ಕನ್ನಡಪ್ರಭ ವಾರ್ತೆ ಶಿವಮೊಗ್ಗ / ತೀರ್ಥಹಳ್ಳಿ/ ಶಿರಾಳಕೊಪ್ಪ
ಬೈಂದೂರು ವಿಧಾನಸಭಾ ಕ್ಷೇತ್ರದ ಕಿರಿ ಮಂಜೇಶ್ವರದಲ್ಲಿ ನಡೆದ ವಿಜಯ ಸಂಕಲ್ಪ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇಂತಹ ದಬ್ಬಾಳಿಕೆ, ದೌರ್ಜನ್ಯವನ್ನು ನಾನು ಹಿಂದೆಯೂ ಸಹಿಸಿರಲಿಲ್ಲ, ಈಗಲೂ ಸಹಿಸುವುದಿಲ್ಲ. ರಾಜ್ಯದಲ್ಲಿ ಹಿಂದುತ್ವದ ಉಳಿಸಲು ಸಾಧ್ಯವಾಗುವುದು ಈಶ್ವರಪ್ಪರವರಿಂದ ಮಾತ್ರ ಎಂದು ಪ್ರತಿಯೊಬ್ಬರಿಗೂ ಗೊತ್ತಾಗಿದೆ. ಹೀಗಾಗಿ ಹಿಂದುತ್ವದ ಪರ ಇರುವ ಎಲ್ಲ ಮತದಾರರು, ಕಾರ್ಯಕರ್ತರು ರಾಷ್ಟ್ರ ಭಕ್ತ ಬಳಗ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ ಎಂದರು.
ನನ್ನ ಗೆಲುವು ನಿಶ್ಚಿತ: ಎರಡೂ ಪಕ್ಷಗಳ ನಾಯಕರ ವರ್ತನೆಯಿಂದ ಮತದಾರರು ಬೇಸತ್ತಿದ್ದಾರೆ. ಹೀಗಾಗಿ ಬದಲಿ ಆಯ್ಕೆಯಾಗಿ ನನ್ನ ಕಡೆಗೆ ತಿರುಗಿದ್ದಾರೆ. ನನ್ನನ್ನು ಗೆಲ್ಲಿಸಲು ನಿರ್ಧರಿಸಿದ್ದಾರೆ. ನನ್ನ ಗೆಲುವು ನಿಶ್ಚಿತ ಎಂದು ಹೇಳಿದ ಅವರು ಬೇಸತ್ತಿರುವ ಮತದಾರರು ಹೊಸ ಆಯ್ಕೆಯನ್ನು ಬಯಸಿದ್ದಾರೆ ಎಂದು ಹೇಳಿದರು.ಮೀನುಗಾರರ ಋಣ ತೀರಿಸುತ್ತೇನೆ: ಇಲ್ಲಿಯವರೆಗೂ ಇದ್ದ ಸಂಸದರು ಇಲ್ಲಿನ ಮೀನುಗಾರರ ಸಮಸ್ಯೆ ಬಗೆ ಹರಿಸುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಮೀನುಗಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನನಗೆ ಬೆಂಬಲ ನೀಡುತ್ತಿದ್ದಾರೆ. ಚುನಾವಣೆಯಲ್ಲಿ ಗೆದ್ದ ನಂತರ ಮೀನುಗಾರರ ಸಮಸ್ಯೆ ಬಗೆ ಹರಿಸಿ ಅವರ ಋಣ ತೀರಿಸುತ್ತೇನೆ ಎಂದು ಭರವಸೆ ನೀಡಿದರು.
ನಾನು ಸಂಸದನಾಗಿ ಆಯ್ಕೆಯಾದ ಬಳಿಕ ಈ ಕ್ಷೇತ್ರದ ಅಭಿವೃದ್ಧಿಗೆ ಕಂಕಣ ತೊಡಲಿದ್ದೇನೆ. ಯಾವ್ಯಾವ ಕೆಲಸ ಆಗಬೇಕು ಎಂದು ಒಂದು ಸಮೀಕ್ಷೆ ನಡೆಸಿ, ಇದನ್ನು ಕಾರ್ಯ ಗತ ಮಾಡಲು ಕೇಂದ್ರದ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳನ್ನು ಇಲ್ಲಿಗೆ ಕರೆದುಕೊಂಡು ಬಂದು ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುವ ಕೆಲಸ ಮಾಡಲಿ ದ್ದೇನೆ ಎಂದು ಹೇಳಿದರು.
ಬಿಜೆಪಿ- ಕಾಂಗ್ರೆಸ್ ಹೊಂದಾಣಿಕೆ: ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಗೀತಾ ಅವರನ್ನು ಹಾಕಿಸಿ, ಕಣಕ್ಕೆ ಬಂದಿದ್ದಾರೆ. ಇದರಿಂದ ಅಸಮಾಧಾನಪಟ್ಟ ಕಾಂಗ್ರೆಸ್ಸಿಗರು ನನಗೆ ಕರೆ ಮಾಡಿ ಗೀತಾ ಅವರಿಗೆ ಮತ ಹಾಕಲು ಮನಸ್ಸಿಲ್ಲ. ಹೀಗಾಗಿ ಈ ಬಾರಿ ಕೆ.ಎಸ್.ಈಶ್ವರಪ್ಪಗೆ ಮತ ಹಾಕುವುದಾಗಿ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ ಎಂದರಲ್ಲದೆ, ಈ ಸಂಖ್ಯೆಯಲ್ಲಿ ಜನರು ಸೇರಿರುವುದು ಸಂತೋಷ ತಂದಿದೆ ಎಂದರು.
ಸಮಾವೇಶದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಆರತಿ ಅ.ಮ ಪ್ರಕಾಶ್, ಸೀತಾಲಕ್ಷ್ಮಿ, ಮಾಜಿ ಮೇಯರ್ ಸುವರ್ಣ ಶಂಕರ್, ದಿನಕರ್ ಗಂಗೊಳ್ಳಿ ಕಾರ್ಮಿಕ ಮುಖಂಡರು, ಜಿ.ಪಂ ಪ್ರಮುಖ ಸದಸ್ಯರು ಉಪಸ್ಥಿತರಿದ್ದರು.
ತೀರ್ಥಹಳ್ಳಿ: ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಲು ಸಿನಿಮಾ ನಟರು ಬರುತ್ತಾರೆ, ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಲು ರಾಷ್ಟ್ರ ನಾಯಕರು ಬರುತ್ತಾರೆ. ಆದರೆ, ನನ್ನ ಪರ ಪ್ರಚಾರ ಮಾಡಲು ಶ್ರೀಸಾಮಾನ್ಯರು ಬರುತ್ತಾರೆ. ಅವರೇ ನನ್ನ ಸ್ಟಾರ್ ಪ್ರಚಾರಕರು ಎಂದು ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್ ಹೇಳಿದರು.ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧೆಡೆ ಮತಯಾಚನೆ ನಡೆಸಿ, ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ಚುನಾವಣೆಯಲ್ಲಿ ಕೆ.ಎಸ್. ಈಶ್ವರಪ್ಪ ರವರನ್ನು ಗೆಲ್ಲಿಸಬೇಕು. ಅಪ್ಪ ಮಕ್ಕಳ ಕೈಯಿಂದ ಪಕ್ಷವನ್ನು ಮುಕ್ತ ಮಾಡಬೇಕೆಂದು ಜಿಲ್ಲೆಯ ಜನರೇ ತೀರ್ಮಾನ ಮಾಡಿದ್ದಾರೆ ಎಂದರು.ಈಶ್ವರಪ್ಪ ತೆಗೆದುಕೊಂಡ ನಿರ್ಣಯ ಸರಿಯಾಗಿದೆ ಜನರು ನನಗೆ ಬೆಂಬಲವಾಗಿ ನಿಂತಿದ್ದಾರೆ. ಚುನಾವಣೆ ನಂತರ ರಾಘವೇಂದ್ರ ಮನೆಗೆ ಹೋಗುತ್ತಾರೆ. ಈಶ್ವರಪ್ಪ ಗೆದ್ದು ಮೋದಿ ಬಳಿ ಹೋಗುತ್ತಾರೆ ಎಂದು ಸಾಮಾನ್ಯ ಜನರ ಅಭಿಪ್ರಾಯವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಈ ಸಂಧರ್ಭದಲ್ಲಿ ಮಹೇಶ್, ಶಿವು, ಸಾತ್ವಿಕ್ ಪೂಜಾರಿ, ಮಂಜುನಾಥ್ ಜೋಗಿ, ಗಣೇಶ್ ಪ್ರಸಾದ್, ಅವಿನಾಶ್, ರಾಜು, ನವುಶಾ, ಶಶಿ, ಉದಯ್, ಶಶಿ ಕುಂದರ್, ಅರುಣ್, ಕಿರಣ್, ಕವನ, ಪ್ರವೀಣ್, ನೀಲಕಂಠ, ಅಭಿಷೇಕ್ ಉಪಸ್ಥಿತರಿದ್ದರು.ಜಾನಪದ ಹಾಡು ಹಾಡಿ ಕಲಾವಿದರಿಂದ ಈಶ್ವರಪ್ಪ ಪರ ಮತಯಾಚನೆ
ಸಭೆಗೆ ಅಡ್ಡಿ: ನಡು ರಸ್ತೆಯಲ್ಲೇ ವಾಹನದಲ್ಲಿ ಈಶ್ವರಪ್ಪ ಭಾಷಣ ಶಿರಾಳಕೊಪ್ಪ: ಅನುಮತಿ ಇದ್ದರೂ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರ ಸಭೆ ನಡೆಸಲು ಅಡ್ಡಿಪಡಿಸಿ ಏಕಾಏಕಿ ವೇದಿಕೆ ತೆರವು ಮಾಡಿದ ಹಿನ್ನೆಲೆ ಈಶ್ವರಪ್ಪ ಅವರು ನಡುರಸ್ತೆಯಲ್ಲೇ ವಾಹನದಲ್ಲಿ ನಿಲ್ಲಿಸಿ ಭಾಷಣ ಮಾಡಿದ ಘಟನೆ ಶಿರಾಳಕೊಪ್ಪದಲ್ಲಿ ಜರುಗಿತು.ಬುಧವಾರ ಸೊರಬ ರಸ್ತೆಯ ಮೈಲಾರ ಲಿಂಗೇಶ್ವರ ದೇವಸ್ಥಾನದ ಬಳಿ ಬುಧವಾರ ಸಂಜೆ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಪರ ಸಾರ್ವಜನಿಕ ಸಭೆ ಆಯೋಜಿಸಲಾಗಿತ್ತು. ಸಭೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು.ಈ ಓ ವೇಳೆ ಒತ್ತಾಯಪೂರ್ವಕವಾಗಿ ಕೆಲವರು ವೇದಿಕೆ ಮತ್ತು ಮೈಕ್‌ಗಳನ್ನು ತೆರವು ಮಾಡಿಸಿದ್ದಾರೆ.ಈಶ್ವರಪ್ಪ ಅವರು ಸಭೆ ನಿಗದಿಯಾಗಿದ್ದ ಸ್ಥಳಕ್ಕೆ ಬಂದಾಗ ವಿಷಯ ತಿಳಿದು ಕೆಂಡಾಮಂಡಲವಾದರು. ವೇದಿಕೆ ಇರದ ಹಿನ್ನೆಲೆಯಲ್ಲಿ ನಡು ರಸ್ತೆಯಲ್ಲೇ ತೆರದ ವಾಹನದಲ್ಲಿ ನಿಂತು ಮಾತನಾಡಿದ ಅವರು, ಇದು ಕಾಂಗ್ರೆಸ್ ನವರು ಮಾಡಿದ್ದಾರೋ, ಬಿಜೆಪಿಯವರು ಮಾಡಿದ್ದಾರೋ ನನಗೆ ಗೊತ್ತಿಲ್ಲ. ನೀವು ಎಷ್ಟೇ ಅಡ್ಡಿಪಡಿಸಿದರೂ ಈ ಚುನಾವಣೆ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ಕಿಡಿಕಾರಿದರು. ಕಾರ್ಯಕರ್ತರು ಚೇರುಗಳನ್ನು ಎಳೆದು ತಂದು ರಸ್ತೆ, ಪಕ್ಕದ ಖಾಲಿ ಜಾಗದಲ್ಲಿ ಕುಳಿತು ಭಾಷಣ ಕೇಳಿದರು.