಿಸರ ವೇದಿಕೆಯ ರಮೇಶ ತುಪ್ಪದ, ಶಿವಕುಮಾರ ಕುಕನೂರು, ಶರಣು ಡೊಳ್ಳಿನ, ಸೋಮನಗೌಡ ವಗರನಾಳ, ಮಂಜುನಾಥ ಗೊಂಡಬಾಳ, ಜ್ಯೋತಿ ಗೊಂಡಬಾಳ, ಮುತ್ತುರಾಜ ಕುಷ್ಟಗಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ
ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೋಲಿಯೋ ಹಾಕಿಸಿ