ಗಾಣಿಗ ಸ್ವಾಮೀಜಿ ವಿರುದ್ಧ ಮಾನನಷ್ಟ ಕೇಸ್‌ ಹಾಕುವೆ: ಸಚಿವ ತಂಗಡಗಿ

KannadaprabhaNewsNetwork |  
Published : Jul 09, 2025, 12:25 AM IST
4654 | Kannada Prabha

ಸಾರಾಂಶ

ಗಾಣಿಗ ಮಠಕ್ಕೆ ನಮ್ಮ ಸರ್ಕಾರ ಅನುದಾನ ನೀಡಿಲ್ಲ. ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ಅವರು 2022ರ ಅ. 18ರಂದು ₹ 3.5 ಕೋಟಿ ಅನುದಾನ ಕೊಟ್ಟಿದ್ದರು. ನಂತರ 2023ರ ಜನವರಿಯಲ್ಲಿ ಆದೇಶ ತಿದ್ದಪಡಿ ಮಾಡಿ ₹ 2 ಕೋಟಿ ಮಾತ್ರ ಕೊಡುವಂತೆ ಬೊಮ್ಮಾಯಿ ಅವರೇ ಮರು ಆದೇಶಿಸಿದ್ದಾರೆ.

ಕಾರಟಗಿ:

ನೆಲಮಂಗಲದ ಗಾಣಿಗ ಪೀಠದ ತೈಲೇಶ್ವರ ಸ್ವಾಮೀಜಿ ನನ್ನ ಮತ್ತು ನನ್ನ ಸಹೋದರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದು, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಣಿಗ ಮಠಕ್ಕೆ ನಮ್ಮ ಸರ್ಕಾರ ಅನುದಾನ ನೀಡಿಲ್ಲ. ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ಅವರು 2022ರ ಅ. 18ರಂದು ₹ 3.5 ಕೋಟಿ ಅನುದಾನ ಕೊಟ್ಟಿದ್ದರು. ನಂತರ 2023ರ ಜನವರಿಯಲ್ಲಿ ಆದೇಶ ತಿದ್ದಪಡಿ ಮಾಡಿ ₹ 2 ಕೋಟಿ ಮಾತ್ರ ಕೊಡುವಂತೆ ಬೊಮ್ಮಾಯಿ ಅವರೇ ಮರು ಆದೇಶಿಸಿದ್ದು, ಸ್ವಾಮೀಜಿ ಇದನ್ನು ಕೋರ್ಟ್ ಗಮನಕ್ಕೆ ತಂದಿಲ್ಲ. ಜತೆಗೆ ಹಿಂದಿನ ಅನುದಾನವನ್ನು ಎಲ್ಲಿ ಬಳಕೆ ಮಾಡಿದ್ದಾರೆ ಎಂಬ ಪ್ರಮಾಣ ಪತ್ರವನ್ನೂ ನೀಡಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಸ್ವಾಮೀಜಿ ಬಗ್ಗೆ ಗರಂ ಆದ ಸಚಿವರು, ಮಾಜಿ ಸಿಎಂ ಯಡಿಯೂರಪ್ಪ ಹಿರಿಯರಿದ್ದಾರೆ‌. ನನ್ನ ವಿರುದ್ಧ ಹೋರಾಟ ಮಾಡುವ ಯಡಿಯೂರಪ್ಪ ಅವರು ದಾಖಲೆ ತರಿಸಿ ನೋಡಲಿ. ನನ್ನ ಬಳಿ ದಾಖಲೆಗಳ ಎಲ್ಲ ಪ್ರತಿ ಇವೆ. ನಾನು ಭ್ರಷ್ಟಾಚಾರ ಮಾಡಿದ್ದರ ಬಗ್ಗೆ ಒಂದೇ ಒಂದು ದಾಖಲೆ ಕೊಟ್ಟರೂ ನಾನು ರಾಜಕೀಯದಿಂದ ನಿವೃತ್ತಿ ಆಗುತ್ತೇನೆ. ಆದರೆ, ದಾಖಲೆ ಒದಗಿಸದಿದ್ದರೆ ಸ್ವಾಮೀಜಿ ಪೀಠ ತ್ಯಜಿಸಿ ಮತ್ತೆ ರಾಜಕೀಯಕ್ಕೆ ಬರುತ್ತಾರೆಯೇ? ಎಂದು ಸವಾಲು ಹಾಕಿದರು.

ಬಿಜೆಪಿಗರಿಗೆ ಕೆಲಸ ಇಲ್ಲ. ಅದಕ್ಕೆ ಹೋರಾಟ ಮಾಡುತ್ತಿದ್ದಾರೆ. ನಮ್ಮ ಸರ್ಕಾರದಲ್ಲಿ ಏನೂ ಆಗಿಲ್ಲ. ಸ್ವಾಮೀಜಿ ಕಾವಿ ಬಿಟ್ಟು ರಾಜಕಾರಣಕ್ಕೆ ಬರಲಿ. ನಾನು ಕಾನೂನು ಹೋರಾಟ ಮಾಡಲು ಸಿದ್ಧ. ಸ್ವಾಮೀಜಿ ಮೇಲೆ ಎಫ್ಐಆರ್ ಮಾಡಿಸುತ್ತೇನೆ. ಕೋರ್ಟ್ ಮೂಲಕ ಕಾನೂನು ಹೋರಾಟ ಮಾಡುತ್ತೇನೆ ಎಂದರು.

ಅವರು ಸ್ವಾಮೀಜಿ ಅಲ್ಲ. ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿಯಾಗಿದ್ದು, ಬಿಜೆಪಿ ಸರ್ಕಾರದಲ್ಲಿ ಸಹಕಾರಿ ‌ಸಚಿವರಾಗಿದ್ದರು. ತಮ್ಮ ಹಳೇ ಚಾಳಿ ಇನ್ನೂ ಬಿಟ್ಟಿಲ್ಲ. ನನ್ನ ಮೇಲೆ ವೈಯಕ್ತಿಕ ಆರೋಪ‌ ಮಾಡಬೇಕು ಎಂದಿದ್ದರೆ ಕಾವಿ ಕಳಚಿ ಮತ್ತೆ ರಾಜಕೀಯಕ್ಕೆ ಬರಲಿ ಎಂದು ಶಿವರಾಜ ತಂಗಡಗಿ ಟೀಕಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ