ಪುರಸಭೆ ಸಾಮಾನ್ಯ ಸಭೆ ನಡಾವಳಿಗಳು ಠರಾವ್ ಪುಸಕ್ತಕ್ಕೆ ಸಿಮೀತ

KannadaprabhaNewsNetwork |  
Published : Feb 13, 2025, 12:45 AM IST
ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ | Kannada Prabha

ಸಾರಾಂಶ

ಪಟ್ಟಣ ಪ್ರವೇಶಿಸುವ ಗದಗ, ಕುಷ್ಟಗಿ ಹಾಗೂ ರೋಣ ರಸ್ತೆಗಳಲ್ಲಿ ಸ್ವಾಗತ ದ್ವಾರ ನಿರ್ಮಿಸಿ ಎಂದು ಸಾಮಾನ್ಯ ಸಭೆಯಲ್ಲಿ ಹಿಂದಿನ ವಿಪಕ್ಷ ಸದಸ್ಯರು ಹಾಗೂ ಪ್ರಸ್ತುತ ಆಡಳಿತ ಪಕ್ಷದ ಸದಸ್ಯರು ಧ್ವನಿಗೂಡಿಸಿ ಅಧ್ಯಕ್ಷರಿಗೆ ಒತ್ತಡ ಹಾಕಿದ್ದರು. ಅಧ್ಯಕ್ಷರು ಆದೇಶಿಸಿದ್ದರೂ ಇಂದಿಗೂ ಅದು ನಿರ್ಮಾಣವಾಗಿಲ್ಲ

ಎಸ್.ಎಂ.ಸೈಯದ್ ಗಜೇಂದ್ರಗಡ

ಪಟ್ಟಣದ ಪುರಸಭೆಯಲ್ಲಿ ಪ್ರತಿ ತಿಂಗಳಿಗೊಮ್ಮೆ ನಡೆಯಬೇಕಿದ್ದ ಸಾಮಾನ್ಯ ಸಭೆ ಐದು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೆ ಎರಡು ಎಂಬಂತೆ ನಡೆಯುತ್ತಿವೆ. ಆದರೆ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಧಾರ ಹಾಗೂ ನಡಾವಳಿಗಳು ಬಹುತೇಕ ಠರಾವ್ ಪುಸ್ತಕಕ್ಕೆ ಸಿಮೀತ ಹೊರತು ಜಾರಿಗೆ ಬರುತ್ತಿಲ್ಲ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಪಟ್ಟಣ ಪ್ರವೇಶಿಸುವ ಗದಗ, ಕುಷ್ಟಗಿ ಹಾಗೂ ರೋಣ ರಸ್ತೆಗಳಲ್ಲಿ ಸ್ವಾಗತ ದ್ವಾರ ನಿರ್ಮಿಸಿ ಎಂದು ಸಾಮಾನ್ಯ ಸಭೆಯಲ್ಲಿ ಹಿಂದಿನ ವಿಪಕ್ಷ ಸದಸ್ಯರು ಹಾಗೂ ಪ್ರಸ್ತುತ ಆಡಳಿತ ಪಕ್ಷದ ಸದಸ್ಯರು ಧ್ವನಿಗೂಡಿಸಿ ಅಧ್ಯಕ್ಷರಿಗೆ ಒತ್ತಡ ಹಾಕಿದ್ದರು. ಅಧ್ಯಕ್ಷರು ಆದೇಶಿಸಿದ್ದರೂ ಇಂದಿಗೂ ಅದು ನಿರ್ಮಾಣವಾಗಿಲ್ಲ. ಡಾ.ಬಿ.ಆರ್. ಅಂಬೇಡ್ಕರ ವೃತ್ತದಲ್ಲಿ ಅಂಬೇಡ್ಕರ್ ಮೂರ್ತಿ ಸ್ಥಾಪಿಸಿ ಎಂಬ ಸಂಘಟನೆಯ ಮನವಿಗೆ ಅಲ್ಲಿ ಬೇಡ ಪುರಸಭೆ ಆವರಣದಲ್ಲಿ ನಿರ್ಮಿಸೋಣ ಎಂದು ಸರ್ವ ಸದಸ್ಯರ ಒಮ್ಮತದ ನಿರ್ಧಾರವು ಅನುಷ್ಠಾನಗೊಂಡಿಲ್ಲ. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪುನರ್ ಆರಂಭಿಸಲು ಸೂಚಿಸಿದ್ದರೂ ಸಹ ಘಟಕಗಳು ಇನ್ನೂ ಆರಂಭವಾಗಿಲ್ಲ. ಪರಿಣಾಮ ೨೦ ಲೀಟರ್ ನೀರಿಗೆ ₹೧೦ ನೀಡಿ ಖಾಸಗಿ ಘಟಕಗಳಿಂದ ಸಾರ್ವಜನಿಕರು ನೀರು ಕುಡಿಯಬೇಕಾದ ದುಸ್ಥಿತಿಯಿದೆ. ವಿವಿಧ ವಾರ್ಡ್ಗಳಲ್ಲಿನ ಸಾರ್ವಜನಿಕ ಶೌಚಾಲಯಗಳು ನೀರು- ನಿರ್ವಹಣೆ ಇಲ್ಲದೇ ನಿರುಪಯುಕ್ತವಾಗಿವೆ. ಕೆಲ ವಾರ್ಡ್ಗಳಲ್ಲಿ ಬಯಲು ಬಹಿರ್ದೆಸೆ ಜೀವಂತವಾಗಿದೆ. ಪುರಸಬೆ ಆವರಣದಲ್ಲಿ ತುಕ್ಕು ಹಿಡಿದ ವಾಹನಗಳ ಟೆಂಡರ್‌ ಕರೆಯುವ ನಿರ್ಧಾರ ಸಹ ಮಕಾಡೆ ಮಲಗಿದೆ.

ಹೀಗಾಗಿ ಸಾಮಾನ್ಯ ಸಭೆಯ ನಿರ್ಣಯಗಳು ಚರ್ಚೆಗಳಿಗೆ ಸಿಮೀತವಾಗದೆ ಜಾರಿಗೆ ತಂದರೆ ಸಾಮಾನ್ಯ ಸಭೆಗೆ ನಿಜವಾದ ಆರ್ಥ ಬರಲಿದೆ. ಇನ್ನಾದಾರೂ ನಿರ್ಣಯ ಜಾರಿಗೆ ತರಲು ಮುಂದಾಗಲಿ ಎಂಬುದು ನಾಗರಿಕರ ಆಗ್ರಹವಾಗಿದೆ.

ಕೆಲವೇ ತಿಂಗಳಲ್ಲಿ ಪುರಸಭೆಗೆ ಚುನಾವಣೆ ನಡೆಯಲಿದ್ದು, ಆಡಳಿತ ಪಕ್ಷದ ಕೊನೆಯ ಬಜೆಟ್ ಆಗಿದೆ. ಘೋಷಿಸಿದ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಿದರೆ ಪುರಸಭೆ ಚುನಾವಣೆಯಲ್ಲಿ ಮತ್ತೆ ಗೆಲ್ಲಲು ಸಹಾಯಕ, ಕಾಮಗಾರಿ ಪೂರ್ಣಗೊಳಿಸಲು ಅನುದಾನ ಬೇಕಿದೆ. ಹೀಗಾಗಿ ಸರ್ಕಾರ ಇರುವುದರಿಂದ ಆಡಳಿತ ಪಕ್ಷ ತನ್ನದೆಯಾದ ಲೆಕ್ಕದಲ್ಲಿದೆ. ಇತ್ತ ವಿಪಕ್ಷ ಸದಸ್ಯರು ತಮ್ಮ ಅವಧಿಯಲ್ಲಿಯೇ ಹೆಚ್ಚು ಅಭಿವೃದ್ಧಿಯಾಗಿದೆ, ಆಡಳಿತ ಪಕ್ಷದಿಂದ ಏನಾಗುತ್ತಿಲ್ಲ ಎಂಬ ವಾದ ಮುಂದಿಡೂತ್ತಿದ್ದು, ಬಜೆಟ್ ಹಾಗೂ ಸಾಮಾನ್ಯ ಸಭೆಯತ್ತ ಪಟ್ಟಣದ ಜನತೆಯ ಚಿತ್ತ ನೆಟ್ಟಿದೆ.

ಪಟ್ಟಣದ ಅಭಿವೃದ್ಧಿಗೆ ಪುರಸಭೆ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ತಾಕೀತು ಮಾಡುವುದರ ಜತೆಗೆ ಪಟ್ಟಣದ ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು ಘೋಷಿಸಿದ ಯೋಜನೆಗಳ ಜಾರಿಗೆ ಶ್ರಮಿಸುವೆ ಎಂದು ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ ಹೇಳಿದರು.

ಪುರಸಭೆ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಧಾರಗಳು ಜಾರಿಗೆ ಯಾವಾಗ ಎಂದು ಪ್ರಶ್ನಿಸುತ್ತೇವೆ. ಪಟ್ಟಣದ ಅಭಿವೃದ್ಧಿಗಾಗಿ ಸರ್ಕಾರ ಮಟ್ಟದಿಂದ ಅನುದಾನ ತರುತ್ತಾರೋ ಅಥವಾ ಸ್ಥಳೀಯ ಸಂಪನ್ಮೂಲ ಬಳಸಿಕೊಳ್ಳುತ್ತಾರೆ ಎಂಬುದನ್ನು ಕೇಳುತ್ತೇವೆ ಎಂದು ಪುರಸಭೆ ವಿಪಕ್ಷ ನಾಯಕ ಮೂಕಪ್ಪ ನಿಡಗುಂದಿ ಹೇಳಿದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌