ಸಂತೆ ಬಂದರೆ ನಾಯಕನಹಟ್ಟೀಲಿ ಸವಾರರಿಗೆ ಸಂಕಷ್ಟ!

KannadaprabhaNewsNetwork |  
Published : Oct 29, 2024, 01:07 AM IST
ನಾಯಕನಹಟ್ಟಿ ರಸ್ತೆಯಲ್ಲಿ ಬಸ್ ಸಂಚಾರಕ್ಕೂ ಅವಕಾಶ ಇಲ್ಲದಂತೆ ರಸ್ತೆ ಅತಿಕ್ರಮಿಸಿರುವ ಎಗ್‌ರೈಸ್ ತಳ್ಳುಗಾಡಿಗಳು | Kannada Prabha

ಸಾರಾಂಶ

ನಾಯಕನಹಟ್ಟಿ: ಇಲ್ಲಿನ ಪಾದಗಟ್ಟೆ ರಸ್ತೆಯಲ್ಲಿ ಸಾಲುಸಾಲಾಗಿ ತಲೆಎತ್ತಿರುವ ಎಗ್‌ರೈಸ್ ಅಂಗಡಿಗಳ ಹಾವಳಿಯಿಂದಾಗಿ ಪಟ್ಟಣದ ವಾಹನ ಸವಾರರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. ರಸ್ತೆ ನಿಯಮ ಉಲ್ಲಂಘನೆ ಆಗುತ್ತಿರುವುದರಿಂದ ಅಪಘಾತಗಳಿಗೂ ಕಾರಣವಾಗುತ್ತಿದೆ.

ನಾಯಕನಹಟ್ಟಿ: ಇಲ್ಲಿನ ಪಾದಗಟ್ಟೆ ರಸ್ತೆಯಲ್ಲಿ ಸಾಲುಸಾಲಾಗಿ ತಲೆಎತ್ತಿರುವ ಎಗ್‌ರೈಸ್ ಅಂಗಡಿಗಳ ಹಾವಳಿಯಿಂದಾಗಿ ಪಟ್ಟಣದ ವಾಹನ ಸವಾರರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. ರಸ್ತೆ ನಿಯಮ ಉಲ್ಲಂಘನೆ ಆಗುತ್ತಿರುವುದರಿಂದ ಅಪಘಾತಗಳಿಗೂ ಕಾರಣವಾಗುತ್ತಿದೆ. ಸೋಮವಾರ ಇಲ್ಲಿ ಸಂತೆ ದಿನ. ಆದರೆ, ಇಲ್ಲಿನ ನಾಗರಿಕರಿಗೆ ಮಾತ್ರ ಸಂಕಷ್ಟ ದಿನ ! ರಾಜ್ಯ ಹೆದ್ದಾರಿಯಲ್ಲಿ ಸಂತೆ ಮೈದಾಳುತ್ತದೆ. ಆಗ, ದಾವಣಗೆರೆ, ಜಗಳೂರು, ದೊಣೆಹಳ್ಳಿಗೂ ಚಳ್ಳಕೆರೆ, ಬಳ್ಳಾರಿಗೂ ಸಂಪರ್ಕ ರಸ್ತೆಯಾಗಿ ಪಾದಗಟ್ಟೆ ರಸ್ತೆಯೇ ಏಕೈಕ ಸಂಚಾರ ಮಾರ್ಗವನ್ನಾಗಿ ಬಳಸುತ್ತಾ ಬರಲಾಗಿದೆ. ವಿಶಾಲವಾಗಿ ಇರುವ ಪಾದಗಟ್ಟೆ ರಸ್ತೆಯಲ್ಲಿ ಇದುವರೆಗೂ ಸಂಚಾರ ಕಿರಿಕಿರಿ ಅನುಭವಿಸಿಲ್ಲ. ಆದರೆ, ಈ ರಸ್ತೆಯಲ್ಲಿ ಎಗ್‌ರೈಸ್, ಪಾನಿಪುರಿ, ಮಸಾಲಪೂರಿ ಇತರೆ ತಳ್ಳುಗಾಡಿಗಳು ರಸ್ತೆಯನ್ನು ಆಕ್ರಮಿಸಿಕೊಳ್ಳುತ್ತಿರುವುದರಿಂದ ಪಾದಗಟ್ಟೆ ರಸ್ತೆ ಕಿರಿದಾಗಿ ಸುಗಮ ಸಂಚಾರ ಸಂಕಷ್ಟಕ್ಕೆ ಒಡ್ಡಿದೆ. 36 ಹಳ್ಳಿಯ ಜನರು ಸಂತೆಗಾಗಿ ಸೇರುತ್ತಾರೆ. ಅಲ್ಲದೇ ಶ್ರೀಗುರು ತಿಪ್ಪೇರುದ್ರಸ್ವಾಮಿಯ ವಾರೋತ್ಸವವೂ ಇದೇ ದಿನ ನಡೆಯುತ್ತದೆ. ಹಾಗಾಗಿ, ಪಟ್ಟಣದಲ್ಲಿ ಸೋಮವಾರ ಜನಸಂಖ್ಯೆ ಹೆಚ್ಚುತ್ತದೆ. ಜತೆಗೆ ವಾಹನಗಳ ಸಂಚಾರ ಭರಾಟೆ ಕೂಡ ಇರುತ್ತದೆ. ಪಾದಗಟ್ಟೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆ ಅತಿಕ್ರಮಕ್ಕೆ ಒಳಗಾಗಿದ್ದು, ಡಾಂಬರೀಕರಣ ಕಂಡಿಲ್ಲ. ಅಲ್ಲದೇ ನೂರಾರು ಗುಂಡಿಗಳು ಆವರಿಸಿವೆ. ಹಾಗಾಗಿ, ಬಸ್‌ಗಳು, ಆಟೋ, ಟಾಟಾ ಎಸಿ, ಕಾರು, ದ್ವಿಚಕ್ರಗಳು, ಟ್ರಾಕ್ಟರ್, ಲಾರಿಗಳು ಎಲ್ಲಾ ರೀತಿಯ ವಾಹನಗಳು ಪಾದಗಟ್ಟೆ ರಸ್ತೆಯನ್ನೇ ಬಳಸುತ್ತಿವೆ. ಸಮುದಾಯ ಆರೋಗ್ಯ ಕೇಂದ್ರ, ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಪ್ರವಾಸಿ ಮಂದಿರ, ರೈತ ಸಂಪರ್ಕ ಕೇಂದ್ರ, ದೇವರಾಜ ಅರಸು ಹಾಸ್ಟೆಲ್, ಬಿಎಸ್ಸೆನ್ನೆಲ್ ಕಚೇರಿ, ಎಸ್‌ಟಿಎಸ್‌ಆರ್ ಪ್ರೌಢಶಾಲೆ, ರಾಜಾಹಟ್ಟಿ ಮಲ್ಲಪ್ಪ ಪ್ರೌಢಶಾಲೆ, ಡಾನ್ ಬೋಸ್ಕೋ ಶಾಲೆಗಳಿಗೂ ಸಂಚರಿಸಲು ಜನರು ಪಾದಗಟ್ಟೆ ರಸ್ತೆಯನ್ನೇ ಅವಲಂಬಿಸಬೇಕಾಗಿದೆ. ಹಾಗಾಗಿ, ನೂರಾರು ವಿದ್ಯಾರ್ಥಿಗಳು, ರೈತರು, ರೋಗಿಗಳು ಸಂತೆ ದಿನ ಸಂಕಷ್ಟ ಅನುಭವಿಸುವುದು ತಪ್ಪಿಲ್ಲ. ಅಲ್ಲದೇ ಶಾಲಾ ಪ್ರವೇಶ ದ್ವಾರದಲ್ಲಿ ಟಿಫನ್ ಅಂಗಡಿಗಳು ಅಸ್ತಿತ್ವ ಪಡೆದುಕೊಂಡಿರುವುದರಿಂದ ಮಕ್ಕಳ ಪ್ರವೇಶಕ್ಕೂ ದಾರಿ ಇಲ್ಲದಂತೆ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಾರೆ. ವಿದ್ಯಾರ್ಥಿಗಳು ಸಹ ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. ಈ ಕುರಿತು ಪೊಲೀಸರಿಗೆ ದೂರುನೀಡಲು ನಿರ್ಧರಿಸಲಾಗಿದೆ ಎಂದು ಪಾದಗಟ್ಟೆ ರಸ್ತೆಗೆ ಅಂಟಿಕೊಂಡಿರುವ ಎಸ್‌ಟಿಎಸ್‌ಆರ್ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಬಿ.ರಮೇಶ್ ಹೇಳುತ್ತಾರೆ.

ಪಾದಗಟ್ಟೆ ರಸ್ತೆಯಲ್ಲಿ ಎಗ್‌ರೈಸ್ ಅಂಗಡಿಗಳ ಅತಿಕ್ರಮಣ ಕುರಿತು ಈಗಾಗಲೇ ಹಲವು ಬಾರಿ ಎಚ್ಚರಿಕೆ ನೀಡಲಾಗಿದೆ. ಮೌಖಿಕ ಆದೇಶ ಉಲ್ಲಂಘಿಸುತ್ತಿರುವ ಎಗ್‌ರೈಸ್ ಅಂಡಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ತೆರವು ಮಾಡಿಸಲಾಗುವುದು.- ದೇವರಾಜ್, ಪಿಎಸ್‌ಐ, ನಾಯಕನಹಟ್ಟಿ

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ