ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ರಾಜ್ಯದಲ್ಲಿ ಸರ್ಕಾರ ಯಾವುದಿದೆ ಎನ್ನುವುದು ಮುಖ್ಯವಲ್ಲ. ಹೋರಾಟ ಮಾಡಿ ಅನುದಾನ ತಂದು ಕೆಲಸ ಮಾಡಿಸುವ ಶಕ್ತಿ ಗಡಸು ಇಟ್ಟುಕೊಂಡಿದ್ದೇನೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.ತಾಲೂಕಿನ ಕೋಮರನಹಳ್ಳಿ ಗ್ರಾಮದಲ್ಲಿ 2.20 ಕೋಟಿ ರು. ವೆಚ್ಚದಲ್ಲಿ ನೂತನ ಆಶ್ರಯ ಬಡಾವಣೆ ನಿರ್ಮಾಣದ ಕಾಮಗಾರಿ ಮತ್ತು ಕೋಮರನಹಳ್ಳಿಯಿಂದ ತೇಕಲವಟ್ಟಿವರೆಗೂ ನೂತನ ಡಾಂಬರ್ ರಸ್ತೆ ನಿರ್ಮಾಣ, ನೂತನ ಸಿ.ಸಿ.ರಸ್ತೆ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಒಂದೊಂದು ಮನೆಯಲ್ಲಿ ಎರಡ್ಮೂರು ಕುಟುಂಬಗಳಿವೆ ಎನ್ನುವ ಕಾರಣಕ್ಕಾಗಿ 1 ಕೋಟಿ ರು.ಗಳಲ್ಲಿ ನಿವೇಶನವಾಗಿದೆ. ಸಿಸಿ ರಸ್ತೆ ಮಾಡಿಸಿದ್ದೇನೆ. ಮೊದಲ ಬಾರಿಗೆ ಇಲ್ಲಿಗೆ ಬಂದಾಗ ಸಂಚರಿಸಲು ರಸ್ತೆಯಿರಲಿಲ್ಲ. ಒಂದು ಬೂತ್ ನಿರ್ಮಾಣ ಮಾಡಿ ಮತದಾನದ ಮೂಲಕ ನಿಮ್ಮ ಹಕ್ಕು ಚಲಾಯಿಸುವ ಅವಕಾಶ ಕಲ್ಪಿಸಿದ್ದೇನೆ. ಆಂಜನೇಯಸ್ವಾಮಿ ದೇವಸ್ಥಾನಕ್ಕೆ 10 ಲಕ್ಷ ರು. ಕೊಟ್ಟಿದ್ದೇನೆ. ಸಿಸಿ ರಸ್ತೆಗೆ 20 ಲಕ್ಷ ರು. ಖರ್ಚು ಮಾಡಿದ್ದೇನೆ. ಸಣ್ಣ ಹಳ್ಳಿಗೆ 2.20 ಕೋಟಿ ರು. ಮಂಜೂರು ಮಾಡಿದ್ದೇನೆಂದು ಹೇಳಿದರು.ಕಾಂಗ್ರೆಸ್ ಶಾಸಕರಿಗೆ ರಾಜ್ಯ ಸರ್ಕಾರದಲ್ಲಿ ಹಣವಿಲ್ಲದಂತಾಗಿದೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ನಾನು ಅನುದಾನ ತಂದು ದಿನನಿತ್ಯವೂ ಕೋಟ್ಯಾಂತರ ರು. ಕಾಮಗಾರಿಗಳ ಕೆಲಸ ಮಾಡಿಸುತ್ತಿದ್ದೇನೆ. 23 ಕೋಟಿ ರು. ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣವಾಗುತ್ತಿದೆ. ಡಿಸೆಂಬರ್ ಒಳಗೆ ಕೆರೆಯಾಗಳಹಳ್ಳಿ ಕೆರೆಗೆ ನೀರು ತುಂಬಿಸುತ್ತೇನೆ. 267 ಕೋಟಿ ರು. ಖರ್ಚು ಮಾಡಿ ಹಿರಿಯೂರಿನ ವಾಣಿ ವಿಲಾಸ ಸಾಗರದಿಂದ ನೀರು ತಂದು ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು. ಭರಮ ಸಾಗರದಲ್ಲಿ ಪ್ರಥಮ ಬಾರಿಗೆ ಚುನಾವಣೆಗೆ ನಿಂತಾಗ ಜನರ ಬಳಿ ಹೋಗಿ ಮತ ಕೇಳಲು ರಸ್ತೆಗಳಿರಲಿಲ್ಲ. ಗೆದ್ದ ನಂತರ 386 ಹಳ್ಳಿಗಳಲ್ಲಿಯೂ ರಸ್ತೆ ಮಾಡಿಸಿದ್ದರಿಂದ ರಸ್ತೆ ರಾಜ ಎನ್ನುವ ಬಿರುದು ನೀಡಿ 2ನೇ ಬಾರಿಗೂ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರು ಎಂದರು.
ಉಪ್ಪರಿಗೇನಹಳ್ಳಿಯಲ್ಲಿ ಇಂಗ್ಲಿಷ್ ಮೀಡಿಯಂ ಶಾಲೆ ಕೊಡಲಾಗುವುದು. ಇದಲ್ಲದೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೂಡ ಮಂಜೂರು ಮಾಡಿಸುತ್ತೇನೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ನನ್ನ ಜವಾಬ್ದಾರಿ ಎಂದು ಶಾಸಕ ಡಾ.ಎಂ.ಚಂದ್ರಪ್ಪ ನುಡಿದರು.ಬಿಜೆಪಿ ಮುಖಂಡ ಚಂದ್ರಪ್ಪ ಮಾತನಾಡಿ, ರೈತರಿಗೆ ಜೀವನಾಡಿಯಾಗಿರುವ ನೀರು ಮತ್ತು ವಿದ್ಯುತ್ ಇವರೆಡೆ ನಮಗೆ ಬೇಕಾಗಿರುವುದು. ಶಾಸಕ ಡಾ.ಎಂ.ಚoದ್ರಪ್ಪನವರು ವಿರೋಧ ಪಕ್ಷದಲ್ಲಿದ್ದರೂ ಇಡಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಿರಂತರವಾಗಿ ನಡೆಯುತ್ತಿದೆ. ಸರ್ಕಾರದಿಂದ ಹಣ ತರುವುದು ಸಾಮಾನ್ಯವಲ್ಲ. ಎಂದಿಗೂ ಜಾತಿ ರಾಜಕಾರಣ ಮಾಡಿದವರಲ್ಲ. ಎಲ್ಲಾ ಜಾತಿ ಧರ್ಮದವರನ್ನು ಸಮಾನವಾಗಿ ಕಾಣುವಂತ ಜಾಣತನ ಅವರಲ್ಲಿದೆ. ಯಾರ ಬಗ್ಗೆಯೂ ಟೀಕೆ, ಟಿಪ್ಪಣಿ ಮಾಡಲ್ಲ. ಅಭಿವೃದ್ಧಿಯೇ ಅವರ ಮೂಲ ಮಂತ್ರ. ಮುಂದಿನ ಚುನಾವಣೆಯಲ್ಲಿಯೂ ಶಾಸಕ ಡಾ.ಎಂ.ಚಂದ್ರಪ್ಪನವರನ್ನು ಗೆಲ್ಲಿಸುವಂತೆ ಜನತೆಯಲ್ಲಿ ಮನವಿ ಮಾಡಿದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಗೌರಮ್ಮ, ಮಾಜಿ ಅಧ್ಯಕ್ಷರಾದ ಪ್ರವೀಣ್, ಮಂಜುನಾಥ್, ರಾಜಣ್ಣ, ನಾಗರಾಜಪ್ಪ, ಮಾದಣ್ಣ, ಎಲೆ ರಾಜಪ್ಪ, ರಾಜಣ್ಣ, ಶ್ರೀನಿವಾಸ್ ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.