)
ರಾಮನಗರ: ಕೇಂದ್ರ ಸಚಿವ ಕುಮಾರಸ್ವಾಮಿರವರು ಬೇನಾಮಿ ಆಸ್ತಿ ಮಾಡಿದ್ದರೆ ಕಾಂಗ್ರೆಸ್ ಸರ್ಕಾರ ತನಿಖೆ ಮಾಡಿಸಿ ಸತ್ಯಾಂಶ ಬಹಿರಂಗ ಪಡಿಸಲಿ ನೋಡೋಣ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿಕೆಗೆ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರಾದ ಮಾಜಿ ಶಾಸಕ ಎ.ಮಂಜುನಾಥ್ ತಿರುಗೇಟು ನೀಡಿದರು.
2006ರಲ್ಲಿ ಕುಮಾರಸ್ವಾಮಿರವರು ಟೌನ್ ಶಿಪ್ ಯೋಜನೆ ಕೈಗೆತ್ತಿಕೊಂಡ ಮೇಲೆ ಬಾಲಕೃಷ್ಣ ಎರಡು ಬಾರಿ ಶಾಸಕರಾಗಿದ್ದರು. ಇಷ್ಟು ವರ್ಷ ಅವರು ಧ್ವನಿ ಎತ್ತದೆ ಕಡಲೆಪುರಿ ತಿನ್ನುತ್ತಿದ್ದಿರ. ನಾನು ಶಾಸಕನಾಗಿ 5 ವರ್ಷ ಏನು ಮಾಡಿದ್ದೇನೆಂದು ದಾಖಲೆ ಕೊಡುತ್ತೇನೆ. ನಾವು ರೈತರ ಪರ ಹೋರಾಟ ಮಾಡುತ್ತಿದ್ದೇವೆಯೇ ಹೊರತು ರಾಜಕೀಯ ಮಾಡುತ್ತಿಲ್ಲ ಎಂದರು.
ಕುಮಾರಸ್ವಾಮಿರವರು ನೋಟಿಫಿಕೇಷನ್ ಮಾಡಿಯೇ ಇಲ್ಲ. ಹೀಗಿರುವಾಗ ಡಿ ನೋಟಿಫಿಕೇಷನ್ ಹೇಗೆ ಮಾಡುತ್ತಾರೆ. ಅವರಿಗೆ ಧೈರ್ಯವಿದ್ದರೆ ಕುಮಾರಸ್ವಾಮಿರವರ ನೋಟಿಫಿಕೇಷನ್ ಹೊರಡಿಸಿರುವ ಪ್ರತಿ ಮತ್ತುಶೇಕಡ 80ರಷ್ಟು ರೈತರು ಒಪ್ಪಿರುವುದನ್ನು ಸಾಬೀತು ಪಡಿಸಿದರೆ ಇಂದೇ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಬಾಲಕೃಷ್ಣರಿಗೆ ಸವಾಲು ಹಾಕಿದರು.
ಹೋರಾಟ ಮಾಡಿದ್ದರೆ ದಾಖಲೆ ತೋರಿಸಲಿ :
ಎಸ್ ಬಿಆರ್ ತಿಮ್ಮೇಗೌಡರು ರಾಜ್ಯಸರ್ಕಾರಕ್ಕೆ 650 ಕೋಟಿ ರುಪಾಯಿ ಹಣ ಕಟ್ಟಬೇಕಿತ್ತು. ಅವರೇ ಜಮೀನನ್ನು ಕೆಐಎಡಿಬಿಯಿಂದ ಸ್ವಾಧೀನ ಪಡಿಸಿಕೊಂಡು ಹಣ ಮುಟ್ಟುಗೋಲು ಹಾಕಿಕೊಳ್ಳುವಂತೆ ಸರ್ಕಾರಕ್ಕೆ ಕೇಳಿಕೊಂಡಿದ್ದರು. ಅದರಂತೆ ಸರ್ಕಾರ ಕೆಐ ಎಡಿಬಿ ಮೂಲಕ ಭೂ ಸ್ವಾಧೀನ ಮಾಡಿಕೊಂಡು ಹಣ ಪಡೆದಕೊಂಡಿತು. ಇದರಲ್ಲಿ ನನ್ನದೇನೂ ಪಾತ್ರ ಇಲ್ಲ. ಆಗ ತಿಮ್ಮೇಗೌಡರ ಬಳಿ ದೊಡ್ಡು ಹೊಡೆಯಲು ಬಾಲಕೃಷ್ಣ ಬಂದಿದ್ದರು. ಆನಂತರ ಏನು ಹೋರಾಟ ಮಾಡಿದ್ದಾರೆ ಹೇಳಲಿ ಎಂದು ಪ್ರಶ್ನಿಸಿದರು.
ಇಂಟಿಗ್ರೇಟಟ್ ಟೌನ್ ಶಿಪ್ ಮಾಡುವುದಾಗಿದ್ದರೆ ಒಂದೇ ಬಾರಿಗೆ ಅಂತಿಮ ಅಧಿಸೂಚನೆ ಹೊರಡಿಸ ಬಹುತಾಗಿತ್ತು. ಪ್ರತ್ಯೇಕವಾಗಿ ಅಧಿಸೂಚನೆ ಏಕೆ ಹೊರಡಿಸುತ್ತಿದ್ದಾರೆ. ರೈತರಿಗೆ ಮೋಸ ಮಾಡುವ ಉದ್ದೇಶ ಇಲ್ಲದೆ ಮತ್ತೇನು ಎಂದು ಎ.ಮಂಜುನಾಥ್ ಪ್ರಶ್ನೆ ಮಾಡಿದರು.