ಹಿಂದೂ ಕಾರ್ಯಕರ್ತರಿಗೆ ತೊಂದರೆ ನೀಡಿದರೆ ಬೀದಿಗಳಲ್ಲಿ ಹೋರಾಟ: ವಿಜಯೇಂದ್ರ ಎಚ್ಚರಿಕೆ

KannadaprabhaNewsNetwork |  
Published : Jun 10, 2025, 07:57 AM IST
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಬಿ.ವೈ. ವಿಜಯೇಂದ್ರ. | Kannada Prabha

ಸಾರಾಂಶ

ಸುಹಾಸ್‌ ಶೆಟ್ಟಿ ಹತ್ಯೆ ಬಳಿಕ ದ.ಕ. ಪೊಲೀಸರು ತಡರಾತ್ರಿ ಹಿಂದೂ ಸಂಘಟನೆ ಕಾರ್ಯಕರ್ತರ ಮನೆಗಳಿಗೆ ತೆರಳಿ ತೊಂದರೆ ನೀಡುವುದನ್ನು ತಕ್ಷಣ ನಿಲ್ಲಿಸದಿದ್ದರೆ ಆಂದೋಲನ ರೂಪದಲ್ಲಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಸುಹಾಸ್‌ ಶೆಟ್ಟಿ ಹತ್ಯೆ ಬಳಿಕ ದ.ಕ. ಪೊಲೀಸರು ತಡರಾತ್ರಿ ಹಿಂದೂ ಸಂಘಟನೆ ಕಾರ್ಯಕರ್ತರ ಮನೆಗಳಿಗೆ ತೆರಳಿ ತೊಂದರೆ ನೀಡುವುದನ್ನು ತಕ್ಷಣ ನಿಲ್ಲಿಸದಿದ್ದರೆ ಪಶ್ಚಾತ್ತಾಪ ಪಡಬೇಕಾದೀತು. ಇದೇ ವರ್ತನೆ ಮುಂದುವರಿಸಿದರೆ ಆಂದೋಲನ ರೂಪದಲ್ಲಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.

ದ.ಕ.ದಲ್ಲಿ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಜೆಪಿ ನಿಯೋಗದೊಂದಿಗೆ ಜಿಲ್ಲೆಗೆ ಭೇಟಿ ನೀಡಿದ ಅವರು ಅಧಿಕಾರಿಗಳು, ಕಾರ್ಯಕರ್ತರ ಜತೆ ಪ್ರತ್ಯೇಕ ಮಾತುಕತೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ಪೊಲೀಸರು ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದು ಗೂಂಡಾ ವರ್ತನೆ ತೋರಿಸುತ್ತಿದ್ದಾರೆ. ವಿಶ್ವ ಹಿಂದೂ ಪರಿಷತ್‌, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಮನೆಗಳಿಗೆ ತಡರಾತ್ರಿ ಬಾಗಿಲು ತಟ್ಟಿ ಫೋಟೊ ತೆಗೆದು ಬೆದರಿಸುತ್ತಿದ್ದಾರೆ. ಇದನ್ನು ನಿಲ್ಲಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ. ಬೀದಿ ಬೀದಿಗಳಲ್ಲಿ ಹೋರಾಟ ಮಾಡಲಿದ್ದೇವೆ. ಪರಿಸ್ಥಿತಿಯನ್ನು ಅಲ್ಲಿಯವರೆಗೆ ತೆಗೆದುಕೊಂಡು ಹೋಗಲು ಬಿಡಬೇಡಿ ಎಂದು ಹೇಳಿದರು.

ಹಿಂದೂ ಕಾರ್ಯಕರ್ತರ ಟಾರ್ಗೆಟ್‌:

ಕೆಲ ಸಮಯದ ಹಿಂದೆ ಕಾಂಗ್ರೆಸ್ ಸರ್ಕಾರ ಕೋಮು ನಿಗ್ರಹ ದಳ ರಚನೆ ಮಾಡಿದ ನಂತರ ಪೊಲೀಸರ ಗೂಂಡಾ ವರ್ತನೆ ಜಾಸ್ತಿಯಾಗಿದೆ ಎಂದು ಆರೋಪಿಸಿದ ವಿಜಯೇಂದ್ರ, ಕೋಮು ನಿಗ್ರಹ ದಳ ಇರುವುದೇ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್‌ ಮಾಡಲು. ಕರಾವಳಿಯು ಬಿಜೆಪಿ, ಹಿಂದೂ ಕಾರ್ಯಕರ್ತರ ಭದ್ರಕೋಟೆಯಾಗಿದೆ. ಅದಕ್ಕಾಗಿಯೇ ನಮ್ಮ ಕಾರ್ಯಕರ್ತರನ್ನು ಟಾರ್ಗೆಟ್‌ ಮಾಡುವ ಷಡ್ಯಂತ್ರವನ್ನು ಕಾಂಗ್ರೆಸ್‌ ಸರ್ಕಾರ ರಚಿಸಿದೆ ಎಂದು ದೂರಿದರು.

ರಾಜ್ಯದಲ್ಲಿ 800ಕ್ಕೂ ಅಧಿಕ ರೇಪ್‌ ಪ್ರಕರಣಗಳು ನಡೆದಿವೆ. ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ದ.ಕ.ದಲ್ಲಿ ಅಲ್ಪಸಂಖ್ಯಾತರನ್ನು ಖುಷಿಪಡಿಸಲು ಹಿಂದೂಗಳಿಗೆ ತೊಂದರೆ ನೀಡುವುದು ಎಷ್ಟರಮಟ್ಟಿಗೆ ಸರಿ? ಹೀಗೇ ಮುಂದುವರಿದು ಕಾನೂನು ಸುವ್ಯವಸ್ಥೆ ಕುಸಿದುಬಿಟ್ಟರೆ ರಾಜ್ಯ ಸರ್ಕಾರವೇ ಅದರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಆರೆಸ್ಸೆಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ವಿರುದ್ಧ ಎಫ್‌ಐಆರ್‌ ದಾಖಲು ಮಾಡುತ್ತಾರೆ. ಆದರೆ ರಾಜ್ಯಪಾಲರ ವಿರುದ್ಧ ಮಾತನಾಡಿದ ಎಂಎಲ್ಸಿ ಐವನ್‌ ಡಿಸೋಜ ಮೇಲೆ ಏಕೆ ಕ್ರಮ ಇಲ್ಲ? ಇಲ್ಲಿನ ಪೊಲೀಸರು ರಾಜ್ಯ ಸರ್ಕಾರದ ಕೈಗೊಂಬೆಯಾಗಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದರು.

ಅಕ್ರಮಗಳಿಗೆ ಕಡಿವಾಣ ಹಾಕಲಿ:

ಕೋಮು ಸೌಹಾರ್ದತೆ ಕಾಪಾಡಬೇಕಾದರೆ ಲವ್‌ ಜಿಹಾದ್‌, ಗೋ ಹತ್ಯೆ, ಮರಳು ಮಾಫಿಯಾ, ಡ್ರಗ್ಸ್‌ ಪ್ರಕರಣಗಳನ್ನು ಸರಿಯಾಗಿ ನಿರ್ವಹಿಸಬೇಕು. ಪೊಲೀಸರು ಈ ಕೆಲಸ ಮಾಡಿದ್ದರೆ ನಮ್ಮ ಕಾರ್ಯಕರ್ತರು ಬೀದಿಗಿಳಿಯುವ ಪರಿಸ್ಥಿತಿ ಬರುತ್ತಿರಲಿಲ್ಲ. ಮೊದಲು ಇಂತಹ ಅಕ್ರಮಗಳಿಗೆ ಪೊಲೀಸರು ಕಡಿವಾಣ ಹಾಕಲಿ ಎಂದು ಒತ್ತಾಯಿಸಿದರು.

ಗೃಹ ಸಚಿವರು ಯಾರದ್ದೋ ಒತ್ತಡಕ್ಕೆ ಮಣಿದು ಸುಹಾಸ್‌ ಶೆಟ್ಟಿ ಮನೆಗೆ ಹೋಗಿಲ್ಲ. ಈ ಪ್ರಕರಣವನ್ನು ಎನ್‌ಐಎಗೆ ವಹಿಸಲು ಒತ್ತಾಯ ಹೇರಿದರೂ ರಾಜ್ಯ ಸರ್ಕಾರ ಒಪ್ಪಿರಲಿಲ್ಲ. ಆದರೆ ಪ್ರಕರಣದಲ್ಲಿ ವಿದೇಶಿ ಹಣ, ನಿಷೇಧಿತ ಪಿಎಫ್‌ಐ ಸಂಚು ಇರುವುದು ಗೊತ್ತಾಗಿ ಕೇಂದ್ರ ಸರ್ಕಾರವೇ ಎನ್‌ಐಎ ತನಿಖೆಗೆ ವಹಿಸಿರುವುದು ಸ್ವಾಗತಾರ್ಹ ಎಂದು ವಿಜಯೇಂದ್ರ ಹೇಳಿದರು.

ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣ ಸ್ವಾಮಿ, ಮಾಜಿ ಕೇಂದ್ರ ಸಚಿವ ಸದಾನಂದ ಗೌಡ, ನಿಯೋಗದ ಮುಖಂಡರಾದ ರವಿ ಕುಮಾರ್‌, ಅರವಿಂದ ಬೆಲ್ಲದ್‌, ಸಂಸದ ಕ್ಯಾ.ಬ್ರಿಜೇಶ್‌ ಚೌಟ, ಶಾಸಕರಾದ ಉಮಾನಾಥ ಕೋಟ್ಯಾನ್‌, ರಾಜೇಶ್‌ ನಾಯ್ಕ್‌, ಹರೀಶ್‌ ಪೂಂಜ, ಭರತ್‌ ಶೆಟ್ಟಿ, ವೇದವ್ಯಾಸ ಕಾಮತ್‌, ಭಾಗೀರಥಿ ಮುರುಳ್ಯ ಮತ್ತಿತರರಿದ್ದರು.

------------ದ.ಕ.ದಲ್ಲಿ ಕಾಂಗ್ರೆಸ್‌ ಠಾಣೆಗಳು: ಆರ್‌.ಅಶೋಕ್‌

ದಕ್ಷಿಣ ಕನ್ನಡದ ಎಲ್ಲ ಪೊಲೀಸ್‌ ಠಾಣೆಗಳು ಕಾಂಗ್ರೆಸ್‌ ಠಾಣೆಗಳಾಗಿವೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್‌ ಟೀಕಿಸಿದರು.

ರಾತ್ರಿ 12, 2, 3 ಗಂಟೆಗೆ ಮನೆಗೆ ಹೋಗಿ ಫೋಟೊ ತೆಗೆಯೋದು ಯಾವ ಕಾನೂನು ಪುಸ್ತಕದಲ್ಲಿದೆ? ಭಾರತ್‌ ಮಾತಾಕೀ ಜೈ ಎನ್ನುವವರನ್ನೂ, ಪಾಕಿಸ್ತಾನ್‌ ಜಿಂದಾಬಾದ್‌ ಹೇಳೋರನ್ನೂ ಸಮಾನವಾಗಿ ನೋಡುವುದು ಸರಿಯಾ? ಪೊಲೀಸರು ಇಂತಹ ವರ್ತನೆಯನ್ನು ಕೈಬಿಡುವಂತೆ ಖುದ್ದು ಭೇಟಿ ನೀಡಿ ಹೇಳಿದ್ದೇವೆ. ಇದೆಲ್ಲ ಬಹಳ ದಿನ ನಡೆಯಲ್ಲ. ಇನ್ನು ಎರಡೇ ವರ್ಷ ಸರ್ಕಾರ ಇರೋದು. ಯಾರ್ಯಾರ ಮಾತು ಕೇಳಿದರೆ ಮುಂದೆ ಪಶ್ಚಾತ್ತಾಪ ಪಡಬೇಕಾದೀತು. ಇಂದೇ ಲಾಸ್ಟ್‌. ನಾಳೆಯಿಂದ ಇಂಥ ಪಾಠ ಇಟ್ಕೋಬೇಡಿ. ಹಿಂದೂ ಕಾರ್ಯಕರ್ತರಿಗೆ ತೊಂದರೆಯಾಗಲು ನಾವು ಬಿಡಲ್ಲ. ಇಡೀ ಪಕ್ಷ ಕಾರ್ಯಕರ್ತರ ಜತೆಗಿದೆ ಎಂದು ಹೇಳಿದರು.

ಸುಹಾಸ್‌ ಶೆಟ್ಟಿಯನ್ನು ರೌಡಿ ಶೀಟರ್‌ ಎನ್ನುತ್ತಾರೆ. ರೌಡಿ ಎನ್ನಲು ಬಹಳ ವ್ಯಾಖ್ಯಾನಗಳಿವೆ. ಡಿಕೆ ಶಿವಕುಮಾರ್‌, ರಾಹುಲ್‌ ಗಾಂಧಿ ಮೇಲೆ ಎಷ್ಟು ಪ್ರಕರಣಗಳಿಲ್ಲ? ನ್ಯಾಯಾಲಯವು ಅಪರಾಧಿ ಅಂತ ತೀರ್ಮಾನ ಮಾಡುವವರೆಗೂ ಅಪರಾಧಿಯಾಗಲು ಸಾಧ್ಯವಿಲ್ಲ ಎಂದರು.

ಅಬ್ದುಲ್‌ ರೆಹಮಾನ್‌ ಹತ್ಯೆ ಪ್ರಕರಣವನ್ನು ಬೇಕಾದರೆ ಎನ್‌ಐಎಗೆ ವಹಿಸಲಿ, ನಮ್ಮ ಆಕ್ಷೇಪವಿಲ್ಲ ಎಂದು ಆರ್‌. ಅಶೋಕ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಳವಿ ಮಹಾರಥೋತ್ಸವ ಸಂಪನ್ನ
ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ: ಹರಿಹರಪುರ ಶ್ರೀ