ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ‘ಜಾತಿ ಗಣತಿ’ ವರದಿ ಜಾರಿ ಮಾಡದಿದ್ದರೆ ದಂಗೆ: ಶೋಷಿತರಿಂದ ಎಚ್ಚರಿಕೆ

KannadaprabhaNewsNetwork | Updated : Apr 17 2025, 06:47 AM IST

ಸಾರಾಂಶ

  ಸರ್ಕಾರ ವರದಿ ಜಾರಿ ತರದಿದ್ದರೆ ಬೀದಿ ಬೀದಿಯಲ್ಲಿ ದಂಗೆ ಏಳಬೇಕಾಗುತ್ತದೆ ಎಂದು ‘ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಮಹಾಪ್ರಧಾನ ಸಂಚಾಲಕ ಕೆ.ಎಂ. ರಾಮಚಂದ್ರಪ್ಪ ಎಚ್ಚರಿಸಿದ್ದಾರೆ.

 ಬೆಂಗಳೂರು : ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ‘ಜಾತಿ ಗಣತಿ’ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಸಚಿವರು, ರಾಜಕಾರಣಿಗಳ ಮನೆಗೆ ಮುತ್ತಿಗೆ ಹಾಕಿ ಘೇರಾವ್‌ ಹಾಕಲಾಗುವುದು. ರಾಜ್ಯವು ಒಕ್ಕಲಿಗರು, ಲಿಂಗಾಯತರ ಜಹಗೀರು ಅಲ್ಲ. ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ವಯಸ್ಸಾಗಿದೆ, ದುಡ್ಡಿಂದ ಎಲ್ಲವನ್ನೂ ಕೊಂಡುಕೊಳ್ಳಲು ಸಾಧ್ಯವೇ? ಸರ್ಕಾರ ವರದಿ ಜಾರಿ ತರದಿದ್ದರೆ ಬೀದಿ ಬೀದಿಯಲ್ಲಿ ದಂಗೆ ಏಳಬೇಕಾಗುತ್ತದೆ ಎಂದು ‘ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಮಹಾಪ್ರಧಾನ ಸಂಚಾಲಕ ಕೆ.ಎಂ. ರಾಮಚಂದ್ರಪ್ಪ ಎಚ್ಚರಿಸಿದ್ದಾರೆ.

ಜಾತಿ ಗಣತಿ ವರದಿ ಜಾರಿ ವಿರೋಧಿಸಿ ಕೆಲ ರಾಜಕೀಯ ನಾಯಕರು ಹಾಗೂ ಸಮುದಾಯ ಮುಖಂಡರು ಸಭೆ ನಡೆಸಿ, ಹೇಳಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಇಲ್ಲಿ ನಡೆದ ಒಕ್ಕೂಟದ ಮುಖಂಡರ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ವರದಿ ಜಾರಿಗೆ ವಿರೋಧ ವ್ಯಕ್ತಪಡಿಸುವವರ ಮನವೊಲಿಸಬೇಕು, ಒಂದು ವೇಳೆ ಅದಕ್ಕೆ ಒಪ್ಪದೇ ‘ಉದ್ಧಟತನ’ ಮಾಡಿದರೆ ಅವರ ವಿರುದ್ಧ ಬೀದಿಬೀದಿಯಲ್ಲಿ ಹಾಗೂ ರಾಜಕೀಯವಾಗಿ ಸ್ಥಳೀಯ ಮಟ್ಟದಿಂದ ರಾಜ್ಯಮಟ್ಟದವರೆಗೆ ಹೋರಾಡಬೇಕು. ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ವರದಿ ಜಾರಿ ಪ್ರಕ್ರಿಯೆ ಆರಂಭಿಸಬೇಕು. ವರದಿ ಜಾರಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪೂರ್ಣ ಬೆಂಬಲ ನೀಡಬೇಕು ಎಂಬ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದರು.

ಈಗ ವರದಿ ವಿರೋಧಿಸುತ್ತಿರುವವರು ಈ ಹಿಂದಿನ ಯಾವ ವರದಿಯನ್ನೂ ಒಪ್ಪಿರಲಿಲ್ಲ. ಹಿಂದೆ ನಮಗೆ ಪ್ರತಿರೋಧ ವ್ಯಕ್ತಪಡಿಸುವ ಶಕ್ತಿ ಇರಲಿಲ್ಲ. ಆದರೆ ಈಗ ನಾವು ಜಾಗೃತರಾಗಿದ್ದೇವೆ, ಸಂಘಟಿತರಾಗಿದ್ದೇವೆ. ಶೇ.70 ರಷ್ಟು ಜನಸಂಖ್ಯೆಯನ್ನು ನಾವು ಹೊಂದಿದ್ದೇವೆ. ವರದಿ ವಿರೋಧಿಗಳು ಏನೇ ಮಾಡಿದರೂ ಅವರ ಎರಡು ಪಟ್ಟು ದಮನ ಮಾಡುವ ಶಕ್ತಿ ನಮಗೆ ಇದೆ ಎಂದು ಎಚ್ಚರಿಸಿದರು.

ಜಾತಿ ಗಣತಿ ವರದಿ ಬಹಿರಂಗವಾಗಿ, ಎರಡು ಸದನಗಳಲ್ಲಿ ಹಾಗೂ ಸಾರ್ವಜನಿಕವಾಗಿ ಚರ್ಚೆಯಾಗಲಿ. ತಪ್ಪಾಗಿದ್ದರೆ ಸರಿಪಡಿಸೋಣ, ಅದನ್ನು ಬಿಟ್ಟು ವರದಿಯನ್ನು ಒಪ್ಪಲ್ಲ, ಜಾರಿ ತರಲು ಬಿಡುವುದಿಲ್ಲ ಎಂಬ ಮಾತು ಒಪ್ಪಲ್ಲ. ಕಾಂಗ್ರೆಸ್‌ ಸರ್ಕಾರ ಬಂದಿರುವುದೇ ಅಹಿಂದ ಸಮುದಾಯದಿಂದ ಎಂಬುದನ್ನು ಸರ್ಕಾರ ಮರೆಯಬಾರದು ಎಂದು ಹೇಳಿದರು.

ಇಂದೂಧರ ಹೊನ್ನಾಪುರ ಮಾತನಾಡಿ, ವರದಿಗೆ ವಿರೋಧ ವ್ಯಕ್ತಪಡಿಸುವುದು ಸಮಾಜಘಾತುಕ, ಸಂವಿಧಾನ ವಿರೋಧಿಯಾಗಿದೆ. ವಿಶೇಷವಾಗಿ ಕಾಂಗ್ರೆಸ್‌ ಮುಖಂಡರೇ ವಿರೋಧ ವ್ಯಕ್ತಪಡಿಸುತ್ತಿರುವುದು ವಿಪರ್ಯಾಸ. ಸರ್ಕಾರ ವರದಿ ಬಿಡುಗಡೆ ಮಾಡಿ, ಸಾಧಕ-ಬಾಧಕ ಚರ್ಚಿಸಿ ಜಾರಿಗೆ ತರದಿದ್ದರೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಮಾವಳ್ಳಿ ಶಂಕರ್‌ ಮಾತನಾಡಿ, ವರದಿ ಹೆಸರಿನಲ್ಲಿ ಸಾಮಾಜಿಕ ನ್ಯಾಯದ ಹರಿಹಾರ ಸಿದ್ದರಾಮಯ್ಯ ನಾಯಕತ್ವದ ಸರ್ಕಾರವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಬಿಜೆಪಿ ಜೊತೆ ಕೆಲ ಕಾಂಗ್ರೆಸ್ಸಿಗರು ಕೈ ಜೋಡಿಸಿದ್ದಾರೆ ಎಂದು ಆಪಾದಿಸಿದರು.

Share this article