ಶಾಲೆ, ದೇವಸ್ಥಾನ ಅಭಿವೃದ್ಧಿಯಾದರೆ ಊರು ಅಭಿವೃದ್ಧಿ ಆದಂತೆ: ಸಚಿವ ಮಂಕಾಳ ವೈದ್ಯ

KannadaprabhaNewsNetwork |  
Published : Jan 22, 2026, 03:00 AM IST
ಫೋಠೊ ಪೈಲ್ : 21ಬಿಕೆಲ್ 1 | Kannada Prabha

ಸಾರಾಂಶ

ಯಾವುದೇ ಒಂದು ಊರು, ಗ್ರಾಮದಲ್ಲಿ ಶಾಲೆ, ದೇವಸ್ಥಾನ ಅಭಿವೃದ್ಧಿಯಾದರೆ ಎಲ್ಲವೂ ತನ್ನಿಂದ ತಾನಾಗಿಯೇ ಅಭಿವೃದ್ಧಿಯಾಗುತ್ತದೆ.

ಸೋಡಿಗದ್ದೆ ನೂತನ ಶಿಲಾಮಯ ಮಹಾಸತಿ ದೇವಸ್ಥಾನದ ನೀಲನಕ್ಷೆ ಬಿಡುಗಡೆ, ನಿಧಿ ಸಂಗ್ರಹಕ್ಕೆ ಚಾಲನೆ

ಕನ್ನಡ ಪ್ರಭ ವಾರ್ತೆ ಭಟ್ಕಳ

ಯಾವುದೇ ಒಂದು ಊರು, ಗ್ರಾಮದಲ್ಲಿ ಶಾಲೆ, ದೇವಸ್ಥಾನ ಅಭಿವೃದ್ಧಿಯಾದರೆ ಎಲ್ಲವೂ ತನ್ನಿಂದ ತಾನಾಗಿಯೇ ಅಭಿವೃದ್ಧಿಯಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.

ಬುಧವಾರ ಮಧ್ಯಾಹ್ನ ಸೋಡಿಗದ್ದೆಯಲ್ಲಿ ನೂತನ ಶಿಲಾಮಯ ಶ್ರೀ ಮಹಾಸತಿ ದೇವಸ್ಥಾನದ ನೀಲನಕ್ಷೆ ಬಿಡುಗಡೆಗೊಳಿಸಿ ನಿಧಿ ಸಂಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದರು.

ಸೋಡಿಗದ್ದೆ ಶ್ರೀ ಮಹಾಸತಿ ದೇವಸ್ಥಾನಕ್ಕೆ ಪ್ರಪಂಚದಾದ್ಯಂತ ಭಕ್ತರಿದ್ದಾರೆ. ಸೋಡಿಗದ್ದೆ ಮಹಾಸತಿ ದೇವಸ್ಥಾನದ ಶಕ್ತಿ ಎಂತಹದ್ದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ದೇವಸ್ಥಾನದ ಶಿಲಾಮಯ ಕಟ್ಟಡವನ್ನು ₹9.95 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಸರಕಾರದಿಂದ ಒಪ್ಪಿಗೆ ಸಿಕ್ಕಿದೆ. ದೇವಸ್ಥಾನ ನಿರ್ಮಿಸಲು ಊರಿನವರ ಒಗ್ಗಟ್ಟು ಮುಖ್ಯ ಎಂದು ಹೇಳಿದರು.

ನೂತನ ದೇವಸ್ಥಾನ ನಿರ್ಮಿಸಲು ಹಣದ ಕೊರತೆ ಎಂದಿಗೂ ಆಗುವುದಿಲ್ಲ. ದೇವಸ್ಥಾನ ಕಟ್ಟಡದ ಎಲ್ಲರೂ ಕೈಜೋಡಿಸುತ್ತಾರೆ. ನಮ್ಮ ಹಿಂದಿನ ತಲೆಮಾರಿನವರು ದೇವಸ್ಥಾನದ ಬಗ್ಗೆ ಅಪಾರ ಭಕ್ತಿ ಭಾವ ಹೊಂದಿದ್ದರು. ಅದನ್ನು ನಾವು ಮುಂದುವರಿಸಿಕೊಂಡು ಹೋಗಬೇಕಾಗಿದೆ. ನಮ್ಮ ಪ್ರಥಮ ಆದ್ಯತೆ ಶಾಲೆ, ದೇವಸ್ಥಾನ, ಮಠ ನಿರ್ಮಿಸುವುದಾಗಿದೆ. ಯಾವುದೇ ಒಂದು ಊರಿನ ಅಭಿವೃದ್ಧಿಯನ್ನು ಅಲ್ಲನ ಶಾಲೆ, ದೇವಸ್ಥಾನ ನೋಡಿ ಅಳೆಯುತ್ತಾರೆ. ಸೋಡಿಗದ್ದೆ ದೇವಸ್ಥಾನದ ವಿಚಾರದಲ್ಲಿ ತಾನು ಎಂದಿಗೂ ರಾಜಕೀಯ ಮಾಡುವುದಿಲ್ಲ. ದೇವಸ್ಥಾನದ ಕಟ್ಟಡಕ್ಕೆ ಸರಕಾರ ಮತ್ತು ವೈಯಕ್ತಿಕವಾಗಿ ಸಹಾಯ ಮಾಡುತ್ತೇನೆಂದರು.

ಆದಷ್ಟು ಬೇಗ ಕಟ್ಟಡ ಶಿಲನ್ಯಾಸಕ್ಕೆ ಸಮಿತಿಯವರು ದಿನಾಂಕ ನಿಗದಿಪಡಿಸಿ ಕೆಲಸ ಆರಂಭಿಸಬೇಕು. ಒಂದು ವರ್ಷದೊಳಗಾಗಿ ದೇವಸ್ಥಾನದ ಸಂಪೂರ್ಣ ಕೆಲಸ ಮುಗಿಸಬೇಕು ಎಂದರು.

ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಮಾತನಾಡಿ, ಈಗಾಗಲೇ ಸರಕಾರದ ಖಾತೆಯಲ್ಲಿ ಸೋಡಿಗದ್ದೆ ದೇವಸ್ಥಾನದ ₹7 ಕೋಟಿ ಹಣ ಇದ್ದು, ಆರಂಭಿಕ ಕಾಮಗಾರಿ ಮಾಡಲು ತೊಂದರೆ ಆಗುವುದಿಲ್ಲ ಎಂದ ಅವರು, ದೇವಸ್ಥಾನದ ಜೊತೆಗೆ ಸನಿಹದಲ್ಲಿರುವ ಅಂಗನವಾಡಿ ಮತ್ತು ಶಾಲೆಯನ್ನೂ ಸಹ ನಿರ್ಮಾಣ ಮಾಡಿದರೆ ಅನುಕೂಲವಾಗಲಿದೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ದೇವಸ್ಥಾನದ ಜೀಣೋದ್ಧಾರ ಸಮಿತಿಯ ಅಧ್ಯಕ್ಷ ನಾಗರಾಜ ಈ.ಎಚ್., ಕಳೆದ ಹಲವು ವರ್ಷಗಳಿಂದ ನೂತನ ಶಿಲಾಮಯ ದೇವಸ್ಥಾನ ನಿರ್ಮಿಸಬೇಕೆಂಬ ಕನಸು ನನಸಾಗಿದೆ. ನೂತನ ದೇವಸ್ಥಾನ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ನಿರ್ದೇಶಕಿ ಸುಧಾ ತಳವಾರ, ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ, ಸೋಡಿಗದ್ದೆ ಮಹಾಸತಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವಿದಾಸ ಮೊಗೇರ, ಉಪಾಧ್ಯಕ್ಷ ನಾಗರಾಜ ನಾಯ್ಕ, ಕಾರ್ಯದರ್ಶಿ ರಮೇಶ ದೇವಡಿಗ, ಪ್ರಮುಖರಾದ ಎಂ.ಜೆ. ನಾಯ್ಕ, ನಾರಾಯಣ ನಾಯ್ಕ, ಅಚ್ಯುತ್ ನಾಯ್ಕ, ಅಣ್ಣಪ್ಪ ಮೊಗೇರ, ಕೇಶವ ನಾಯ್ಕ ಮುಂತಾದವರಿದ್ದರು. ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಸಚಿವರು ಹಾಗೂ ಜಿಲ್ಲಾಧಿಕಾರಿ ಸೋಡಿಗದ್ದೆ ಶ್ರೀಮಹಾಸತಿ ಅಮ್ಮನವರ ದರ್ಶನ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

10 ಪ್ಯಾರಾದಲ್ಲಿ ಕೇಂದ್ರ ವಿರುದ್ಧ ಟೀಕಾ ಪ್ರಹಾರ
ಬೇಡಿಕೆಗೆ ತಕ್ಕಷ್ಟು ಬರುತ್ತಿಲ್ಲ ಮೈಸೂರು ರೇಷ್ಮೆ ಸೀರೆ