ಹಾನಗಲ್ಲ: ರೈತರ ಜಮೀನನ್ನು ವಕ್ಫ ಆಸಿಯೆಂದು ನಮೂದಿಸುವ ಆತಂಕಕಾರಿ ಪ್ರಕರಣಗಳಲ್ಲಿ ಹಾನಗಲ್ಲ ತಾಲೂಕಿನ 350 ಕ್ಕೂ ಅಧಿಕ ಆಸ್ತಿಗಳು ಸೇರಿದ್ದು, ಹಾಗೇನಾದರೂ ಹೆಸರು ಬದಲಾವಣೆಗೆ ಮುಂದಾದರೆ ತೀವ್ರತರದ ಹೋರಾಟವನ್ನು ಸರಕಾರ ಎದುರಿಸಬೇಕಾಗುತ್ತದೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎಸ್.ಎಂ. ಕೋತಂಬರಿ ಹಾಗೂ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಬಿ.ಅರ್. ಪಾಟೀಲ ತಿಳಿಸಿದರು.ಶುಕ್ರವಾರ ಹಾನಗಲ್ಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಾನಗಲ್ಲ ತಾಲೂಕಿನಲ್ಲಿ ಈಗಾಗಲೇ 350 ಆಸ್ತಿಗಳನ್ನು ವಕ್ಫ ಆಸ್ತಿಯನ್ನಾಗಿ ನಮೂದಿಸಲು ಸರಕಾರದ ಮಟ್ಟದಲ್ಲಿ ಸೂಚನೆಗಳು ಬಂದಿರುವುದು ವಿಷಾದದ ಸಂಗತಿ. ರೈತರನ್ನು ಒಕ್ಕಲೆಬ್ಬಿಸುವ ಇಂತಹ ಪ್ರಸಂಗಗಳು ಒಳ್ಳೆಯ ಬೆಳವಣಿಗೆ ಅಲ್ಲ. ನೂರಾರು ವರ್ಷಗಳಿಂದ ಕೃಷಿ ಮಾಡಿಕೊಂಡಿದ್ದ ರೈತರಿಗೆ ಇಂತಹ ಏಕಾಏಕಿ ನಡೆಗಳು ತೀವ್ರತರ ಆತಂಕ ಮೂಡಿಸಿವೆ. ಇದು ಖಂಡನೀಯವೂ ಆಗಿದೆ. ಹಾವೇರಿ ಜಿಲ್ಲೆಯಲ್ಲಿ ಇಂತಹ 1650 ಪ್ರಕರಣಗಳನ್ನು ಗುರುತಿಸಲಾಗಿದೆ. ಇವೆಲ್ಲವುಗಳನ್ನು ವಕ್ಫ ಆಸ್ತಿ ಎಂದು ನಮೂದಿಸಲು ಜಿಲ್ಲಾಧಿಕಾರಿಗಳ ಮೇಲೆ ಒತ್ತಡವೂ ಇದೆ. ಹಾಗೇನಾದರೂ ಕಂದಾಯ ಇಲಾಖೆ ಮಾಡಿದಲ್ಲಿ ರೈತರು ಬೆಳೆಸಾಲ, ಬೆಳೆವಿಮೆ ಸೇರಿದಂತೆ ಎಲ್ಲ ವಹಿವಾಟಿನಿಂದ ಹೊರಗೆ ಉಳಿಯಬೇಕಾಗುತ್ತದೆ. ಸದಾ ರೈತರ ಪರವಾಗಿ ನಿಲ್ಲವ ರಾಜ್ಯದ ಕಂದಾಯ ಸಚಿವರು ಈಗ ರೈತರ ಪರ ಹೆಜ್ಜೆ ಹಾಕುವ ಅನಿವಾರ್ಯತೆ ಇದೆ. ಇದಕ್ಕಾಗಿ ಹೋರಾಟ ನಡೆಯುವ ಮುನ್ನ ಸರಕಾರ ರೈತ ಪರವಾಗಿ ಅದೇಶ ಮಾಡಿ ರೈತರನ್ನು ಒಕ್ಕಲೆಬ್ಬಿಸದಂತೆ ಕ್ರಮ ಕೈಗೊಳ್ಳಬೇಕು. ಈ ಮೂಲಕ ಸಾವಿರಾರು ರೈತರ ಆಸೆಗಳನ್ನು ಮುರುಟದೆ ರೈತರ ಹಿತ ಕಾಯಬೇಕು. ಬೀದಿಗಿಳಿದು ಹೋರಾಟಕ್ಕೆ ಹೊರಡುವ ಮುನ್ನ ಸರಕಾರ ವಿವೇಚನೆಯಿಂದ ರೈತರ ಸಂಕಷ್ಟ ಪರಿಹರಿಸಬೇಕು ಎಂದು ಒತ್ತಾಯಿಸಿದರು.ಮುಖಂಡರು ರೈತ ಸಮುದಾಯದ ಅಣ್ಣಪ್ಪ ಚಾಕಾಪುರ, ವಿನಯ ಹೊಸಪೇಟೆ, ಬಸವಣ್ಣೆಪ್ಪ ಬಾಳಿಕಾಯಿ, ಭುವನೇಶ ದೇವಗಿರಿ, ಪರಮೇಶ ಬ್ಯಾಲಾಳ, ಶೇಕಪ್ಪ, ಮಂಜಪ್ಪ ದೇವಗಿರಿ ಮೊದಲಾದವರು ಈ ಸಂದರ್ಭದಲ್ಲಿದ್ದರು.ರೈತರ ಆಸ್ತಿಯಲ್ಲಿ ವಕ್ಫ ಎಂದು ನಮೂದಿಸಬೇಕೆಂಬ ಯಾವುದೇ ಪ್ರಕ್ರಿಯೆ ಹಾನಗಲ್ಲ ತಾಲೂಕಿನಲ್ಲಿ ನಡೆದಿಲ್ಲ. ಈ ವರೆಗೆ ಅಂತಹ ಯಾವುದೇ ದಾಖಲೆ ಇಲ್ಲ. ಅದಕ್ಕಾಗಿ ಯಾವುದೇ ಒತ್ತಡವೂ ಇಲ್ಲ. ಹಾನಗಲ್ಲ ತಾಲೂಕಿನಲ್ಲಿ ಅಂತಹ 350 ಆಸ್ತಿ ಪ್ರಕರಣಗಳಿವೆ ಎಂಬ ಮಾಹಿತಿ ಇದೆ. ಮಾಲೀಕರ ಕಾಲಂನಲ್ಲಿ ಯಾವುದೇ ಬದಲಾವಣೆಗೆ ಅವಕಾಶ ಮಾಡಿಕೊಟ್ಟಿಲ್ಲ. ಈ ಬಗ್ಗೆ ಮೇಲಧಿಕಾರಿಗಳು ಹಾಗೂ ಸರಕಾರದ ಹಂತದಲ್ಲಿ ಚರ್ಚೆ ಇದೆ. ರೈತರು ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಅದಕ್ಕಾಗಿ ಕಂದಾಯ ಇಲಾಖೆಯಲ್ಲಿ ಖುದ್ದಾಗಿ ಮಾಹಿತಿ ಪಡೆಯಬಹುದಾಗಿದೆ. ರೈತರಿಗೂ ಯಾವುದೇ ನೋಟಿಸ್ ನಮ್ಮಿಂದ ನೀಡಿಲ್ಲ ಎಂದು ತಹಸೀಲ್ದಾರ್ ಎಸ್. ರೇಣುಕಮ್ಮ ಹೇಳಿದರು.