ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಧ್ಯೇಯ ವಾಕ್ಯದಡಿ ಜಾಥ ।ನಾಳೆ ಯೋಗ ದಿನಾಚರಣೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಅಂತಾರಾಷ್ಟ್ರೀಯ 12ನೇ ಯೋಗ ದಿನಾಚರಣೆ ಅಂಗವಾಗಿ ಶುಕ್ರವಾರ ಚಿಕ್ಕಮಗಳೂರು ನಗರದ ತಾಲೂಕು ಕಚೇರಿಯಿಂದ ಎಂ.ಜಿ.ರಸ್ತೆ ಮೂಲಕ ಜಿಲ್ಲಾ ಆಟದ ಮೈದಾನದವರೆಗೆ ಯೋಗ ನಡಿಗೆ ಜಾಥಾ ನಡೆಸಲಾಯಿತು.

ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’ ಧ್ಯೇಯ ವಾಕ್ಯದಡಿ ಆಯೋಜಿಸಿದ್ದ ಜಾಥಕ್ಕೆ ತಾಲೂಕು ಕಚೇರಿ ಮುಂಭಾಗದಲ್ಲಿ ಶಾಸಕ ಎಚ್‌.ಡಿ.ತಮ್ಮಯ್ಯ ಚಾಲನೆ ನೀಡಿ ಮಾತನಾಡಿದರು. ಆರೋಗ್ಯವೇ ಭಾಗ್ಯ’ ಎಂಬ ನಾಣ್ಣುಡಿಯಂತೆ ಆರೋಗ್ಯ ಕಾಪಾಡಿಕೊಳ್ಳಲು ‘ಯೋಗ ಭಾಗ್ಯ’ ಅತ್ಯಗತ್ಯ. ಯೋಗ ಕೇವಲ ದೈಹಿಕ ವ್ಯಾಯಾಮವಲ್ಲ, ಅದು ಜೀವನಕ್ಕೆ ಶಿಸ್ತು, ನಡತೆ ಹಾಗೂ ಉತ್ತಮ ಸಂಸ್ಕಾರ ಕಲಿಸುವ ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಪ್ರತಿ ವರ್ಷ ಜೂನ್ 21 ರಂದು ಭಾನುವಾರ ಬೆಳಗ್ಗೆ 6ಕ್ಕೆ ಎಐಟಿ ವೃತ್ತದ ಬಳಿ ಇರುವ ಒಕ್ಕಲಿಗರ ಹಾಸ್ಟೆಲ್ ಆವರಣದ ‘ಬೆಳ್ಳಿ ಭವನ’ ದಲ್ಲಿ ಜಿಲ್ಲಾ ಮಟ್ಟದ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ.


ಜಿಲ್ಲೆಯ ಸಾರ್ವಜನಿಕರು ಹಾಗೂ ಯುವ ಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.ದೇಶದಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ಯೋಗ ಪರಂಪರೆಗೆ ಇಂದು ಜಾಗತಿಕವಾಗಿ ಮನ್ನಣೆ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸತತ ಪ್ರಯತ್ನದ ಫಲವಾಗಿ ಜೂನ್ 21 ಅನ್ನು ವಿಶ್ವ ಸಂಸ್ಥೆ ’ಅಂತಾರಾಷ್ಟ್ರೀಯ ಯೋಗ ದಿನ’ ಎಂದು ಘೋಷಿಸಿತು. ಇಂದು ವಿಶ್ವದ ನೂರಕ್ಕೂ ಹೆಚ್ಚು ದೇಶಗಳಲ್ಲಿ ಏಕಕಾಲದಲ್ಲಿ ಯೋಗ ದಿನವನ್ನು ಆಚರಿಸಲಾಗು ತ್ತಿರುವುದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವ ವಿಚಾರ. ನಮ್ಮ ದೇಶಕ್ಕಿಂತಲೂ ಹೆಚ್ಚಾಗಿ ವಿದೇಶಿಗರು ಯೋಗದ ಕಡೆಗೆ ಆಕರ್ಷಿತರಾಗುತ್ತಿದ್ದಾರೆ ಎಂದು ಎಚ್.ಡಿ.ತಮ್ಮಯ್ಯ ಹೇಳಿದರು.ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಮಾತನಾಡಿ, ಜೂನ್ 21 ರಂದು ಆಯೋಜಿಸಲಾಗಿರುವ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ನಾಗರಿಕರು, ಹಿರಿಯರು ಹಾಗೂ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ನಗರದ ತಹಸೀಲ್ದಾರ್ ಕಚೇರಿ ಆವರಣದಿಂದ ಆರಂಭವಾದ ಯೋಗ ನಡಿಗೆ ಜಾಥಾ ಪ್ರಮುಖ ರಸ್ತೆಗಳ ಮೂಲಕ ಸಾಗಿ ಜಿಲ್ಲಾ ಆಟದ ಮೈದಾನ ತಲುಪಿತು.

ಯೋಗ ನಡಿಗೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತನಾ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಎಸ್.ಗೀತಾ, ಈಶ್ವರಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಡಾ.ಭಾಗ್ಯ, ಸುರೇಂದ್ರ, ಶಿವಪ್ಪ, ಅರಸು ಸಂಘದ ಅಧ್ಯಕ್ಷ ಜನಾರ್ದನ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಇದ್ದರು.

---ಕೋಟ್‌---ಧ್ಯಾನದ ಮೂಲಕ ಮನಸ್ಸಿನಲ್ಲಿರುವ ಕಲ್ಮಶ ಹೋಗಲಾಡಿಸಿ ಮಾನಸಿಕ ನೆಮ್ಮದಿ ಪಡೆಯಬಹುದು. ಯುವಕರಿಗೆ ಯೋಗದ ಬಗ್ಗೆ ಜಾಗೃತಿ ಮೂಡಿಸುವುದೇ ಈ ಯೋಗ ನಡಿಗೆ ಪ್ರಮುಖ ಉದ್ದೇಶ.

- ಎಚ್‌.ಡಿ.ತಮ್ಮಯ್ಯ, ಶಾಸಕರು, ಚಿಕ್ಕಮಗಳೂರು

----ಬಾಕ್ಸ್‌---ನಾಳೆ ಯೋಗ ದಿನಾಚರಣೆ

ಕೇಂದ್ರದ ಆಯುಷ್ ಸಚಿವಾಲಯ ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆ ಸಹಯೋಗದಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಜೂ. 21 ರಂದು ಬೆಳಗ್ಗೆ 6ಕ್ಕೆ ನಗರದ ಎಐಟಿ ವೃತ್ತದ ಜಿಲ್ಲಾ ಒಕ್ಕಲಿಗರ ಸಂಘದ ಬೆಳ್ಳಿ ಭವನದಲ್ಲಿ ಆಯೋಜಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ,ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮೊದಲಾದವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ಶಾಸಕ ಎಚ್‌,ಡಿ.ತಮ್ಮಯ್ಯ ಉದ್ಘಾಟಿಸಲಿದ್ದಾರೆ.