ಸರ್ವಪಕ್ಷ ನಿಯೋಗದ ಭೇಟಿಗೆ ಸಿಎಂ ಸಮಯ ಕೊಡಿಸುವೆ: ಸಚಿವ ಜಾರಕಿಹೊಳಿ

KannadaprabhaNewsNetwork |  
Published : Nov 14, 2026, 02:15 AM IST
ಕೊಪ್ಪಳ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಂಟಿ ಕ್ರಿಯಾ ವೇದಿಕೆಯ ವತಿಯಿಂದ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಬಲ್ಡೋಟ ಕಂಪನಿ ಸ್ಥಾಪನೆ ವಿರೋಧಿಸಿ ನಡೆಯುತ್ತಿರುವ ಹೋರಾಟದ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲು ಸರ್ವಪಕ್ಷ ಹಾಗೂ ಹೋರಾಟಗಾರರ ನಿಯೋಗಕ್ಕೆ ಭೇಟಿ ಅವಕಾಶ ಕೊಡಿಸುವುದಾಗಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.

ಕೊಪ್ಪಳ: ಬಲ್ಡೋಟ ಕಂಪನಿ ಸ್ಥಾಪನೆ ವಿರೋಧಿಸಿ ನಡೆಯುತ್ತಿರುವ ಹೋರಾಟದ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲು ಸರ್ವಪಕ್ಷ ಹಾಗೂ ಹೋರಾಟಗಾರರ ನಿಯೋಗಕ್ಕೆ ಭೇಟಿ ಅವಕಾಶ ಕೊಡಿಸುವುದಾಗಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.

ಆದರೆ, 20 ವರ್ಷ ಸುಮ್ಮನಿದ್ದು, ಈಗ ವಿರೋಧ ವ್ಯಕ್ತಪಡಿಸಿದರೆ ಹೇಗೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಪ್ರಶ್ನಿಸಿದ್ದು, ಈ ವೇಳೆ ಹೋರಾಟಗಾರರು ಮತ್ತು ಸಚಿವರ ನಡುವೆ ವಾಗ್ವಾದ ನಡೆಯಿತು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಂಟಿ ಕ್ರಿಯಾ ವೇದಿಕೆಯ ಮನವಿ ಸ್ವೀಕರಿಸಿದ ಸಚಿವ ಸತೀಶ ಜಾರಕಿಹೊಳಿ, ಮುಖ್ಯಮಂತ್ರಿ ಭೇಟಿಗೆ ನಿಯೋಗ ಕರೆದೊಯ್ಯಲು ಸ್ವಲ್ಪ ಸಮಯ ಬೇಕಾಗಬಹುದು. ಭೇಟಿಗೆ ಅವಕಾಶ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದರು.

ಈ ವೇಳೆ ವೇದಿಕೆಯ ಪ್ರಧಾನ ಸಂಚಾಲಕ ಪ್ರೊ. ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಬಲ್ಡೋಟ ಬೃಹತ್ ಯೋಜನೆ ಸ್ಥಾಪನೆ ತಡೆಯುವಂತೆ ಒಂದು ವರ್ಷದಿಂದ ಮನವಿ ಮಾಡಲಾಗುತ್ತಿದೆ. ಶಾಸಕರು, ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸರ್ವಪಕ್ಷ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿಗೆ ಕರೆದೊಯ್ಯುವಂತೆ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ಇದೀಗ ತಾವು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಚಿವ ಶಿವರಾಜ ತಂಗಡಗಿ, ಈಗಾಗಲೇ ಒಮ್ಮೆ ಮುಖ್ಯಮಂತ್ರಿ ಮುಂದೆ ನಿಯೋಗ ಕರೆದೊಯ್ಯಲಾಗಿದೆ. 20 ವರ್ಷ ಸುಮ್ಮನಿದ್ದು, ಈಗ ಕೇಳಿದರೆ ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಹೋರಾಟಗಾರರು, ಕೊಪ್ಪಳದ ಜನರು 20 ವರ್ಷಗಳಿಂದಲೂ ಹೋರಾಟ ಮಾಡುತ್ತಿದ್ದಾರೆ. ಬಲ್ಡೋಟ ಕಂಪನಿ ₹54 ಸಾವಿರ ಕೋಟಿ ಹೂಡಿಕೆಗೆ ಮುಂದಾದಾಗ ಗವಿಮಠದ ಶ್ರೀಗಳು ವಿರೋಧ ವ್ಯಕ್ತಪಡಿಸಿದ್ದು ಸಚಿವರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಟಿ. ರಘುಮೂರ್ತಿ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ಕೆ. ರಾಜಶೇಖರ ಹಿಟ್ನಾಳ ಅವರಿಗೆ ಮನವಿ ಸಲ್ಲಿಸಲಾಯಿತು. ಸಚಿವರು, ಶಾಸಕರು ಹಾಗೂ ಸಂಸದರಿಗೆ ‘ಕೊಪ್ಪಳದ ಕೊರಳು’ ಕವನ ಸಂಕಲನ ನೀಡಲಾಯಿತು.

ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಕರ್ನಾಟಕ ರೈತ ಸಂಘದ ಮುಖಂಡ ಡಿ.ಎಚ್. ಪೂಜಾರ, ರಾಜಶೇಖರ ಏಳುಭಾವಿ, ಹನುಮಂತಪ್ಪ ಗೊಂದಿ, ಜಿ.ಎಸ್. ಕಡೆಮನಿ, ಶುಕರಾಜ ತಾಳಕೇರಿ, ಬಸವರಾಜ ನರೇಗಲ್, ಮಂಗಳೇಶ ರಾಠೋಡ ಇದ್ದರು.

ಬಲ್ಡೋಟ ವಿರೋಧಿ ಅನಿರ್ದಿಷ್ಟ ಧರಣಿ 379ನೇ ದಿನಕ್ಕೆ ಮುಂದುವರಿದಿದ್ದು, ಶಿವಪ್ಪ ಬನಪ್ಪನವರ, ಸರೋಜಾ ಬಾಕಳೆ, ಪರವೀನ್ ಸಜ್ಜಿಹೊಲ, ಶಿವನಗೌಡ ಪಾಟೀಲ, ಬಸವರಾಜ ನಾಯಕ, ಗಂಗಪ್ಪ ಡಂಬಳ, ಮಲ್ಲಪ್ಪ ಮಾದಿನೂರು ಮತ್ತಿತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ