ಅಂಕೋಲಾ: ಕೃಷಿ ಕ್ಷೇತ್ರ ಕಡೆಗಣಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ದೇಶದ ಆರ್ಥಿಕತೆಗೆ ಪೂರಕವಾದ ಕೃಷಿ ಕ್ಷೇತ್ರವನ್ನು ಕಡೆಗಣಿಸದೆ ಬೆಳೆಸಬೇಕಾದ ಅಗತ್ಯತೆಯಿದೆ ಎಂದು ಕೃಷಿ ಉತ್ಪನ್ನಗಳ ರಪ್ತುದಾರ ಡಾ. ಎಚ್.ಎಸ್. ಶೆಟ್ಟಿ ತಿಳಿಸಿದರು.
ಭಾನುವಾರ ತಾಲೂಕಿನ ಬಾಸಗೋಡದ ಸರಯೂ ಬನದಲ್ಲಿ ಬೆಳೆಗಾರರ ಸಮಿತಿ ಹಮ್ಮಿಕೊಂಡ ೧೨ನೇ ಕೃಷಿ ಹಬ್ಬವನ್ನು ಉಳುಮೆ ಮಾಡುವುದರೊಂದಿಗೆ ಚಾಲನೆ ನೀಡಿ ಮಾತನಾಡಿ, ಪರಂಪರಾಗತವಾಗಿದ್ದ ಭಾರತೀಯ ಕೃಷಿ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಗಾಗಿವೆ. ದೇಶಿಯ ಹಸುಗಳ ಬದಲಿಗೆ ಆಕರ್ಷಿಸುವ ವಿದೇಶಿ ತಳಿ ಹಸುಗಳನ್ನು ಪರಿಚಯಿಸಲಾಗುತ್ತಿದೆ. ಸಂಕರಣ ತಳಿಗಳ ಹಸುವಿನ ಹಾಲಿನಲ್ಲಿ ಸತ್ವವಿಲ್ಲ. ಸಗಣಿಯಿಂದ ಸಿದ್ಧಗೊಳ್ಳುವ ಗೊಬ್ಬರದಲ್ಲೂ ಸಾರವಿಲ್ಲದಂತಾಗಿದೆ. ಇನ್ನೊಂದೆಡೆ ಕೀಟನಾಶಕಗಳ ಪ್ರಯೋಗ, ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗಿ ಕೃಷಿ ಭೂಮಿ ಬಲ ಕಳೆದುಕೊಳ್ಳುವಂತಾಗಿದ್ದು, ಎಚ್ಚೆತ್ತುಕೊಳ್ಳಬೇಕಾದ ಅಗತ್ಯತೆಯಿದೆ ಎಂದರು.ಈ ನಿಟ್ಟಿನಲ್ಲಿ ಬೆಳೆಗಾರರ ಸಮಿತಿಯ ಸಂಚಾಲಕ, ನ್ಯಾಯವಾದಿ ನಾಗರಾಜ್ ನಾಯಕ ನೇತೃತ್ವದ ತಂಡ ಕಳೆದ ಹನ್ನೆರಡು ವರ್ಷಗಳಿಂದ ಹಮ್ಮಿಕೊಂಡು ಬಂದಿರುವ ಕೃಷಿ ಹಬ್ಬದ ಮೂಲಕ ಕೃಷಿಯ ಮಹತ್ವವನ್ನು ಸಾರುತ್ತಿರುವುದು ಹೆಮ್ಮೆ ತಂದಿದೆ ಎಂದರು.
ಕೃಷಿಭೀಮಾ ಪ್ರಶಸ್ತಿಗೆ ಭಾಜನರಾದ ವರ್ತೂರ ಸಂತೋಷ ಮಾತನಾಡಿ, ಕೃಷಿಯಲ್ಲಿ ಸುಸ್ಥಿರ ಜೀವನದೊಂದಿಗೆ ಸ್ವಾಭಿಮಾನದಿಂದ ಬದುಕುವ ಶಕ್ತಿಯನ್ನು ಕಲಿಸುತ್ತದೆ. ಆದರೆ ಇತ್ತೀಚೆಗೆ ಮಕ್ಕಳಿಗೆ ಹೊರಜಿಲ್ಲೆ, ನೆರೆ ರಾಜ್ಯಗಳಲ್ಲಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಲೆಕ್ಕವಿಲ್ಲದಷ್ಟು ಹಣ ಸುರಿದು ಸೇರಿಸುವುದು ಬಹುದೊಡ್ಡ ಸಾಧನೆ ಎಂಬ ಭಾವನೆ ಬೆಳೆದುಕೊಂಡಿದೆ. ಈ ಬೆಳವಣಿಗೆಯಿಂದಾಗಿ ದಿಕ್ಕು ತಪ್ಪಿಹೋಗುತ್ತಿರುವ ಯುವಜನಾಂಗ ಮಾರಕ ಪರಿಣಾಮಗಳನ್ನು ಎದುರಿಸಬೇಕಾದ ಸ್ಥಿತಿಯನ್ನು ತಂದಿಟ್ಟಂತಾಗಿದೆ. ಕೃಷಿ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ದುಡಿಮೆಗಿಳಿದರೆ ಐಟಿ, ಬಿಟಿ ಕಂಪನಿಗಳಲ್ಲೂ ದೊರೆಯದ ಆದಾಯವನ್ನು ಗಳಿಸಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬಹುದು ಎಂದರು.ಬೆಳೆಗಾರರ ಸಮಿತಿ ಸಂಚಾಲಕ ನ್ಯಾಯವಾದಿ, ನಾಗರಾಜ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ನೆಲವಾಗಿರುವ ಅಂಕೋಲೆಯ ಬಾಸಗೋಡದಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಕೃಷಿ ಹಬ್ಬ ಆಯೋಜಿಸುತ್ತಿದ್ದು, ಎಲ್ಲೆಡೆಗಳಿಂದ ಮೆಚ್ಚುಗೆಯ ನುಡಿಗಳು ವ್ಯಕ್ತವಾಗಿವೆ. ಕೃಷಿಯಿಂದ ಕೇವಲ ಆಹಾರ ಉತ್ಪನ್ನಗಳನ್ನು ಉತ್ಪಾದಿಸುವುದಕ್ಕೆ ಸೀಮಿತವಾಗದೇ ಮಾನವೀಯ ಸಂಬಂಧವನ್ನು ಬೆಳೆಸುತ್ತದೆ ಎಂದರು.
ಶೆಟಗೇರಿ ಗ್ರಾಪಂ ಅಧ್ಯಕ್ಷ ಲಕ್ಷ್ಮಿಧರ ನಾಯಕ, ಸಾರಿಗೆ ಉದ್ಯಮಿ ಆನಂದು ಕವರಿ, ಬೆಳೆಗಾರರ ಸಮಿತಿಯ ಗೌರವಾಧ್ಯಕ್ಷ ದೇವರಾಯ ನಾಯಕ ವಂದಿಗೆ, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಂದ್ರ ನಾಯ್ಕ, ಪ್ರಮುಖರಾದ ವೆಂಕಣ್ಣ ಮಾಣಿ ನಾಯಕ, ಬೆಳೆಗಾರರ ಸಮಿತಿಯ ಆರತಿ ಗೌಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ನಾರಾಯಣ ನಾಯಕ ಹಿಲ್ಲೂರು, ಹೊನ್ನಪ್ಪ ನಾಯಕ ಅವರ್ಸಾ, ಹೊನ್ನಮ್ಮಾ ಗೌಡ ಸಿಂಗನಮಮಕ್ಕಿ, ರಾಜಾ ಪೆಡ್ನೇಕರ ಹಾರವಾಡ, ವಾಮನ ಪೈ ಅವರ್ಸಾ ಅವರಿಗೆ ಕಂಬಳಿ ನೀಡಿ ಗೌರವಿಸಲಾಯಿತು. ಶಿಕ್ಷಕ ರಾಜೇಶ ನಾಯಕ ಸೂರ್ವೆ ನಿರೂಪಿಸಿದರು. ಕಾರ್ಯದರ್ಶಿ ರಾಮಚಂದ್ರ ಹೆಗಡೆ ವಂದಿಸಿದರು.