ಕನ್ನಡಪ್ರಭ ವಾರ್ತೆ ಹಾರನಹಳ್ಳಿ
ಅರಸೀಕೆರೆ ಕ್ಷೇತ್ರದಲ್ಲಿ ಕೆಲವು ವಿರೋಧಿಗಳು ಸಾಮಾಜಿ ಜಾಲತಾಣಗಳ ಮೂಲಕ ನನ್ನ ತೇಜೋವಧೆ ಮಾಡುತ್ತಿದ್ದು, ಅದರಿಂದ ಸಾಧನೆ ಮಾಡುವುದಕ್ಕೆ ಆಗಲ್ಲ. ಅದಕ್ಕೆ ಹೆದರುವ ಮನುಷ್ಯನೂ ನಾನಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿ ಮೂಲಕ ಅವರಿಗೆ ಉತ್ತರ ಕೊಡುವ ಜಾಯಮಾನ ನನ್ನದು ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ ತಿರುಗೇಟು ನೀಡಿದ್ದಾರೆ.ಗ್ರಾಮದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಮಾದರಿ ವಿದ್ಯುತ್ ಯೋಜನೆ ಹಾಗೂ ಬಸ್ ನಿಲ್ದಾಣ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಿದ ನಂತರ ಮಾತನಾಡಿ, ಹಾರನಹಳ್ಳಿ ಗ್ರಾಮವನ್ನು ಮಾದರಿ ಗ್ರಾಮ ಮಾಡುವುದರ ಜೊತೆಗೆ ಅರಸೀಕೆರೆಗೆ ಸಮಾನಾಂತರವಾಗಿ ಗ್ರಾಮಗಳನ್ನು ಅಭಿವೃದ್ಧಿಪಡಿಸುವುದಾಗಿ ತಿಳಿಸಿದ ಅವರು, ಶ್ರೀ ಕ್ಷೇತ್ರ ಕೋಡಿಮಠದಿಂದ ಅರಸೀಕೆರೆ ತನಕ ರಸ್ತೆ ಅಗಲೀಕರಣ ಕಾಮಗಾರಿಗೆ ಲೋಕೋಪಯೋಗಿ ಸಚಿವರನ್ನು ಕರೆಸಿ ಸದ್ಯದಲ್ಲೇ ಪೂಜೆ ಮಾಡಿಸುವುದಾಗಿ ಹೇಳಿ, ಮುಂದಿನ ದಿನಗಳಲ್ಲಿ ಅರಸೀಕೆರೆ ಕ್ಷೇತ್ರದಲ್ಲಿ ಕೆರೆಗಳಿಗೆ ನೀರು ತುಂಬಿಸುವುದಾಗಿ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಸಾಧನೆ ಹಾಗೂ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಎಲ್ಲಾ ಅಧಿಕಾರಿಗಳನ್ನು ಕರೆಸಿ ಗ್ರಾಮ ಸಭೆ ಮಾಡುವುದಾಗಿ ಸಭೆಯಲ್ಲಿ ತಿಳಿಸಿದರು.ಹಾರನಹಳ್ಳಿ ವ್ಯಾಪ್ತಿಯಲ್ಲಿ ದಿನದ 24 ಘಂಟೆಗಳ ಕಾಲ ನಿರಂತರ ಮತ್ತು ಸುರಕ್ಷಿತ ವಿದ್ಯುತ್ ಸರಬರಾಜು ಮಾಡಲು ಸುಮಾರು 1 ಕೋಟಿ ರು. ಬಿಡುಗಡೆಯಾಗಿದ್ದು, ಹಳೆಯ ವಿದ್ಯುತ್ ಕಂಬಗಳು, ವಿದ್ಯುತ್ ಪರಿವರ್ತಕಗಳ ಬದಲಾವಣೆ ಮಾಡುವುದಾಗಿ ಅಧಿಕಾರಿಗಳು ತಿಳಿಸಿದರು.
ತಾಲೂಕು ಗ್ಯಾರಂಟಿ ಸಮಿತಿ ಸದಸ್ಯ ಗೀಜಿಹಳ್ಳಿ ಶೇಖರ್ ಮಾತನಾಡಿ, ಕೆ.ಎಂ.ಶಿವಲಿಂಗೇಗೌಡ ಶಾಸಕರಾದ ಮೇಲೆ ಅರಸೀಕೆರೆ ಕ್ಷೇತ್ರದ ಚಿತ್ರಣವೇ ಬದಲಾಗಿದೆ, ಪ್ರತಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ, ಕುಡಿಯುವ ನೀರಿನ ಯೋಜನೆ ಹಾಗೂ ಇತರೆ ಸಾಧನೆಗಳ ಬಗ್ಗೆ ಗುಣಗಾನ ಮಾಡಿ, ನುಡಿದಂತೆ ನಡೆದ ಸರ್ಕಾರದ ಗ್ಯಾರಂಟಿ ಯೋಜನೆ ಗ್ರಾಮೀಣ ಭಾಗದ ಜನರಿಗೆ ಚೈತನ್ಯ ನೀಡುವ ಯೋಜನೆಯಾಗಿದೆ ಎಂದು ಬಣ್ಣಿಸಿದರು.ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಟಿ.ಶಿವಮೂರ್ತಿ ಮಾತನಾಡಿ, ಹಾರನಹಳ್ಳಿಯ ವ್ಯಾಪ್ತಿಯಲ್ಲಿ ಮುಖ್ಯ ರಸ್ತೆ ಅಗಲೀಕರಣ, ನಾಲ್ಕು ಪಥ ಅಭಿವೃದ್ಧಿ ಹೀಗೆ ಹತ್ತು ಹಲವು ಯೋಜನೆಗಳನ್ನು ಶಾಸಕರು ಮಾಡಿಸಿದ್ದಾರೆ, ಮುಂದಿನ ದಿನದಲ್ಲಿ ಬಸ್ ನಿಲ್ದಾಣ, ಗ್ರಾಮಗಳ ರಸ್ತೆಗಳು, ಇತರೆ ಕಾಮಗಾರಿಗಳನ್ನು ಮಾಡಿಸುವುದಾಗಿ ತಿಳಿಸಿದರು.ಚೆಸ್ಕಾಂ ಸಲಹಾ ಸಮಿತಿಯ ಸದಸ್ಯರಾದ ವಿಜಯಕುಮಾರ್, ಹಾರನಹಳ್ಳಿ ಗ್ರಾಪಂ ಅಧ್ಯಕ್ಷೆ ಗಂಗಮ್ಮ, ಯಮುನಾ, ದೇವರಾಜು, ಸದಸ್ಯರಾದ ಶಿವು, ಜೈಪ್ರಕಾಶ್, ಧರ್ಮಣ್ಣ, ಆರಾಧನ ಸಮಿತಿ ಸದಸ್ಯರಾದ ಯಳವಾರೆ ಕೇಶವಮೂರ್ತಿ, ಕರಿಂಸಾಬ್, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.