ಚಿತ್ರದುರ್ಗದಲ್ಲಿ ಆರ್ಟ್ ಗ್ಯಾಲರಿ ನಿರ್ಮಿಸುವ ಚಿಂತನೆ

KannadaprabhaNewsNetwork |  
Published : Apr 16, 2025, 12:43 AM IST
ಚಿತ್ರದುರ್ಗ ಪೋಟೋ ಸುದ್ದಿ   | Kannada Prabha

ಸಾರಾಂಶ

ಚಿತ್ರದುರ್ಗದ ಮಯೂರ ಯಾತ್ರಿ ನಿವಾಸದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಕಲಾ ದಿನಾಚರಣೆ ಕಾರ್ಯಕ್ರಮವನ್ನು ಲಲಿತ ಕಲಾ ಅಕಾಡೆಮಿ ಸದಸ್ಯ ಸಿ.ಕಣ್ಮೇಶ್ ಉದ್ಘಾಟಿಸಿದರು. ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್, ಕ್ರಿಯೇಟಿವ್ ವೀರೇಶ್ ಇದ್ದಾರೆ.

ವಿಶ್ವ ಕಲಾ ದಿನಾಚರಣೆಯಲ್ಲಿ ಲಲಿತ ಕಲಾ ಅಕಾಡೆಮಿ ಸದಸ್ಯ ಸಿ.ಕಣ್ಮೇಶ್ ಹೇಳಿಕೆಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಚಿತ್ರ ಕಲಾವಿದರ ಸಂಖ್ಯೆ ಹೆಚ್ಚಾಗುತ್ತಿದ್ದು, ಆರ್ಟ್ ಗ್ಯಾಲರಿ ನಿರ್ಮಿಸುವ ಮೂಲಕ ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದು ಲಲಿತ ಕಲಾ ಅಕಾಡೆಮಿ ಸದಸ್ಯ ಸಿ.ಕಣ್ಮೇಶ್ ತಿಳಿಸಿದರು.

ನಗರದ ಮಯೂರ ಯಾತ್ರಿ ನಿವಾಸದ ಆವರಣದಲ್ಲಿ ಮಂಗಳವಾರ ಲಲಿತ ಕಲಾ ಅಕಾಡೆಮಿ, ಚಿತ್ರ ಕಲಾವಿದರ ಬಳಗದಿಂದ ಆಯೋಜಿಸಿದ್ದ ವಿಶ್ವ ಕಲಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚಿತ್ರ ಕಲಾವಿದರಿಗೆ ಆರ್ಟ್ ಗ್ಯಾಲರಿ ತುಂಬಾ ಅವಶ್ಯ. ಜತೆಗೆ ಅದು ಜಿಲ್ಲೆಗೆ ಒಂದು ಕಲಾ ಸ್ಪರ್ಶ ನೀಡುತ್ತದೆ. ಗ್ಯಾಲರಿ ನಿರ್ಮಾಣದ ಬಗ್ಗೆ ಈ ಹಿಂದೆ ಒಂದಿಷ್ಟು ಪ್ರಕ್ರಿಯೆ ನಡೆಸಲಾಗಿತ್ತು. ಆದರೆ ನಾನಾ ಕಾರಣದಿಂದ ನನೆಗುದಿಗೆ ಬಿದ್ದಿದೆ. ಶೀಘ್ರ ಜಿಲ್ಲೆಯ ಎಲ್ಲ ಚಿತ್ರಕಲಾವಿದರ ಸಭೆ ನಡೆಸಿ ಪ್ರಕ್ರಿಯೆಗೆ ವೇಗ ನೀಡಲಾಗುತ್ತದೆ ಎಂದು ತಿಳಿಸಿದರು.

ಸಾವಿರಾರು ಕಥೆ, ಆಲೋಚನೆ, ಭಾವನೆಗಳನ್ನು ವ್ಯಕ್ತಪಡಿಸುವ ಶಕ್ತಿ ಚಿತ್ರಕಲೆಗಿದೆ. ಈ ಪರಂಪರೆ ಪುರಾತನ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಕಲೆಗೆ ಮತ್ತು ಕಲಾವಿದರಿಗೆ ಗೌರವ ಸಲ್ಲಿಸಲು ಪ್ರತಿವರ್ಷ ಇಟಲಿಯ ಶ್ರೇಷ್ಠ ವರ್ಣಚಿತ್ರಕಾರ ಲಿಯೊನಾರ್ಡೊ ಡಾ ವಿನ್ಸಿಯವರ ಜನ್ಮದಿನವಾದ ಏ.15 ರಂದು ಪ್ರಪಂಚದಾದ್ಯಂತ ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತದೆ ಎಂದರು.

ಲಿಯೊನಾರ್ಡೊ ಡಾವಿನ್ಸಿ ಒಬ್ಬ ವರ್ಣಚಿತ್ರಕಾರ, ಶಿಲ್ಪಿ, ವಾಸ್ತುಶಿಲ್ಪಿ, ಸಂಗೀತಗಾರ, ನುರಿತ ಮೆಕ್ಯಾನಿಕ್, ಎಂಜಿನಿಯರ್ ಮತ್ತು ವಿಜ್ಞಾನಿ. ಅವರು ತಮ್ಮ ಕಲೆಯಲ್ಲಿನ ಪ್ರಾವೀಣ್ಯತೆಯಿಂದಲೇ ಪ್ರಪಂಚದಾದ್ಯಂತ ಖ್ಯಾತಿಯನ್ನು ಪಡೆದವರು. ಇಂತಹ ಮಹಾನ್ ಕಲಾವಿದನ ಜನ್ಮ ದಿನದ ಸವಿ ನೆನಪಿಗೆ 2012 ರಲ್ಲಿ ವಿಶ್ವ ಕಲಾ ದಿನವನ್ನು ಆಚರಣೆಯನ್ನು ಪ್ರಾರಂಭಿಸಲಾಯಿತು ಎಂದು ತಿಳಿಸಿದರು.

ಸಾಹಿತಿ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ಮಾತನಾಡಿ, ಕಲಾವಿದರು ಎಲ್ಲ ಕಾಲಕ್ಕೂ ಸಲ್ಲುತ್ತಾರೆ. ಕಾಲ ಕಾಲಕ್ಕೆ ಎದುರಾಗುವ ಎಲ್ಲ ಅಡ್ಡಿ ಆತಂಕಗಳನ್ನು ಎದುರಿಸಿ ಕಲೆಯನ್ನು ಗೆಲ್ಲಿಸುವ ಶಕ್ತಿ ಚಿತ್ರಕಲಾವಿದರಿಗೆ ಇದೆ ಎಂದರು.

ಎಐ ತಂತ್ರಜ್ಞಾನ ಕಲಾವಿದರ ಬದುಕು ಕಿತ್ತು ಕೊಳ್ಳುವ ಆತಂಕ ಸೃಷ್ಟಿಸಿದೆ. ಆದರೆ ಕ್ರಿಯಾಶೀಲತೆ, ಅಂತರಂಗದ ಅಭಿವ್ಯಕ್ತವನ್ನು ಚಿತ್ರ ರೂಪಕ್ಕೆ ತರುವ ಶಕ್ತಿ ಕಲಾವಿದರಿಗೆ ಮಾತ್ರ ಇದೆ. ಚಿತ್ರಕಲೆ ಕೇವಲ ಕಲೆಯಾಗಿರದೆ ಅನೇಕ ಸಂಸ್ಕೃತಿ, ಸಮುದಾಯಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಹಿಂದಿನಿಂದಲೂ ಭಾವನೆಗಳನ್ನು ವ್ಯಕ್ತಪಡಿಸಲು, ಸಂವಹನ ನಡೆಸಲು ಸುತ್ತಲಿನ ಪ್ರಪಂಚದ ಸೌಂದರ್ಯವನ್ನು ಸೆರೆ ಹಿಡಿಯಲು ಚಿತ್ರಕಲೆಯನ್ನೇ ಬಳಸಲಾಗುತ್ತಿತ್ತು. ಈ ಕಲೆ ಮಾತ್ರವಲ್ಲದೆ ಕಲಾವಿದರ ಕೊಡುಗೆಗಳು ಕೂಡಾ ನಮ್ಮ ಸಂಸ್ಕೃತಿ ರೂಪಿಸುವಲ್ಲಿ ಮಹತ್ವದ ಪಾತ್ರ ಹೊಂದಿದೆ ಎಂದರು.

ಚಿತ್ರಕಲಾವಿದ ಕ್ರಿಯೇಟಿವ್ ವೀರೇಶ್ ಮಾತನಾಡಿ, ಚಿತ್ರ ಕಲಾವಿದರಿಗೆ ನಿರಂತರ ಅಧ್ಯಯನದ ಅವಶ್ಯಕತೆ ಹೆಚ್ಚಾಗಿದೆ. ನಮ್ಮ ಚಿತ್ರಗಳು ಜನಮಾನಸದಲ್ಲಿ ಉಳಿಯ ಬೇಕಾದರೆ ಅಧ್ಯಯನ, ಸಂಶೋಧನೆಯಿಂದ ಮಾತ್ರ ಸಾಧ್ಯ.ಜಿಲ್ಲೆಯಲ್ಲಿ ಚಿತ್ರ ಕಲಾ ಕ್ಷೇತ್ರಕ್ಕೆ ಹೊಸಬರ ಆಗಮನ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕಲಾವಿದರ ಕನಸಿನ ಆರ್ಟ್ ಗ್ಯಾಲರಿ ಆದಷ್ಟು ಬೇಗ ನಿರ್ಮಾಣ ಆದರೆ ಬಹಳಷ್ಟು ಅನುಕೂಲವಾಗಲಿದೆ. ನಗರದ ತರಾಸು ರಂಗಮಂದಿರದ ನವೀಕರಣ ಕಾರ್ಯ ಆರಂಭವಾಗಿದ್ದು, ಇದರ ಜತೆಯಲ್ಲೇ ಗ್ಯಾಲರಿ ಕಾರ್ಯ ನಡೆದರೆ ಉತ್ತಮ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಇದ್ದರು. ಚಿತ್ರಕಲಾವಿದ ದಾದಾಪೀರ್ ಇಳಿಸಂಜೆಯ ಕೋಟೆ ದೃಶ್ಯವನ್ನು ಬಿಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ತೋರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ