ಕನ್ನಡಪ್ರಭ ವಾರ್ತೆ ಚಾಮರಾಜನಗರ ಸಾಮಾಜಿಕ ಪರಿವರ್ತನೆಯಲ್ಲಿ ರಂಗಭೂಮಿ ಹಾಗೂ ನಾಟಕಗಳು ಪ್ರಮುಖ ಪಾತ್ರ ವಹಿಸಿದ್ದು, ಜೀವನದ ನೈಜ ಚಿತ್ರಣವನ್ನು ಜನರ ಮುಂದೆ ಪ್ರಚುರಪಡಿಸುವ ನಾಟಕ ಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ನಗರ ಮಠಾಧ್ಯಕ್ಷ ಶ್ರೀ ಚನ್ನಬಸವಸ್ವಾಮೀಜಿ ತಿಳಿಸಿದರು.
ಗ್ರಾಮೀಣ ಜನರ ಜೀವನದಲ್ಲಿ ನಾಟಕ ಹಾಸುಹೊಕ್ಕಾಗಿತ್ತು. ಜಾತ್ರೆ, ಹಬ್ಬ ಹರಿದಿನಗಳಲ್ಲಿ ಪೌರಾಣಿಕ ನಾಟಕಗಳನ್ನು ಕಲಿತು ಪ್ರದರ್ಶನ ಮಾಡುವ ಮೂಲಕ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ. ರಾತ್ರಿಯಿಡಿ ನಾಟಕಗಳನ್ನು ನೋಡುವ ಮೂಲಕ ಪ್ರೋತ್ದಾಹ ನೀಡಿದ್ದಾರೆ. ಸಿನಿಮಾ ಹಾಗೂ ಕಿರುತೆರೆ ಬಂದರು ಸಹ ರಂಗಭೂಮಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಎಷ್ಟೇ ಎತ್ತರಕ್ಕೆ ಬೆಳೆದರು ಸಹ ರಂಗಭೂಮಿ ಹಾಗೂ ನಾಟಕದ ಸೆಳೆತ ಅವರನ್ನು ಕೈ ಬೀಸಿ ಕರೆಯುತ್ತಿದೆ ಎಂದರು.
ಶ್ರೀ ಸಿದ್ದಮಲ್ಲೇಶ್ವರ ಕಲಾ ಬಳಗವನ್ನು ಸ್ಥಾಪನೆ ಮಾಡಿರುವ ಪುರುಷೋತ್ತಮ್ ಜಿಲ್ಲೆಯಲ್ಲಿ ನಾಟಕಗಳನ್ನು ಸಂಘಟಿಸುವ ಜೊತೆಗೆ ಪ್ರಮುಖ ಪಾತ್ರಗಳಲ್ಲಿ ನಟಿಸಿ, ಉತ್ತಮ ಕಲಾವಿದರಾಗಿದ್ದಾರೆ. ಇದೇ ರೀತಿ ಮಂಗಲ ಶಿವಣ್ಣ ಹಾರ್ಮೋನಿಯಂ ಮಾಸ್ಟರ್ ಆಗಿ ರಂಗಭೂಮಿ ಕಲೆಯಲ್ಲಿಯೇ ತಮ್ಮ ಸಂಪೂರ್ಣ ಕುಟುಂಬವನ್ನು ತೊಡಗಿಸಿಕೊಂಡಿದ್ದಾರೆ. ಇಂಥವರಿಗೆ ರಾಜ್ಯ ಮಟ್ಟದ ಸಿಜಿಕೆ ರಂಗ ಪ್ರಶಸ್ತಿ ನೀಡಿತ್ತಿರುವುದು ಹೆಮ್ಮೆ ಎನಿಸಿದೆ. ಅವರ ಕಲೆ ಪ್ರೇಮ ಇನ್ನು ಹೆಚ್ಚಲಿ. ಅವರ ಕಲೆ ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.ಪ್ರಶಸ್ತಿ ಸ್ವೀಕರಿಸಿದ ಕಲಾವಿದ ಎನ್.ಆರ್. ಪುರುಷೋತ್ತಮ್ ಮಾತನಾಡಿ, ನಾಡಿನ ಉತ್ತಮ ರಂಗ ಕಲಾವಿದರಾದ ಸಿ.ಜಿ.ಕೆ. ಅವರ ರಾಜ್ಯ ಮಟ್ಟದ ರಂಗ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ. ನನ್ನ ಜೀವನವನ್ನು ನಾಟಕ ಕಲೆಗೆ ಸರ್ಮಪಣೆ ಮಾಡುವ ಜೊತೆಗೆ ರಂಗ ಕಲೆಯನ್ನು ಬೆಳೆಸುವ ಜೊತೆಗೆ ಯುವಕರು ಹೆಚ್ಚಿನ ರೀತಿಯಲ್ಲಿ ಕಲೆಯನ್ನು ಪ್ರೋತ್ಸಾಹಿಸುವ ಮೂಲಕ ಆರಾಧಕರಾಗಬೇಕು ಎಂದರು.
ರಂಗವಾಹಿನಿ ಸಂಸ್ಥೆಯ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ, ಕಿರುತೆರೆ ಕಲಾವಿದ ಪ್ರದೀಪ್ ತಿಪಟೂರು, ಕರ್ನಾಟಕ ರಂಗ ಪರಿಷತ್ತು ರಾಜ್ಯ ಸಂಚಾಲಕ ಸಂಸ ಸುರೇಶ್, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಪ್ರಧಾನ ಕಾರ್ಯದರ್ಶಿ ಡಿ. ನಾಗೇಂದ್ರ( (ಪುಟ್ಟು), ಮುಖಂಡರಾದ ಅರಕಲವಾಡಿ ಗುರುಸ್ವಾಮಿ, ಜನ್ನೂರು ರೇವಣ್ಣ, ಗೆಳೆಯರ ಬಳಗದ ಅಧ್ಯಕ್ಷ ಉಮ್ಮತ್ತೂರು ಬಸವರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಎಂ. ಶಿವಸ್ವಾಮಿ, ಗ್ರಾಪಂ ಅಧ್ಯಕ್ಷ ಪಿ. ಶೇಖರ್, ಬಸವರಾಜು, ಘಟಂ ಕೃಷ್ಣ, ಮತ್ತಿತರರು ಹಾಜರಿದ್ದರು.