ಕನ್ನಡಪ್ರಭ ವಾರ್ತೆ ಅಥಣಿ
ಆಧುನಿಕತೆಯಿಂದ ಜಾನಪದ ಮತ್ತು ರಂಗಭೂಮಿ ಕಲೆಗಳು ನಶಿಸುತ್ತಿದ್ದು, ಕಲಾವಿದರು ಎಲೆಮರೆ ಕಾಯಿಯಂತೆ ಕಲೆಯ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ. ಸಂಘ ಸಂಸ್ಥೆಗಳು ಹಾಗೂ ಸರ್ಕಾರ ಅಂತಹ ಕಲಾವಿದರನ್ನು ಗುರುತಿಸಿ, ಸರ್ಕಾರಿ ಸವಲತ್ತುಗಳನ್ನು ನೀಡಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಹೇಳಿದರು.ಪಟ್ಟಣದ ಸುಕ್ಷೇತ್ರ ಗಚ್ಚಿನಮಠದ ಸಭಾಂಗಣದಲ್ಲಿ ರೋಟರಿ ಸಂಸ್ಥೆ ಹಾಗೂ ಮಂಗಸೂಳಿ ಪ್ರತಿಷ್ಠಾನದಿಂದ ಆಯೋಜಿಸಿದ್ದ ನಿನಾಸಂ ನಾಟಕೋತ್ಸವ -2025ರ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ನಾಟಕಗಳು ಸಮಾಜದ ಕನ್ನಡಿಯಂತೆ ಕೆಲಸ ಮಾಡುತ್ತವೆ. ರಂಗಭೂಮಿ ಕಲೆ ಕಣ್ಮರೆಯಾಗುತ್ತಿರುವ ದಿನಗಳಲ್ಲಿ ರೋಟರಿ ಸಂಸ್ಥೆ ಮೂಲಕ ಗಜಾನನ ಮಂಗಸುಳಿ ನಾಟಕೋತ್ಸವ ಏರ್ಪಡಿಸಿ ಕಲಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟು, ಕಲೆಗೆ ಪ್ರೋತ್ಸಾಹ ನೀಡುತ್ತಿರುವುದು ಸ್ವಾಗತಾರ್ಹ ಎಂದರುರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸುಳಿ ಮಾತನಾಡಿ, ರಂಗಭೂಮಿ ಕಲೆ ಸಮಾಜದ ಒಂದು ಪ್ರತಿಬಿಂಬ ಇದ್ದಂತೆ. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಮೂಲಕ ಆದರ್ಶ ಬದುಕಿಗೆ ಪ್ರೇರಣೆಯಾಗಿವೆ. ಯುವ ಜನಾಂಗಕ್ಕೆ ಜನಪದ ಕಲೆ, ರಂಗಭೂಮಿ ಕಲೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಯಿಂದ ಈ ನಾಟಕೋತ್ಸವ ಆರಂಭಿಸಲಾಗಿದೆ. ಕಲಾಭಿಮಾನಿಗಳು ರಂಗಭೂಮಿ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಕರೆ ನೀಡಿದರು. ಆರ್‌ಎಸ್‌ಎಸ್ ಮುಖಂಡ ಅರವಿಂದರಾವ ದೇಶಪಾಂಡೆ, ಹಿರಿಯ ಸಾಹಿತಿಗಳಾದ ಡಾ.ಬಾಳಾಸಾಹೇಬ ಲೋಕಾಪುರ, ಅಪ್ಪಾ ಸಾಹೇಬ ಅಲಿಬಾದಿ, ಯುವ ಮುಖಂಡ ಶಿವಾನಂದ ಗುಡ್ಡಾಪುರ ಮಾತನಾಡಿದರು. ರೋಟರಿ ಸಂಸ್ಥೆ ಅಧ್ಯಕ್ಷ ಸಚಿನ್ ದೇಸಾಯಿ, ಕಾರ್ಯದರ್ಶಿ ಶೇಖರ ಕೋಲಾರ, ಖಜಾಂಚಿ ಸಂತೋಷ ಬೊಮ್ಮಣ್ಣವರ, ನಾಟಕ ನಿರ್ದೇಶಕ ಡಾ.ಎಂ.ಗಣೇಶ, ಅರುಣ ಯಲಗುದ್ರಿ, ಸುರೇಶ್ ಅಥಣಿ, ಬಾಲಚಂದ್ರ ಬುಕಿಟಗಾರ ಸೇರಿ ಇತರರು ಇದ್ದರು.