ಯಾರೂ ಕೇಳಿದರೆ ರಾಜೀನಾಮೆ ಕೊಡಲು ಆಗುವುದಿಲ್ಲ- ಗೆಲ್ಲಿಸಿದ ಜನರಿಗೆ ನಾನು ಬದ್ಧವಾಗಿದ್ದೇನೆ : ಸಂಸದ ಜಿ.ಕುಮಾರ ನಾಯಕ

KannadaprabhaNewsNetwork | Updated : Feb 27 2025, 04:54 AM IST

ಸಾರಾಂಶ

ಯಾರೂ ಕೇಳಿದರೆ ರಾಜೀನಾಮೆ ಕೊಡಲು ಆಗುವುದಿಲ್ಲ, ನನ್ನನ್ನು ಗೆಲ್ಲಿಸಿದ ಜನರಿಗೆ ನಾನು ಬದ್ಧವಾಗಿದ್ದೇನೆ ಎಂದು ಸಂಸದ ಜಿ.ಕುಮಾರ ನಾಯಕ ಸ್ಪಷ್ಟಪಡಿಸಿದರು.

  ರಾಯಚೂರು : ಯಾರೂ ಕೇಳಿದರೆ ರಾಜೀನಾಮೆ ಕೊಡಲು ಆಗುವುದಿಲ್ಲ, ನನ್ನನ್ನು ಗೆಲ್ಲಿಸಿದ ಜನರಿಗೆ ನಾನು ಬದ್ಧವಾಗಿದ್ದೇನೆ ಎಂದು ಸಂಸದ ಜಿ.ಕುಮಾರ ನಾಯಕ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಕೇಸ್‌ ನಲ್ಲಿ ಕರ್ವತ್ಯ ಲೋಪವಾಗಿದೆ ಎಂದು ಲೋಕಾಯುಕ್ತ ಪೊಲೀಸರ ವರದಿ ಬಹಿರಂಗೊಂಡಿದ್ದು, ಈ ಹಿನ್ನೆಲೆಯಲ್ಲಿ ಹಿಂದಿನ ಮೈಸೂರು ಡಿಸಿ ಹಾಗೂ ಹಾಲಿ ಸಂಸದ ಜಿ.ಕುಮಾರ ನಾಯಕ ರಾಜೀನಾಮೆ ನೀಡಬೇಕು ಎಂದು ವಿಪಕ್ಷದವರು ರಾಜೀನಾಮೆ ಕೇಳುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ರಾಜೀನಾಮೆ ಯಾರು ಕೇಳುತ್ತಿಲ್ಲ, ನಿಯಮಾನುಸಾರವೇ ಭೂಮಿ ಮಂಜೂರು ಮಾಡಿದ್ದು ಮುಂಚೆಯಿಂದಲೂ ಅದನ್ನೇ ಹೇಳುತ್ತಿದ್ದೇನೆ.

ಇದೀಗ ಲೋಕಾ ವರದಿಯು ಯಾವ ರೀತಿಯಲ್ಲಿ ಇದೆ ಎಂಬುವುದು ಗೊತ್ತಿಲ್ಲ ಆದರೆ ವಿಪಕ್ಷದ ನಾಯಕರು ರಾಜೀನಾಮೆ ಕೇಳುತ್ತಿದ್ದಾರೆ. ಅದಕ್ಕೆ ನಾನು ಏನು ಹೇಳಲು ಆಗುವುದಿಲ್ಲ ಎಂದರು.

ಕೇಂದ್ರ ಸರ್ಕಾರವು ಹಣಕಾಸು ಆಯೋಗದ ಶಿಫಾರಸ್ಸಿನ ಅನ್ವಯ ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ವ್ಯತ್ಯಾಸ ಮಾಡಿದೆ. ಅನುದಾನದಲ್ಲಿ ಆಗುತ್ತಿರುವ ವ್ಯತ್ಯಾಸದ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತಂದರೂ ಹಣಕಾಸು ಆಯೋಗದ ಶಿಫಾರಸ್ಸಿನ ಕಡೆಗೆ ತೋರಿಸುತ್ತಿದೆ.ಕೇಂದ್ರದಿಂದ ರಾಜ್ಯಕ್ಕೆ ಎರಡು ರೀತಿಯಲ್ಲಿ ಅನುದಾನ ಹಂಚಿಕೆಯಾಗುತ್ತದೆ. ಒಂದು ಹಣಕಾಸು ಆಯೋಗದ ಶಿಫಾರಸ್ಸು, ಇನ್ನೊಂದು ಪ್ರತಿವರ್ಷ ನಡೆಯುವ ಬಜೆಟ್‌ನಲ್ಲಿ ಘೋಷಣೆಯಾಗುತ್ತದೆ. ರಾಜ್ಯಕ್ಕೆ ಬೇಕಾಗುವ ಅನುದಾನದ ಪ್ರಸ್ತಾವನೆ ಸಲ್ಲಿಸಬಹುದು. ಆದರೆ, ಆಯೋಗ ಶಿಫಾರಸ್ಸು ಮಾಡುವ ಅನುದಾನದ ಹಂಚಿಕೆ ವಿಚಾರಗಳು ಐದು ವರ್ಷದವರೆಗೆ ಉಳಿಯುತ್ತದೆ. ಇದರಿಂದ ರಾಜ್ಯಕ್ಕೆ ಅನ್ಯಾಯವಾಗುತ್ತದೆ ಎಂದು ಸಂಸದ ಜಿ.ಕುಮಾರ ನಾಯಕ ಅವರು ಅಸಮಾಧಾನ ವ್ಯಕ್ತಪಡಿಸಿದರು.

ದೇಶದ ಬೇರೆ ರಾಜ್ಯಗಳಿಗೆ ಯಾವ ರೀತಿಯಲ್ಲಿ ಅನುದಾನವನ್ನು ಸರ್ಕಾರ ನೀಡುತ್ತದೆ. ಅದೇ ಮಾದರಿಯಲ್ಲಿ ಕರ್ನಾಟಕ ರಾಜ್ಯಕ್ಕೂ ನೀಡಬೇಕು. ರಾಜ್ಯದ ಅಭಿವೃದ್ಧಿಗಾಗಿ ಅಗತ್ಯ ಅನುದಾನವನ್ನು ಕೇಂದ್ರ ನೀಡಬೇಕು ಎಂದು ಆಗ್ರಹಿಸಿದರು.

ರಾಯಚೂರು ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಹಾಗೂ ಏಮ್ಸ್ ಸ್ಥಾಪನೆಯಾಗಬೇಕಿದೆ. ಈಗಾಗಲೇ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಅನುಮತಿ ದೊರಕಿದೆ. ಏಮ್ಸ್ ಸ್ಥಾಪನೆಗೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು. 

Share this article