ಕನ್ನಡಪ್ರಭ ವಾರ್ತೆ ಪುತ್ತೂರು
ಗಾಳಿ ಇದೆ, ಮಳೆ ಇದೆ ಎಂಬ ಉತ್ತರ ನನಗೆ ಬೇಡ. ಮಳೆಗೆ ಏನೇ ಅನಾಹುತವಾದರೂ ಅದನ್ನು ದುರಸ್ತಿ ಮಾಡಿ ಜನರಿಗೆ ವಿದ್ಯುತ್ ಕೊಡಬೇಕಾಗಿದ್ದು ನಿಮ್ಮ ಇಲಾಖೆಯವರ ಕರ್ತವ್ಯ. ಕಳೆದ ನಾಲ್ಕು ದಿನಗಳಿಂದ ನನಗೆ ಪದೇ ಪದೇ ಕರೆಗಳು ಬರುತ್ತಿದೆ. ಸಮಸ್ಯೆ ಹೇಳುವುದು ಬೇಡ ಅದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಮೆಸ್ಕಾಂ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.ದುರಸ್ತಿ ಮಾಡಿದರೂ ಟ್ರಿಪ್ ಆಗುತ್ತಿದೆ
ಈ ಬಗ್ಗೆ ಮಾಹಿತಿ ನೀಡಿದ ಜೆ ಇ ಗಳು ನಾವು ನಮ್ಮ ಕೆಲಸ ಮಾಡಿದ್ದೇವೆ, ಮುರಿದು ಬಿದ್ದ ಕಂಬಗಳನ್ನು ಮರು ಜೋಡಣೆ ಮಾಡಿದ್ದೇವೆ. ವಿದ್ಯುತ್ ಚಾರ್ಜ್ ಮಾಡುವಾಗ ಟ್ರಿಪ್ ಆಗುತ್ತಿದೆ. ಭಾರೀ ಮಳೆ ಇರುವ ಕಾರಣ ಕೆಲವು ಕಡೆಗಳಲ್ಲಿ ಮರದ ಗೆಲ್ಲುಗಳು ವಿದ್ಯುತ್ ತಂತಿಗೆ ತಾಗುವುದೇ ಇದಕ್ಕೆ ಕಾರಣ. ನಾವು ಮತ್ತು ಸಿಬ್ಬಂದಿ ಈ ಬಗ್ಗೆ ಕಠಿಣ ಪರಿಶ್ರಮ ವಹಿಸಿ ಕೆಲಸ ಮಾಡುತ್ತಿದ್ದೇವೆ. ಒಂದು ಕಡೆ ದುರಸ್ತಿಯಾಗುವಷ್ಟರಲ್ಲಿ ಇನ್ನೊಂದು ಭಾಗದಲ್ಲಿ ಗಾಳಿಗೆ ಕಂಬಗಳ ಮೇಲೆ ಮರ ಬಿದ್ದು ಮತ್ತೆ ಸಮಸ್ಯೆಯಾಗುತ್ತಿದೆ. ಈ ಕಾರಣಕ್ಕೆ ಕೆಲವು ಕಡೆಗಳಲ್ಲಿ ಕಳೆದ ಮೂರು ದಿನಗಳಿಂದ ಸಮಸ್ಯೆಯಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.ನನ್ನಿಂದ ಏನಾಗಬೇಕು ಹೇಳಿ:ಮೆಸ್ಕಾಂ ಗೆ ನನ್ನಿಂದ ಏನು ಆಗಬೇಕು ಅದನ್ನು ಹೇಳಬೇಕು. ಕಾರ್ಮಿಕರ ಕೊರತೆ ಇದೆಯೇ? ವಾಹನದ ಕೊರತೆ, ಉಪಕರಣಗಳ ಕೊರತೆ ಇದ್ದರೆ ಹೇಳಿ ತಕ್ಷಣ ವ್ಯವಸ್ಥೆ ಮಾಡುತ್ತೇನೆ. ಏನೇ ಸಮಸ್ಯೆ ಇದ್ದರೂ ಅದನ್ನು ಹೇಳದೆ ಮುಚ್ಚಿಡಬೇಡಿ. ನಮಗೆ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಕರೆಂಟ್ ಇಲ್ಲದೇ ಇದ್ದರೆ ಜನ ಕುಡಿಯುವ ನೀರಿಗೂ ಹಾಹಾಕಾರ ಪಡುತ್ತರೆ, ಮೊಬೈಲ್ ಸ್ವಿಚಾಫ್ ಆಗುತ್ತದೆ. ಕರೆಂಟಿಲ್ಲದೇ ಇದ್ದರೆ ಜನರು ಏನೂ ಮಾಡುವಂತಿಲ್ಲ ಎಂಬ ವಿಚಾರ ನಿಮಗೆ ಗೊತ್ತಿದೆ. ಸಮರೋಪಾದಿಯಲ್ಲಿ ಕೆಲಸ ಮಾಡಿ ಸಮಸ್ಯೆಯನ್ನು ಮಂಗಳವಾರ ಮಧ್ಯಾಹ್ನದೊಳಗೆ ಪರಿಹರಿಸಬೇಕು ಎಂದು ಹೇಳಿದರು.ಅಕಾಲಿಕ ಭಾರೀ ಮಳೆಯಿಂದ ವಿದ್ಯುತ್ ಸಮಸ್ಯೆ ಉಂಟಾಗಿದೆ. ಅಲ್ಲಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದ ಕಾರಣ ಪುತ್ತೂರು ನಗರದ ಸೂತ್ರಬೆಟ್ಟು, ಕೆಯ್ಯೂರು ಗ್ರಾಮದ ಕಟ್ಟತ್ತಾರು, ಈಶ್ವರಮಂಗಲ, ಗಾಳಿಮುಖ, ಕೊಳ್ತಿಗೆ, ಪುತ್ತೂರು ನಗರದ ಜಿಡೆಕಲ್ಲು, ಜೈನರ ಗುರಿ, ವಿಟ್ಲದ ಅಳಿಕೆ, ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು, ಪಂಜಳ ಭಾಗದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ. ನಾಳೆಯೇ ಸಮಸ್ಯೆಯನ್ನು ಪರಿಹರಿಸುವಂತೆ ಸೂಚನೆಯನ್ನು ನೀಡಿದ್ದೇನೆ. ಇಲಾಖೆಯೊಂದಿಗೆ ಜನರು ಸಹಕಾರವನ್ನು ನೀಡಬೇಕು. ಈ ತುರ್ತು ಸಂದರ್ಭದಲ್ಲಿ ವಿದ್ಯುತ್ ಗುತ್ತಿಗೆದಾರರನ್ನು ಬಳಸಿಕೊಂಡು ಒಟ್ಟಾಗಿ ಕೆಲಸ ಮಾಡಿ ಸಮಸ್ಯೆಯನ್ನು ಪರಿಹರಿಸಬೇಕು. ಇನ್ನೂ ವಾರ ಕಾಲ ಮಳೆ ಬರಲಿದೆ ಎಂಬ ಮಾಹಿತಿಯೂ ಇದೆ. ಈ ಅನಿರೀಕ್ಷಿತ ಮಳೆಯಿಂದಾದ ಸಮಸ್ಯೆ ಬಗೆಹರಿಸಲು ಮೆಸ್ಕಾಂ ಗೆ ಗುತ್ತಿಗೆದಾರರು ಕೈಜೋಡಸಬೇಕು ಎಂದು ಶಾಸಕರು ಮನವಿ ಮಾಡಿದರು.