ತಾಕತ್ತಿದ್ದರೆ ಸಿಎಂ ಜಾತಿಗಣತಿ ವರದಿ ಜಾರಿ ಮಾಡಲಿ: ಎಚ್‌ಡಿಕೆ

KannadaprabhaNewsNetwork |  
Published : Jan 31, 2024, 02:22 AM IST

ಸಾರಾಂಶ

ಜಾತಿಗಣತಿಯ ಕಾಂತರಾಜು ವರದಿಯನ್ನು ಹಿಡಿದುಕೊಂಡು ಪ್ರತಿದಿನ ಭಾಷಣ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಕತ್ತು ಇದ್ದರೆ ಆ ವರದಿಯನ್ನು ಸ್ವೀಕರಿಸಿ ಜಾರಿ ಮಾಡಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ನೇರ ಸವಾಲು ಹಾಕಿದ್ದಾರೆ.

ಕಾಂತರಾಜು ವರದಿ ಹಿಡಿದು ದಿನಾ ಭಾಷಣ ಮಾಡುವುದು ನಿಲ್ಲಿಸಲಿ

ಕನ್ನಡಪ್ರಭ ವಾರ್ತೆ ಬೆಂಗಳೂರು ಜಾತಿಗಣತಿಯ ಕಾಂತರಾಜು ವರದಿಯನ್ನು ಹಿಡಿದುಕೊಂಡು ಪ್ರತಿದಿನ ಭಾಷಣ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಕತ್ತು ಇದ್ದರೆ ಆ ವರದಿಯನ್ನು ಸ್ವೀಕರಿಸಿ ಜಾರಿ ಮಾಡಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ನೇರ ಸವಾಲು ಹಾಕಿದ್ದಾರೆ.

ಮಂಗಳವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಶೋಷಿತರ ಜಾಗೃತಿ ಸಮಾವೇಶ ಮಾಡುವ ಮುಖ್ಯಮಂತ್ರಿಗಳು ಈವರೆಗೆ ಮೀಸಲು ಸೌಲಭ್ಯವನ್ನು ಯಾರೆಲ್ಲಾ ಪಡೆದುಕೊಂಡಿದ್ದಾರೆ ಎಂಬುದರ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ. 2ಎ ಮೀಸಲು ವ್ಯಾಪ್ತಿಯಲ್ಲಿ ಸುಮಾರು 108 ಉಪ ಜಾತಿಗಳು ಇವೆ. ಆದರೆ, ಮೀಸಲಾತಿ ಸೌಲಭ್ಯದ ಸಿಂಹಪಾಲು ಯಾರ ಪಾಲಾಗಿದೆ ಎಂಬ ಬಗ್ಗೆ ಬಹಿರಂಗ ಚರ್ಚೆಗೆ ಬರಬೇಕು ಎಂದು ಆಹ್ವಾನ ನೀಡಿದರು. ಕಾಂತರಾಜು ವರದಿ ಹಿಡಿದುಕೊಂಡು ಪ್ರತಿದಿನ ಭಾಷಣ ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ. ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪ ಈ ವರದಿಯನ್ನು ಸ್ವೀಕಾರ ಮಾಡಲಿಲ್ಲ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಈಗ ಅವರು ಅಧಿಕಾರಕ್ಕೆ ಬಂದು ವರ್ಷವಾಯಿತು. ಯಾಕೆ ವರದಿಯನ್ನು ಸ್ವೀಕಾರ ಮಾಡಿ ಜಾರಿ ಮಾಡಲಿಲ್ಲ. ತಾಕತ್ತು ಇದ್ದರೆ ಕಾಂತರಾಜು ವರದಿ ಸ್ವೀಕರಿಸಿ ಜಾರಿ ಮಾಡಲಿ ಎಂದರು.

ಸಿದ್ದರಾಮಯ್ಯ ಅವರ ಇಷ್ಟು ವರ್ಷದ ರಾಜಕೀಯದಲ್ಲಿ ಸಚಿವರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗಿದ್ದಾರೆ. ಈ ವೇಳೆ ಜಾತಿ ವ್ಯವಸ್ಥೆ, ಶೋಷಣೆ ಅಂತ್ಯ ಮಾಡಲು ಅವಕಾಶ ಇತ್ತು . ಯಾವ ಕಾರಣಕ್ಕಾಗಿ ಅದನ್ನು ಮಾಡಲಿಲ್ಲ. ಸಮಾಜವನ್ನು ಒಡೆಯುವ ರಾಜಕಾರಣ ನಿಲ್ಲಿಸಬೇಕು. ಕದ್ದುಮುಚ್ಚಿ ಅವರಂತೆ ರಾಜಕೀಯ ಮಾಡುವುದಿಲ್ಲ. ನೇರವಾಗಿಯೇ ಬಿಜೆಪಿ ಜತೆ ಕೈ ಜೋಡಿಸಿದ್ದೇವೆ. ಅವರ ರೀತಿ ಹೊಂದಾಣಿಕೆ ರಾಜಕಾರಣ ಮಾಡುವುದಿಲ್ಲ ಎಂದು ಹರಿಹಾಯ್ದರು.

ಕಾಂಗ್ರೆಸ್ ಕೋಣದ ರೀತಿ: ಎಚ್‌ಡಿಕೆ ವ್ಯಂಗ್ಯ

ಕುಡಿಯುವ ನೀರಿನ ಜಾಗಕ್ಕೆ ಹಸುವನ್ನು ಬಿಟ್ಟರೆ, ಅದು ನೀರನ್ನೂ ಕುಡಿದು ಅದನ್ನು ಕಲಕದೇ ಹೋಗುತ್ತದೆ. ಆದರೆ, ಅದೇ ಜಾಗಕ್ಕೆ ಕೋಣವನ್ನು ಬಿಟ್ಟರೆ ನೀರನ್ನು ಕುಡಿದು ಬೇರೆ ಯಾರೂ ಕುಡಿಯದ ರೀತಿ ಆ ನೀರನ್ನು ರಾಡಿ ಎಬ್ಬಿಸಿ ಹೋಗುತ್ತದೆ. ಹಾಗೆಯೇ ಕಾಂಗ್ರೆಸ್ ಕೋಣದ ರೀತಿ ಎಂದು ಕುಮಾರಸ್ವಾಮಿ ವ್ಯಂಗ್ಯವಾಗಿ ಹೇಳಿದರು.

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಭಾರತರತ್ನ ಕೊಡಬೇಕು ಎಂದು ಉಪ ಮುಖ್ಯಮಂತ್ರಿ ಕೇಂದ್ರಕ್ಕೆ ಒತ್ತಾಯಿಸಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷಕ್ಕೆ ತನ್ನ ಜೀವನವನ್ನೇ ಅರ್ಪಣೆ ಮಾಡಿದ ಅವರಿಗೆ ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿತು. ಅವರ ಜೀವನವನ್ನು ಸಂಪೂರ್ಣವಾಗಿ ಹಾಳು ಮಾಡಿತು. ಈಗ ಅರಸು ಅವರ ಬಗ್ಗೆ ಮೊಸಳೆ ಕಣ್ಣೀರು ಹಾಕಲಾಗುತ್ತಿದೆ ಎಂದು ಟಾಂಗ್ ನೀಡಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ