ನ್ಯಾಯ ಕೇಳಿದರೆ ದೌರ್ಜನ್ಯವೆಸಗಿದ ಇನ್ಸ್‌ಪೆಕ್ಟರ್‌

KannadaprabhaNewsNetwork | Published : Feb 5, 2024 1:48 AM

ಸಾರಾಂಶ

ಮಾಗಡಿ: ನ್ಯಾಯ ಕೊಡುವಂತೆ ಪೊಲೀಸ್‌ ಠಾಣೆಗೆ ಹೋದರೆ ಇನ್ಸ್‌ಪೆಕ್ಟರ್‌ ನವೀನ್‌ ಕುಮಾರು ನಮ್ಮ ವಿರುದ್ಧವೇ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಹುಳ್ಳೆನಹಳ್ಳಿ ಗ್ರಾಮದ ಮುಳ್ಳುಕಟ್ಟಮ್ಮ ದೇವಾಲಯ ಅರ್ಚಕ ಎಚ್.ಸಿ. ಮಹೇಶ್‌ ಆರೋಪಿಸಿದರು.

ಮಾಗಡಿ: ನ್ಯಾಯ ಕೊಡುವಂತೆ ಪೊಲೀಸ್‌ ಠಾಣೆಗೆ ಹೋದರೆ ಇನ್ಸ್‌ಪೆಕ್ಟರ್‌ ನವೀನ್‌ ಕುಮಾರು ನಮ್ಮ ವಿರುದ್ಧವೇ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಹುಳ್ಳೆನಹಳ್ಳಿ ಗ್ರಾಮದ ಮುಳ್ಳುಕಟ್ಟಮ್ಮ ದೇವಾಲಯ ಅರ್ಚಕ ಎಚ್.ಸಿ. ಮಹೇಶ್‌ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮಗೆ ನ್ಯಾಯ ಒದಗಿಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಲೋಕಾಯುಕ್ತ, ಪೊಲೀಸ್‌ ಪ್ರಾಧಿಕಾರಕ್ಕೆ ಇನ್ಸ್‌ಪೆಕ್ಟರ್‌ ನವೀನ್‌ ವಿರುದ್ದ ದೂರು ನೀಡಲಾಗಿದೆ. ಆದರೂ ದೇವಾಲಯ ಮತ್ತು ಮನೆಗಳ ಬಳಿ ತೆರಳಿ ನಮ್ಮನ್ನು ಹುಡುಕಿ ಬಂಧಿಸಲು ಮುಂದಾಗಿದ್ದಾರೆ ಎಂದು ದೂರಿದ ಅವರು, ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಧಿಕ್ಕರಿಸಿ ನಮಗೆ ತೊಂದರೆ ನೀಡುತ್ತಿರುವುದರಿಂದ, ಕಾನೂನಿನಲ್ಲಿ ನ್ಯಾಯಸಿಗುತ್ತಿಲ್ಲ ಎಂದು ನೋವು ತೊಡಿಕೊಂಡರು.

ಹುಳ್ಳೆನಹಳ್ಳಿ ಗ್ರಾಮದಲ್ಲಿ ಮುಳ್ಳುಕಟ್ಟಮ್ಮ ದೇವಾಲಯ ಪುರಾತನವಾದ ದೇವಾಲಯ. ಇಲ್ಲಿ ಹೊನ್ನಗಂಗರಾಜು ಹಾಗೂ ಎಸ್.ಸಿ. ಮಹೇಶ್‌ ಆದ ನಾನು ದೇವಾಲಯದ ಪೂಜೆ ನಡೆಸಿಕೊಂಡು ಬರುತ್ತಿದ್ದೇವೆ. ಆದರೆ, ನಮ್ಮ ಸಂಬಂಧಿಕರಾದ ಆರ್.ಗಂಗಹುಚ್ಚಯ್ಯ, ಎಚ್.ಆರ್.ಹುಚ್ಚಪ್ಪ, ರಂಗಸ್ವಾಮಿ, ಶಾಂತಕುಮಾರಿ, ಎಚ್.ಜಿ.ಹೊನ್ನಗಂಗರಾಜು ಸೇರಿದಂತೆ 13 ಮಂದಿ ಪೂಜೆ ನಡೆಸಲು ತೊಂದರೆ ನೀಡುತ್ತಿದ್ದಾರೆ ಎಂದರು.

ಇವರಿಗೆಲ್ಲರಿಗೂ 100 ವರ್ಷದ ಹಿಂದೆಯೆ ಇವರ ಪೂರ್ವಿಕರಿಗೆ ಸಮಾನವಾದ ಜಮೀನು ನೀಡಲಾಗಿದೆ. ಸದರಿ ಜಮೀನನ್ನು ಮಾರಾಟ ಮಾಡಿಕೊಂಡಿದ್ದಾರೆ. ಈಗ ನಮಗೂ ಪೂಜೆ ಮಾಡಲು ಹಕ್ಕು ಬೇಕು ಎಂದು 2009ರಲ್ಲಿ ಮಾಗಡಿ ನ್ಯಾಯಾಲಯದಲ್ಲಿ ದಾವೆ ಹೂಡಿ ಒಬ್ಬೊಬ್ಬರು 5 ವರ್ಷ ಪೂಜಾ ಕಾರ್ಯಕ್ರಮ ನಡೆಸುವಂತೆ ಆದೇಶ ನೀಡಿದೆ. ಆದರೆ, ಯಾರ್ಯಾರು ಯಾವ ವೇಳೆ ಪೂಜೆ ಮಾಡಬೇಕೆಂದು ಯಾವುದೇ ಸಂಪೂರ್ಣ ಆದೇಶ ಮಾಡಿಲ್ಲ ಎಂದು ಹೇಳಿದರು.ಈ ಆದೇಶವನ್ನು ಆರ್‌ಎ 6/2024ರಲ್ಲಿ ನ್ಯಾಯಾಲಯದಲ್ಲಿ ಹೊನ್ನಗಂಗರಾಜು, ಗಂಗಾಧರ ಸ್ವಾಮಿ, ಮಹೇಶ ಎಂಬುವರು ಆರ್.ಗಂಗಹುಚ್ಚಯ್ಯ ಸೇರಿದಂತೆ 15 ಮಂದಿ ವಿರುದ್ದ ಮೇಲ್ಮನವಿ ಸಲ್ಲಿಸಲಾಗಿದೆ. ನ್ಯಾಯಾಲಯದ ಅದೇಶಕ್ಕಾಗಿ ಕಾಯಲಾಗುತ್ತಿದೆ. ಈ ವೇಳೆ ಆರ್.ಗಂಗಹುಚ್ಚಯ್ಯ ಇತರರು ಸೇರಿ ದೇವಾಲಯದ ಬೀಗ ಮುರಿದು, ಅಕ್ರಮ ಪ್ರವೇಶ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಕುದೂರು ಪೊಲೀಸ್‌ ಠಾಣೆಗೆ ದೂರು ಸಲ್ಲಿಸಲಾಗಿದೆ. ಸಂಬಂಧಪಟ್ಟವರನ್ನು ಕರೆಸಿ ಬುದ್ದಿವಾದ ಹೇಳಬೇಕಿದ್ದ ಇನ್ಸ್‌ಪೆಕ್ಟರ್‌ ನವೀನ್‌ ಕುಮಾರ್ ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಪ್ರಕರಣ ದಾಖಲಿಸುವುದಾಗಿ ಬೆದರಿಕೆವೊಡ್ದಿದ್ದಾರೆ ಎಂದು ತಿಳಿಸಿದರು.

ಅರ್ಚಕ ಹಾಗೂ ವಕೀಲ ವೃತ್ತಿ ಮಾಡುತ್ತಿರುವ ನನಗೆ ಬೂಟ್‌ ಕಾಲಿನಿಂದ ಹೊದೆಯುವುದಾಗಿ ಬೆದರಿಸಿ, ವಕೀಲ ವೃತ್ತಿಯಿಂದ ನಮ್ಮ ಸಂಘಕ್ಕೆ ದೂರು ನೀಡಿ ವಕೀಲ ವೃತ್ತಿಯಿಂದ ವಜಾಗೊಳಿಸುವ ಬೆದರಿಕೆ ಹಾಕಿ ನನ್ನ ವಕೀಲ ವೃತ್ತಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

ವಸಂತಕುಮಾರಿ ಮಾತನಾಡಿ, ಕುದೂರು ಪೊಲೀಸ್‌ ಇನ್ಸ್‌ಪೆಕ್ಟರ್‌ ನವೀನ್‌ ಬಳಿ ನಮಗೆ ನೀಡುತ್ತಿರುವ ತೊಂದರೆ ಬಗ್ಗೆ ನ್ಯಾಯ ಕೊಡುವಂತೆ ಪೊಲೀಸ್‌ ಠಾಣೆಗೆ ತೆರಳಿದರೆ ಒಬ್ಬ ದಲಿತ ಮಹಿಳೆ ಎಂಬುದನ್ನು ನೋಡದೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ತಪ್ಪು ಮಾಡದ ನಮ್ಮನ್ನು ನಿಲ್ಲಿಸಿ ತಪ್ಪು ಮಾಡಿರುವರನ್ನು ಕುರ್ಚಿ ಮೇಲೆ ಕೂರಿಸಿ ದಬ್ಬಾಳಿಕೆ ಎಸಗಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಹೊನ್ನಗಂಗರಾಜು, ಮಹೇಶ್‌, ಹುಚ್ಚಮ್ಮ, ಹೊನ್ನಮ್ಮ, ಉಮಾದೇವಿ, ಲಕ್ಷ್ಮಿದೇವಿ, ಪ್ರದೀಪ್‌ ಕುಮಾರ್‌, ಎಚ್.ಎಂ.ಗಂಗಾಧರ ಮೂರ್ತಿ, ಕಿಶೋರ್‌, ಗಂಗಾಧರ ಸ್ವಾಮಿ ಇತರರಿದ್ದರು.4ಕೆಆರ್ ಎಂಆರ್ 6.ಜೆಪಿಜಿ

ಮಾಗಡಿಯಲ್ಲಿ ಅರ್ಚಕ ಎಚ್.ಸಿ.ಮಹೇಶ್‌ ಪತ್ರಿಕಾಗೋಷ್ಠಿಯಲ್ಲಿ ಕೋರ್ಟ್‌ ಆದೇಶ ಪ್ರತಿಗಳನ್ನು ಪ್ರದರ್ಶಿಸಿದರು.

Share this article