ಕನ್ನಡಪ್ರಭ ವಾರ್ತೆ ಹೊನ್ನಾಳಿ
ರಾಜ್ಯದಲ್ಲಿರುವ ಕುರುಬ ಸಮಾಜ ಅತ್ಯಂತ ಹಿಂದುಳಿದ ಸಮುದಾಯವಾಗಿದೆ. ಶೇ.85ರಷ್ಟು ಜನ ಬಡವರು, ಅನಕ್ಷರಸ್ಥರು, ಆರ್ಥಿಕವಾಗಿ ತೀರಾ ಹಿಂದುಳಿದಿದ್ದಾರೆ. ಅವರಿಗೆ ಸಮೀಕ್ಷೆ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಹೀಗಾಗಿ ಅವರು ಜಾತಿಯ ಕಾಲಂ ನಂಬರ್ 9ರಲ್ಲಿ ಕುರುಬ ಎಂದಷ್ಟೇ ಬರೆಸಬೇಕು. ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸಬೇಕು ಎಂದು ಕುರುಬ ಸಮಾಜದ ತಾಲೂಕು ಅಧ್ಯಕ್ಷ ಎಂ.ಎಸ್. ಫಾಲಾಕ್ಷಪ್ಪ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸಮೀಕ್ಷಾ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದ ಅವರು, ರಾಜ್ಯದಲ್ಲಿರುವ ಪ್ರತಿಯೊಂದು ಜಾತಿ ಜನಾಂಗ ಎಷ್ಟಿದೆ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಎಷ್ಟು ಹಿಂದುಳಿದಿದ್ದಾರೆ ಎಂದು ತಿಳಿಯುವುದೇ ಈ ಸಮೀಕ್ಷೆಯ ಉದ್ದೇಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಇದು ನಮ್ಮ ಕುರುಬ ಸಮಾಜಕ್ಕೂ ಅನುಕೂಲವಾಗಲಿದೆ. ಆದ್ದರಿಂದ ನಮ್ಮ ಜನಾಂಗದವರು ಜಾತಿಯ ಹೆಸರಿನ ಜೊತೆಗೆ ಕುಲಕಸುಬನ್ನು ಬರೆಸಬೇಕು. ಇದರಿಂದ ನಮ್ಮ ಜನಾಂಗದ ನಿಖರ ಅಂಕಿ ಸಂಖ್ಯೆಗಳ ಜೊತೆಗೆ ಆರ್ಥಿಕ ಸ್ಥಾನಮಾನವೂ ತಿಳಿದುಬರಲಿದೆ ಎಂದರು.
ನಮ್ಮವರ ಉದ್ಯೋಗ ಕುರಿ ಕಾಯುವುದು, ಗಾರೆ ಕೆಲಸ, ಕೂಲಿ ಕೆಲಸವೇ ಮುಖ್ಯವಾಗಿದೆ. ಇಂಥವರ ಮನೆಗಳಿಗೆ ಹೋಗಿ ಜಾಗೃತಿ ಮೂಡಿಸುವ ಕೆಲಸವನ್ನು ಶಿಕ್ಷಣ ಪಡೆದ ನಮ್ಮ ಸಮುದಾಯದ ಯುವಕರು ಮಾಡಬೇಕಾಗಿದೆ ಎಂದರು.ಸಭೆಯಲ್ಲಿ ಕುರುಬ ಸಮಾಜದ ಕಾರ್ಯಾಧ್ಯಕ್ಷ ಬಾಬು ಹೊಬಳದಾರ್, ಉಪಾಧ್ಯಕ್ಷ ಗಾಳಿ ನಾಗರಾಜ್, ಕಾಯಿಬುರುಡೆ ಸಣ್ಣಸಿದ್ದಪ್ಪ, ಮುಖಂಡರಾದ ಎಸ್.ಎಸ್. ಬೀರಪ್ಪ, ಇಂಚರ ನವೀನ್, ಇಂಚರ ಮಂಜುನಾಥ್, ಪುರಸಭೆ ಸದಸ್ಯ ರಂಗನಾಥ್, ಎಂ.ಸುರೇಶ್, ರಾಜ್ಯ ಯುವಕಾಂಗ್ರೆಸ್ ಕಾರ್ಯದರ್ಶಿ ಎಚ್.ಎಸ್. ರಂಜಿತ್, ಕುಂಬಳೂರು ಬೀರಪ್ಪ, ತಾ ಯುವ ಕಾಂಗ್ರೆಸ್ ಅಧ್ಯಕ್ಷ ಮನು ವಾಲಜ್ಜಿ, ಹಾಲುಮತ ಸಭಾದ ಅಧ್ಯಕ್ಷ ರಾಜುಕಣಗಣ್ಣಾರ್, ರಾಘವೇಂದ್ರ, ಪಿರಿಗಿ ಹಳದಪ್ಪ, ಕರವೇ ಅಧ್ಯಕ್ಷ ಶ್ರೀನಿವಾಸ್, ಗುಡ್ಡಜ್ಜಿ ಮೂರ್ತೆಪ್ಪ, ತಮ್ಮಣ್ಣ,ತಗ್ಗಿಹಳ್ಳಿ ದಾನಪ್ಪ ಸೇರಿದಂತೆ ಕುರುಬ ಸಮಾಜದ ಅನೇಕ ಮುಖಂಡರು ಹಾಜರಿದ್ದರು.
- - -(ಬಾಕ್ಸ್) * ಸರ್ವೇ ಕಾರ್ಯ ವ್ಯರ್ಥವಾಗಬಾರದು: ಸಿದ್ದಪ್ಪ ಮುಖಂಡ ಬಿ.ಸಿದ್ದಪ್ಪ ಮಾತನಾಡಿ, ತಾಲೂಕಿನಲ್ಲಿ ನಮ್ಮ ಕುರುಬ ಸಮಾಜದವರು ಒಂದೇ ಒಂದು ಮನೆಯನ್ನು ಬಿಡದಂತೆ ಸಮೀಕ್ಷೆಗೊಳಪಡಿಸಬೇಕು. ಸರ್ವೇ ಕಾರ್ಯ ಈ ಬಾರಿ ವ್ಯರ್ಥವಾಗಬಾರದು. ನಮ್ಮ ಸಮಾಜದಲ್ಲಿಯೂ ಕೆಲ ಒಳಪಂಗಡಗಳಿವೆ. ಗೊಂಡ ಕುರುಬ, ಬೆಟ್ಟ ಕುರುಬ, ಜೇನುಕುರುಬ, ಹಾಲುಮತ ಸೇರಿದಂತೆ ಇತರ ಹೆಸರುಗಳಲ್ಲಿ ಅವರನ್ನು ಕರೆಯಲಾಗುತ್ತದೆ. ಇಂಥವರು ಕೇವಲ ಕುರುಬ ಎಂದಷ್ಟೇ ಬರೆಸಬೇಕು ಎಂದು ಮನವಿ ಮಾಡಿದರು.
- - --21ಎಚ್.ಎಲ್.ಐ2:
ಹೊನ್ನಾಳಿಯಲ್ಲಿ ರಾಜ್ಯ ಸರ್ಕಾರದ ಸಮೀಕ್ಷೆ ಕುರಿತು ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಕುರುಬ ಸಮಾಜ ಎಂದು ಬರೆಸುವಂತೆ ತೀರ್ಮಾನ ಕೈಗೊಂಡ ಸಂದರ್ಭ ಪದಾಧಿಕಾರಿಗಳು ಒಗ್ಗಟ್ಟು ಪ್ರದರ್ಶನ ಮಾಡಿದರು.