ಕನ್ನಡಪ್ರಭ ವಾರ್ತೆ ಸಿರಿಗೆರೆ
ಮೂರು ದಿನಗಳ ಕಾಲದ ಶ್ರದ್ಧಾಂಜಲಿಗೆ ನಾಡಿನ ಹಲವು ಭಾಗಗಳಿಂದ ಬರುವ ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಅದಕ್ಕಾಗಿ ಕಾರ್ಯಕರ್ತರ ತಂಡ ಸಿದ್ಧಗೊಂಡಿದೆ.
ಗುರುಶಾಂತೇಶ್ವರ ದಾಸೋಹ ಭವನದ ಪಕ್ಕದಲ್ಲಿ ಬೃಹತ್ ಮಹಾಮಂಟಪವನ್ನು ನಿರ್ಮಾಣ ಮಾಡಲಾಗಿದೆ. ಮಂಟಪದ ಒಳಗೆ 5 ಸಾವಿರ ಜನರು ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಮಹಾಮಂಟಪಕ್ಕೆ ಹೊಂದಿಕೊಂಡಂತೆ ವಿಶಾಲ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ವೇದಿಕೆ, ಧ್ವನಿವರ್ಧಕ, ಬೆಳಕಿನ ವ್ಯವಸ್ಥೆ ಹಾಗೂ ಮಂಟಪದ ಹೊರಗಡೆ ಕುಳಿತು ಕಾರ್ಯಕ್ರಮ ವೀಕ್ಷಿಸಲು ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ.ಸಭಾ ಮಂಟಪದಿಂದ ಒಂದಿಷ್ಟು ದೂರದಲ್ಲಿಯೇ ದಾಸೋಹ ಮಂಟಪಗಳನ್ನು ನಿರ್ಮಿಸಲಾಗಿದೆ. ಸಮಾರಂಭಕ್ಕೆ ಆಗಮಿಸುವ ಭಕ್ತರಿಗೆ ಇಲ್ಲಿ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ. ನಿತ್ಯವೂ ಸುಮಾರು 25 ಸಹಸ್ರ ಜನರಿಗಾಗುವಷ್ಟು ಊಟೋಪಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಡಿಗೆ ಸಿದ್ಧಗೊಳಿಸಲು ನುರಿತ ತಂಡಗಳಿಗೆ ಗುತ್ತಿಗೆ ನೀಡಲಾಗಿದೆ. ಮಂಟಪದ ಒಳಗೆ ಬಫೆ ಮತ್ತು ಕುಳಿತು ಊಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ಬಫೆ ಊಟ ಇಚ್ಚಿಸುವವರು ಸರದಿಯಲ್ಲಿ ಸಾಗಲು ಅನುಕೂಲವಾಗುವಂತೆ ಕೌಂಟರುಗಳ ಬಳಿ ಬ್ಯಾರಿಕೇಡ್ ನಿರ್ಮಿಸಲಾಗಿದೆ.
22ರ ಬೆಳಗ್ಗೆ 11 ಗಂಟೆಗೆ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಶ್ರಯದ ಶಾಲಾ ಕಾಲೇಜುಗಳಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುವುದು.
ಸಂಜೆ 6 ಗಂಟೆಗೆ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಬೆಂಗಳೂರಿನ ಬೇಲಿಮಠದ ಶಿವರುದ್ರ ಸ್ವಾಮೀಜಿ ಆಶೀರ್ವಚನ ನೀಡುವರು. ಸಂಸದ ಗೋವಿಂದ ಕಾರಜೋಳ, ಶಾಸಕ ಕೆ.ಎಸ್. ಬಸವಂತಪ್ಪ, ಬಿ. ದೇವೇಂದ್ರಪ್ಪ, ಶಿವಮೊಗ್ಗ ಕೃಷಿ ವಿವಿ ಕುಲಪತಿ ಆರ್.ಸಿ. ಜಗದೀಶ್, ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ಬೆಸ್ಕಾಂ ಅಧೀಕ್ಷಕ ಅಭಿಯಂತರ ಕೆ.ಸಿ. ಕೋಮಲ, ಚಿತ್ರನಟ ಶ್ರೀಧರ್ ಮುಂತಾದವರು ಭಾಗಿಯಾಗುವರು.
24 ರಂದು ಬೆಳಗ್ಗೆ 11 ಗಂಟೆಗೆ ನಡೆಯುವ ಶ್ರದ್ಧಾಂಜಲಿ ಸಮಾರಂಭದಲ್ಲಿ ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಗುರುವಂದನೆ ಮಾಡುವರು. ಎಚ್.ಆರ್. ಬಸವರಾಜಪ್ಪ ಅಧ್ಯಕ್ಷತೆ ವಜಹಿಸುವರು. ಮುಖ್ಯ ಅತಿಥಿಗಳಾಗಿ ಬಸವರಾಜ ಬೊಮ್ಮಾಯಿ, ಬಸವರಾಜ ಹೊರಟ್ಟಿ, ಕೃಷ್ಣ ಭೈರೇಗೌಡ, ಎಸ್. ಎಸ್. ಮಲ್ಲಿಕಾರ್ಜುನ್, ಜಿ.ಎಂ. ಸಿದ್ದೇಶ್ವರ್, ಡಿ.ಸುಧಾಕರ್ ಹಾಗೂ ಹಲವು ಶಾಸಕರು ಭಾಗವಹಿಸುವರು.