ನಿರ್ಲಕ್ಷ್ಯ ಮುಂದುವರಿದ್ರೆ ಪ್ರತ್ಯೇಕ ರಾಜ್ಯದ ಕೂಗು ಅನಿವಾರ್ಯ: ಶ್ರೀಶೈಲ ಶ್ರೀ

KannadaprabhaNewsNetwork |  
Published : Dec 13, 2024, 12:50 AM IST
ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ನಡೆದಿರುವ ಕೃಷ್ಣಾ ಮೇಲ್ದಂಡೆ ಯೋಜನೆ ರೈತರ ಹೋರಾಟದಲ್ಲಿ ಶ್ರೀಶೈಲ ಶಿವಾಚಾರ್ಯರು ಮಾತನಾಡಿದರು. | Kannada Prabha

ಸಾರಾಂಶ

ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ಮಾಡಿ ವಿಳಂಬ ನೀತಿ ಅನುಸರಿಸಿದರೆ, ಆ ಭಾವನೆ ಸಹಜವಾಗಿ ಎಲ್ಲರ ಮನಸಿನಲ್ಲಿ ಏಳಲಿಕ್ಕೆ ಶುರುವಾಗುತ್ತದೆ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಉತ್ತರ ಕರ್ನಾಟಕದ ಬಗ್ಗೆ ಇದೇ ರೀತಿ ನಿರ್ಲಕ್ಷ್ಯ ಧೋರಣೆ ಮುಂದುವರಿಸಿದರೆ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ತಳ್ಳಿ ಹಾಕುವುದಕ್ಕೆ ಸಾಧ್ಯವಿಲ್ಲ ಎಂದು ಶ್ರೀಶೈಲ ಪೀಠದ ಚೆನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯರು ಎಚ್ಚರಿಸಿದ್ದಾರೆ.

ನಗರದ ಜಿಲ್ಲಾಡಳಿತ ಭವನದ ಎದುರು ನಡೆದಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ರೈತರ ಹೋರಾಟದಲ್ಲಿ ಶ್ರೀಶೈಲ ಶಿವಾಚಾರ್ಯರು ಗುರುವಾರ ಭಾಗಿಯಾಗಿ ಮಾತನಾಡಿ, ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ಮಾಡಿ ವಿಳಂಬ ನೀತಿ ಅನುಸರಿಸಿದರೆ, ಆ ಭಾವನೆ ಸಹಜವಾಗಿ ಎಲ್ಲರ ಮನಸಿನಲ್ಲಿ ಏಳಲಿಕ್ಕೆ ಶುರುವಾಗುತ್ತದೆ ಎಂದರು.

ಪ್ರತ್ಯೇಕ ರಾಜ್ಯದ ಕೂಗು ಬೃಹದಾಕಾರ ಸ್ವರೂಪ ತಾಳಿದ ನಂತರ ಆಗ ಸರ್ಕಾರಕ್ಕೂ ಏನು ಮಾಡುವುದಕ್ಕೆ ಆಗುವುದಿಲ್ಲ. ಆ ಪರಿಸ್ಥಿತಿ ಬರಬಾರದು ಎಂದರೆ ಈ ಕೃಷ್ಣಾ ಮೇಲ್ದಂಡೆ ಯೋಜನೆಗೆ ಚಾಲನೆ ಕೊಟ್ಟು, ಯೋಜನೆ ಪೂರ್ಣಗೊಳಿಸಬೇಕು ಎಂದು ನಾನು ಸರ್ಕಾರಕ್ಕೆ ಆಗ್ರಹಪಡಿಸುತ್ತೇನೆ ಎನ್ನುವ ಮೂಲಕ ಉ.ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಶ್ರೀಶೈಲ ಪೀಠದ ಶ್ರೀಗಳು ದನಿಗೂಡಿಸಿದ್ದಾರೆ. ಈ ಬಗ್ಗೆ ಸಚಿವರ ಜೊತೆ ಮಾತನಾಡಿ, ಕೂಡ ನಾವು ಒತ್ತಡ ಹಾಕುವಂತಹ ಪ್ರಯತ್ನವನ್ನು ಮಾಡುತ್ತೇವೆ ಎಂದು ಶ್ರೀಗಳು ತಿಳಿಸಿದರು.

ರಾಜ್ಯದ ಅಥವಾ ದೇಶದ ಯಾವುದೇ ಒಂದು ಯೋಜನೆ ಆದರೆ ಕಾಲಾವಧಿಯೊಳಗೆ ಪೂರ್ಣಗೊಂಡರೆ ಕಡಿಮೆ ವೆಚ್ಚದಲ್ಲಿ ಸಂಪನ್ನಗೊಳಿಸಬಹುದು. ಮುಂದೆ ನೋಡಿದರಾಯ್ತು ಅಂದ್ರೆ ಖರ್ಚು ಹೆಚ್ಚಾಗುತ್ತೆ. ಅದರಿಂದ ಬಾಧಿತರಾದವರ ನೋವು ಹೆಚ್ಚಾಗುತ್ತಾ ಹೋಗುತ್ತೆ ಎಂದರು.

1963ರಲ್ಲಿ ಕೇವಲ 500 ಚಿಲ್ಲರೆ ಕೋಟಿಯಲ್ಲಿ ಪೂರ್ಣಗೊಳ್ಳಬೇಕಿರುವ ಈ ಯೋಜನೆ ಇಂದು ಸರ್ಕಾರಗಳ ವಿಳಂಬ ನೀತಿಯಿಂದ ಇಂದು ₹1 ಲಕ್ಷ ಕೋಟಿ ಮೀರಿದೆ. ಈ ಕಡೆ ಅಲಕ್ಷ್ಯ ಮಾಡಿದ ಪರಿಣಾಮವೇ ನಾವು ಈ ಹಂತಕ್ಕೆ ಬರಬೇಕಾಗಿದೆ. ಯಾವುದೇ ಸರ್ಕಾರಗಳು, ದಕ್ಷಿಣ ಕರ್ನಾಟಕಕ್ಕೆ ಕೊಡುವಷ್ಟು ಆದ್ಯತೆಯನ್ನು ಉತ್ತರ ಕರ್ನಾಟಕಕ್ಕೆ ಕೊಡ್ತಿಲ್ಲ. ಉತ್ತರ ಕರ್ನಾಟಕದ ಬಗ್ಗೆ ಎಲ್ಲ ಸರ್ಕಾರಗಳೂ ನಿರ್ಲಕ್ಷ್ಯ ಧೋರಣೆ ತೋರುತ್ತಿರೋದು ಸರಿಯಲ್ಲ. ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗ್ತಾನೇ ಬಂದಿದೆ. ಬಹುಶಃ ದಿವಂಗತ ಉಮೇಶ ಕತ್ತಿಯವರು ಉತ್ತರ ಕರ್ನಾಟಕ ಪ್ರತ್ಯೇಕ ಆಗಬೇಕು ಎಂದು ಹೇಳುತ್ತಲೇ ಬಂದಿದ್ರು. ಉತ್ತರ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ ತೋರಿದ್ರೆ, ಕರ್ನಾಟಕ ವಿಭಾಗೀಕರಣವಾದರೆ ಅಚ್ಚರಿ ಪಡಬೇಕಿಲ್ಲ ಎಂದು ಎಚ್ಚರಿಸಿದರು.

ಹೀಗಾಗಿ ಸರ್ಕಾರಗಳು ದಕ್ಷಿಣ ಕರ್ನಾಟಕದ ಬಗ್ಗೆ ತೋರುವ ಒಲವು, ಉತ್ತರ ಕರ್ನಾಟಕಕ್ಕೂ ಕೊಡಬೇಕು. ದೇಶದ ಬೆನ್ನೆಲುಬು ರೈತ ಅಂತಾ ಬಾಯಿಯಲ್ಲಿ ಹೇಳುತ್ತೇವೆ. ಆದರೆ ರೈತನ ಸಲುವಾಗಿ ನಾವು ಏನು ಮಾಡುತ್ತೇವೆ? ಅಲಕ್ಷ್ಯ ಮಾಡ್ತೀವಿ, ಒಕ್ಕಲುತನ ಹಾಗೂ ರೈತರನ್ನ ನಿರ್ಲಕ್ಷ್ಯ ಮಾಡಿದರೆ ದೇಶ ಸಂಪದ್ಭರಿತವಾಗಲ್ಲ. ರೈತರಿಗೆ ನೋವಾಗುವ ಬಗ್ಗೆ ಸರ್ಕಾರ ಚಿಂತಿಸಿ, ಅವರ ನೋವು ನಿವಾರಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಪಕ್ಷಾತೀತವಾಗಿ ಶುರುವಾಗಿರುವ ಈ ಹೋರಾಟ ಸ್ವಾಗತಾರ್ಹ. ಸರ್ಕಾರ ಈ ಕಡೆಗೆ ತಕ್ಷಣ ಗಮನ ಕೊಡಬೇಕು. ವಿಳಂಬವಾದಂತೆ ರೈತರ ಪರಿಸ್ಥಿತಿ ಬಹಳಷ್ಟು ಶೋಚನೀಯ ಆಗುತ್ತೆ. ಕೆಲವರು ಹೊಲ, ಮನೆ ಇನ್ನೂ ಕೆಲವರು ಊರನ್ನೇ ಕಳದುಕೊಂಡಿದ್ದಾರೆ. ಹೀಗೆ ಅತಂತ್ರ ಸ್ಥಿತಿಯಲ್ಲಿ ಈ ಯೋಜನೆಯಡಿ ಸಿಲುಕಿವೆ. ಅತಂತ್ರ ಸ್ಥಿತಿಯಲ್ಲಿರುವ ರೈತನ ಪರಿಸ್ಥಿತಿ ದೇವರೇ ಬಲ್ಲ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು ಅಂದ್ರೆ ಈ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಎರಡ್ಮೂರು ವರ್ಷಗಳಲ್ಲಿ ಪೂರ್ಣಗೊಳಿಸಬೇಕು. ಹೀಗಾದ್ರೆ ಮಾತ್ರ ಉತ್ತರ ಕರ್ನಾಟಕದ ಪ್ರತ್ಯೇಕ ಕೂಗು ಕಡಿಮೆಯಾಗುತ್ತೆ ಎಂದರು.

ಹೋರಾಟಕ್ಕೆ ಪಂಚಪೀಠಗಳ ಬೆಂಬಲ:

ಪಕ್ಕದ ರಾಜ್ಯ ತೆಲಂಗಾಣ ನೀರಾವರಿ ಯೋಜನೆ ಬದ್ಧತೆಯ ಆದರ್ಶಗಳನ್ನು ನಾವು ಸ್ವಾಗತಿಸಬೇಕು. ನಮ್ಮ ಬಜೆಟ್ ಆ ರಾಜ್ಯದ ಬಜೆಟ್‌ಗಿಂತಲೂ ಹೆಚ್ಚಿದ್ದರೂ, ಈ ಯೋಜನೆ ಪೂರ್ಣಗೊಳ್ಳುತ್ತಿಲ್ಲ ಅಂದರೆ ಇಚ್ಛಾಶಕ್ತಿ ಕೊರತೆ ಕಾಣುತ್ತಿದೆ. ಈ ಭಾಗದ ಎಲ್ಲ ರೈತರು, ರಾಜಕೀಯ ಮುಖಂಡರು ಪಕ್ಷಾತೀತವಾಗಿ ಈ ಹೋರಾಟ ಮಾಡುತ್ತಿರುವುದು ಸ್ವಾಗತಾರ್ಹ. ಪಂಚಪೀಠಗಳ ಪರವಾಗಿ, ಶ್ರೀಶೈಲ ಜಗದ್ಗುರುಗಳು ಈ ಹೋರಾಟಕ್ಕೆ ಬಂದಿದ್ದೇವೆ. ಬರೀ ಬಾಹ್ಯ ಬೆಂಬಲ ಅಲ್ಲ, ನೀವು ಎಲ್ಲೇ ಕರೆದ್ರೂ ನಾವು ಬಂದು ಹೋರಾಟಕ್ಕೆ ಬೆಂಬಲ ಕೊಡುತ್ತೇವೆ. ಎಲ್ಲ ಪಂಚಪೀಠಗಳ ಜಗದ್ಗುರುಗಳು ನಿಮ್ಮ ಹೋರಾಟಕ್ಕೆ ಬೆಂಬಲ ಕೊಡುತ್ತೇವೆ. ಈ ಹೋರಾಟ ಯಶಸ್ವಿಯಾಗಲಿ ಎಂದು ಹಾರೈಸಿದ ಶ್ರೀಶೈಲ ಜಗದ್ಗುರುಗಳು ರೈತಪರವಾದ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮ : ಶಾಸಕ ಪ್ರದೀಪ್‌ ಈಶ್ವರ್‌
ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ