ಗಂಗಾವತಿ:
ರಾಜ್ಯದಲ್ಲಿ 2028ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ತಾವೇ ಮುಖ್ಯಮಂತ್ರಿ ಆಗುವುದಾಗಿ ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ಮಂಗಳವಾರ ಇಲ್ಲಿ ವಿಜಯ ವೃಂದ ಯುವಕ ಸಂಘ ಸ್ಥಾಪಿಸಿದ್ದ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರದಲ್ಲಿ ಮಸೀದಿ ಮುಂದೆ ಕುಣಿಯಲು ಆದ್ಯತೆ ನೀಡುವ ಜತೆಗೆ ಡಿಜೆಗೆ ಅನುಮತಿ ನೀಡಲಾಗುವುದು ಎಂದರು.ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಿದವರ ಮೇಲೆ ಯಾವುದೇ ಪ್ರಕರಣ ದಾಖಲಿಸಿಲ್ಲ. ಆದರೆ, ಮುಸ್ಲಿಂ ಹಬ್ಬದ ವೇಳೆ ಗಲಾಟೆಯಾದರೆ ಮೊದಲಿಗೆ ಹಿಂದೂಗಳ ಮೇಲೆ ಪ್ರಕರಣ ದಾಖಲಿಸುತ್ತಾರೆ. ಇದು ಸಿಎಂ ಸಿದ್ದರಾಮಯ್ಯನವರ ನಡತೆ ಎಂದು ಕಿಡಿಕಾರಿದರು.
ಕಳೆದ ಮೂರು ವರ್ಷದಿಂದ ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ಹಾಗೂ ಔರಂಗಜೇಬ್ ಸರ್ಕಾರ ನಡೆಯುತ್ತಿದೆ. ಇದು ಸಾಬರ (ಮುಸ್ಲಿಂ) ಸರ್ಕಾರವಾಗಿದ್ದು, ಹಿಂದೂಗಳು ಒಂದಾಗದಿದ್ದರೆ ಉಳಿಗಾಲವಿಲ್ಲ. ಎಲ್ಲರಿಗೂ ಸಮಾನತೆ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಹಿಂದೂಗಳು ಮನೆಯಲ್ಲಿ ಹಾಕಿಕೊಳ್ಳಬೇಕೆಂದು ಕರೆ ನೀಡಿದರು.ಪೇಠಾ ಬೇಡ, ಟೋಪಿ ಬೇಕು:
ಹಾಲುಮತ ಸಮಾಜದವರು ಪೇಠಾ ಹಾಕಿ ಸನ್ಮಾನಿಸಲು ಹೋದರೆ ಕಿತ್ತು ಹಾಕಿದ ಸಿದ್ದರಾಮಯ್ಯ, ಮುಸ್ಲಿಂರ ಟೋಪಿ ಹಾಕಿಸಿಕೊಂಡು ಅಪ್ಪಿಕೊಂಡರು. ಗೃಹಸಚಿವ ಪರಮೇಶ್ವರ ನಿಷ್ಕ್ರಿಯ ಸಚಿವರಾಗಿದ್ದು ರಾಜ್ಯದ ಸೌಹಾರ್ದತೆಯ ಬಗ್ಗೆ ಸ್ವಲ್ಪವೂ ಅರಿವಿಲ್ಲ. ವಿಧಾನಸೌಧದಲ್ಲಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಮುಸ್ಲಿಂರೇ ನೇಮಕಗೊಂಡಿದ್ದು, ಹಿಂದೂಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು.ಈ ವೇಳೆ ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ವಿರೂಪಾಕ್ಷಪ್ಪ ಸಿಂಗನಾಳ, ಕಳಕನಗೌಡ, ವಿಜಯ ವೃಂದ ಯುವಕ ಸಂಘದ ಅಧ್ಯಕ್ಷ ಶಾಂತವೀರಯ್ಯಸ್ವಾಮಿ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತೆರದ ವಾಹನದಲ್ಲಿ ಯತ್ನಾಳ ಅವರನ್ನು ಸ್ವಾಗತಿಸಲಾಯಿತು. ಈ ವೇಳೆ 8000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಮುಂಜಾಗ್ರತಾ ಕ್ರಮವಾಗಿ 1200ಕ್ಕೂ ಹೆಚ್ಚಿನ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.