ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನ್ಯೂನ್ಯತೆಗಳ ಬಗ್ಗೆ ಮುನ್ನೆಚ್ಚರಿಕೆವಹಿಸಿ ಸರಿಪಡಿಸುವ ಮೂಲಕ ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡುವಂತೆ ತಿಳಿಸಿದರಲ್ಲದೆ, ದ್ವಿಚಕ್ರ ವಾಹನ ಚಾಲನೆಯಿಂದ ಅಪಘಾತಗಳು ಸಂಭವಿಸಿ, ಹೆಚ್ಚು ಜನರು ಮೃತಪಟ್ಟಿರುತ್ತಾರೆ, ಇದನ್ನು ತಡೆಗಟ್ಟಲು ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ನಾಲ್ಕು ಚಕ್ರದ ವಾಹನದಲ್ಲಿ ಮುಂದಿನ ಹಾಗೂ ಹಿಂದಿನ ಸೀಟುಗಳಲ್ಲಿ ಕುಳಿತುಕೊಳ್ಳುವವರು ಪ್ರಾಣ ರಕ್ಷಣೆಗಾಗಿ ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕುವಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮವಹಿಸಲು ನಿರ್ದೇಶನ ನೀಡಿದರು.
ಕಳೆದ ಆರು ತಿಂಗಳಲ್ಲಿ ಅಪಘಾತಗಳಿಂದ ಜಿಲ್ಲೆಯ ನಗರ ವ್ಯಾಪ್ತಿಯಲ್ಲಿ ೨೮೧ ಹಾಗೂ ಗ್ರಾಮೀಣ ಪ್ರದೇಶದಲ್ಲಿ ೧೭೦ ಜನರು ಮೃತಪಟ್ಟಿದ್ದಾರೆ, ಇದನ್ನು ಗಂಭೀರವಾಗಿ ಪರಿಗಣಿಸಿ ಅಪಘಾತಗಳು ಸಂಭವಿಸದಂತೆ ತಡೆಗಟ್ಟಲು ಅಧಿಕಾರಿಗಳು ಹೆಚ್ಚಿನ ಗಮನಹರಿಸಬೇಕು ಎಂದು ತಿಳಿಸಿದರು.ವಾಹನಗಳ ಚಲಾಯಿಸುವ ಬಗ್ಗೆ ಪ್ರತಿಯೊಬ್ಬರಿಗೂ ಶಿಕ್ಷಣದ ಅಗತ್ಯವಿದೆ, ಈ ನಿಟ್ಟಿನಲ್ಲಿ ಸಂಚಾರಿ ನಿಯಮಗಳ ಕುರಿತು ಕಲಾ ತಂಡಗಳಿಂದ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲು ಹೇಳಿದರಲ್ಲದೆ, ಪದವಿಪೂರ್ವ ಕಾಲೇಜುಗಳಲ್ಲಿ ರಸಪ್ರಶ್ನೆ ಕಾರ್ಯಕ್ರಮ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿ ತಿಂಗಳ ಎರಡನೇ ಮಂಗಳವಾರ ಸಂಜೆ ೬ ಗಂಟೆಗೆ ರಸ್ತೆ ಸುರಕ್ಷಾತಾ ಸಮಿತಿಯ ವರ್ಚುವಲ್ ಸಭೆ, ಹಾಗೂ ೪ನೇ ಮಂಗಳವಾರ ಮಧ್ಯಾಹ್ನ ೩ ಗಂಟೆಗೆ ಭೌದ್ಧಿಕ ಸಭೆಯನ್ನು ನಡೆಸಲಾಗುವುದು ಎಂದ ಜಿಲ್ಲಾಧಿಕಾರಿ ಅವರು, ತಾಲೂಕು ಮಟ್ಟದಲ್ಲಿಯೂ ಕಡ್ಡಾಯವಾಗಿ ತಹಸೀಲ್ದಾರ್‌ಗಳು ರಸ್ತೆ ಸುರಕ್ಷಾತಾ ಸಮಿತಿ ಸಭೆಯನ್ನು ನಡೆಸಿ ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು.
ಪಾದಚಾರಿಗಳ ಮಾರ್ಗಗಳು ಪಾದಚಾರಿಗಳಿಗೆ ಮುಕ್ತವಾಗಿರುವಂತೆ ಹಾಗೂ ಯಾವುದೇ ಅತಿಕ್ರಮಣವಾಗಿದ್ದಲ್ಲಿ ಕೂಡಲೇ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಅಪಘಾತಗಳು ಸಂಭವಿಸಿದಾಗ ಗೋಲ್ಡನ್ ಹವರ್‌ನಲ್ಲಿ ಪ್ರಾಣ ಉಳಿಸಲು ಆಸ್ಪತ್ರೆಗಳಲ್ಲಿ ತುರ್ತು ವೈದ್ಯಕೀಯ ಸೇವೆ ಒದಗಿಸಲು ಆಸ್ಪತ್ರೆಗಳನ್ನು ನೋಟಿಪೈ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರಲ್ಲದೆ, ಆ್ಯಂಬುಲೆನ್ಸ್‌ಗಳು ಬಳಕೆಗೆ ಯೋಗ್ಯವಾಗಿವೆಯೇ ಎಂದು ಪರಿಶೀಲಿಸುವಂತೆ ಸೂಚಿಸಿ, ರಾಷ್ಟ್ರೀಯ ಹೆದ್ದಾರಿಯ ಸಹಾಯವಾಣಿ ಸಂಖ್ಯೆ ೧೦೩೩ ಗೂ ಕರೆ ಮಾಡಬಹುದಾಗಿದೆ ಎಂದು ಸಲಹೆ ನೀಡಿದರು.
ಜೆಜೆಎಂ ಯೋಜನೆಯಡಿ ಕಾಮಗಾರಿ ಮಾಡುವ ಸಂದರ್ಭದಲ್ಲಿ ರಸ್ತೆಗಳನ್ನು ಹಾಗೂ ರಸ್ತೆ ಬದಿಗಳಲ್ಲಿ ಗುಂಡಿ ತೆಗೆದಿದ್ದು, ಅವುಗಳನ್ನು ಮುಚ್ಚಿಲ್ಲದಿರುವ ಕಾರಣ ಅಪಘಾತಗಳು ಸಂಭವಿಸುತ್ತಿವೆ. ಇವುಗಳನ್ನು ಮುಚ್ಚಲು ಕ್ರಮವಹಿಸುವಂತೆ ಸೂಚಿಸಿದರು.
ಆ.೧ ರಂದು ವಾಹನ ಚಾಲಕರುಗಳಿಗೆ ಹೃದಯ ಸಂಬಂಧಿ ಆರೋಗ್ಯ ತಪಾಸಣೆಯನ್ನು ನಗರದ ಹಾಸನಾಂಬೆ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ ಎಂದು ತಿಳಿಸಿದರು.