ಗುಣಮಟ್ಟದ ರಸ್ತೆಯಿದ್ದರೆ ಎಲ್ಲ ಗ್ರಾಮಕ್ಕೆ ಬಸ್‌

KannadaprabhaNewsNetwork |  
Published : Nov 16, 2025, 01:15 AM IST
ಮಧುಗಿರಿಯಲ್ಲಿ 11.50 ಕೋಟಿ ರು.ವೆಚ್ಚದಲ್ಲಿ ಸಹಾಯಕ ಪ್ರಾದೇಶಿಕ ಕಚೇರಿ ನೂತನ ಕಟ್ಟಡ ಕಾಮಗಾರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಶಾಸಕ ಕೆ.ಎನ್‌.ರಾಜಣ್ಣ ಭೂಮಿ ಪೂಜೆ ನೆರವೇರಿಸಿದರು.  | Kannada Prabha

ಸಾರಾಂಶ

ತಾಲೂಕಿನ 21 ಹಳ್ಳಿಗಳಿಗೆ ಬಸ್ ಸೌಲಭ್ಯ ಕಲ್ಪಿಸಲು ಶಾಸಕರು ಕೇಳಿದ್ದು, ಗುಣ ಮಟ್ಟದ ರಸ್ತೆಗಳಿದ್ದರೆ ಎಲ್ಲ ಗ್ರಾಮಗಳಿಗೂ ಬಸ್‌ ಓಡಿಸುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ತಾಲೂಕಿನ 21 ಹಳ್ಳಿಗಳಿಗೆ ಬಸ್ ಸೌಲಭ್ಯ ಕಲ್ಪಿಸಲು ಶಾಸಕರು ಕೇಳಿದ್ದು, ಗುಣ ಮಟ್ಟದ ರಸ್ತೆಗಳಿದ್ದರೆ ಎಲ್ಲ ಗ್ರಾಮಗಳಿಗೂ ಬಸ್‌ ಓಡಿಸುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು.

ಪಟ್ಟಣದ ಹಿಂದೂಪುರ ರಸ್ತೆಯ ಪಾಳ್ಯದಳ್ಳಿಯಲ್ಲಿ ಶನಿವಾರ ಸಾರಿಗೆ ಇಲಾಖೆ ಮತ್ತು ರೇಷ್ಮೆ ಇಲಾಖೆಯ ಸಹಯೋಗದೊಂದಿಗೆ ಸುಮಾರು 11.50 ಕೋಟಿ ರು.ವೆಚ್ಚದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ನೂತನ ಕಟ್ಟಡ ಹಾಗೂ ಸ್ವಯಂ ಚಾಲಿತ ವಾಹನ ಚಾಲನಾ ಪರೀಕ್ಷಾ ಪಥ ಹಾಗೂ ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿ ಕಟ್ಟಡದ ಶಂಕುಸ್ಥಾಪನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮಧುಗಿರಿಯಲ್ಲಿ ಶಾಸಕ ಕೆ.ಎನ್‌.ರಾಜಣ್ಣ ಅವರ ಇಚ್ಚಾಶಕ್ತಿಯಿಂದಾಗಿ ಡಿಪೋ, ಎಆರ್‌ಟಿಓ ಕಚೇರಿ ಪ್ರಾರಂಭಿಸಿದ್ದು, ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿರುವ ಸಾರಿಗೆ ಕಚೇರಿಗೆ ಸ್ವಂತ ಕಟ್ಟಡ ಕಟ್ಟಲು ಇಂದು 11.50 ಕೋಟಿ ರು.ವೆಚ್ಚದಲ್ಲಿ ಭೂಮಿ ಪೂಜೆ ನೆರವೇರಿಸಲಾಗಿದೆ.

ರಾಜ್ಯದಲ್ಲಿ 5800 ಬಸ್ ಖರೀದಿಸಿದ್ದು, 9 ಸಾವಿರ ನೌಕರರನ್ನು ನೇಮಿಸಿದ್ದು ಈ ಪೈಕಿ ಅನುಕಂಪದ ಆಧಾರದ ಮೇಲೆ 1 ಸಾವಿರ ನೌಕರಿ ನೀಡಿದ್ದೇವೆ. ಪ್ರಸ್ತುತ 2 ಸಾವಿರ ಬಸ್ ಖರೀದಿಸಲು ಸಿಎಂ ಅನುಮೋದನೆ ನೀಡಿದ್ದು, ಇದರಲ್ಲಿ 500 ಬಸ್‌ಗಳನ್ನು ಸಾರಿಗೆ ಇಲಾಖೆಗೆ ಕೊಡಲಾಗುವುದು. 70 ಪಲ್ಲಕ್ಕಿ ಬಸ್ ಟೆಂಡರ್ ಮುಗಿದಿದ್ದು ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ರಾಜ್ಯದಲ್ಲಿ 45 ಡ್ರೈವಿಂಗ್ ಟ್ರ್ಯಾಕ್ ನಿರ್ಮಿಸುತ್ತಿದ್ದು, ಇದರಲ್ಲಿ 7 ಮುಗಿದಿದ್ದು, 28 ಪ್ರಗತಿಯಲ್ಲಿವೆ. 10 ಟೆಂಡರ್‌ ಆಗಿದೆ. ಅದರಲ್ಲಿ ಮಧುಗಿರಿ ಕೂಡ ಒಂದು. ಶಾಸಕ ಕೆ. ಎನ್.ರಾಜಣ್ಣ ಅವರ ಕಾಳಜಿಯಿಂದ ತಾಲೂಕಿನ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರೇಷ್ಮೆ ಇಲಾಖೆ ಸ್ಥಳ ಬಿಡಿಸಿಕೊಂಡು ಈ ಸಾರಿಗೆ ಕಚೇರಿ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದರು.

ಗ್ರಾಮೀಣ ಪ್ರದೇಶದ ಪತ್ರಕರ್ತರಿಗೆ ಬಜೆಟ್‌ನಲ್ಲಿ 10 ಕೋಟಿ ಮೀಸಲಿಟ್ಟಿದ್ದು, ವಾರ್ತಾ ಮತ್ತು ಪ್ರಚಾರ ಇಲಾಖೆ ಪಟ್ಟಿ ಆಧಾರಿಸಿ ಪತ್ರಕರ್ತರಿಗೆ ಉಚಿತ ಬಸ್‌ ಪಾಸ್ ನೀಡಲಿದ್ದೇವೆ ಎಂದರು. ಶಾಸಕ ಕೆ. ಎನ್.ರಾಜಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಧುಗಿರಿ ಜಿಲ್ಲಾ ಕೇಂದ್ರವಾಗಲೂ ಎಸ್‌ಪಿ, ಡಿಸಿ, ಸಿಇಒ ಕಚೇರಿಗಳು ಬಾಕಿ ಇದ್ದು, ಅವುಗಳನ್ನು ತಂದು ಮಧುಗಿರಿ ಜಿಲ್ಲೆ ಮಾಡುವುದು ಖಚಿತ ಎಂದರು.

ಕಾರ್ಯಕ್ರಮದಲ್ಲಿ ಸಾರಿಗೆ ಅಧಿಕಾರಿ ಎ.ವಿ.ಪ್ರಸಾದ್, ಅಪರ ಸಾರಿಗೆ ಆಯುಕ್ತೆ ಓಂಕಾರೇಶ್ವರಿ, ಜಂಟಿ ಸಾರಿಗೆ ಆಯುಕ್ತೆ ಗಾಯಿತ್ರಿ ದೇವಿ, ರೇಷ್ಮೆ ಇಲಾಖೆ ನಿರ್ದೇಶಕ ವೈ.ಟಿ.ತಿಮ್ಮಯ್ಯ, ಉಪನಿರ್ದೇಶಕ ಟಿ.ಲಕ್ಷ್ಮೀನರಸಯ್ಯ, ಮೋಹನ್‌, ವಿಸ್ತರಣಾಧಿಕಾರಿ ನಾರಾಯಣ್, ಮಧುಗಿರಿ ಎಆರ್‌ಟಿಒ ವೀರಣ್ಣ, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ನಿರ್ದೇಶಕ ಬಿ.ನಾಗೇಶ್‌ಬಾಬು, ಪುರಸಭೆ ಅಧ್ಯಕ್ಷರಾದ ಲಾಲಪೇಟೆ ಮಂಜುನಾಥ್, ಕೆ.ಪ್ರಕಾಶ್, ಗಂಗಣ್ಣ, ಎಂ.ಕೆ.ನಂಜುಂಡಯ್ಯ, ತಾಪಂ ಇಒ ಲಕ್ಷ್ಮಣ್‌, ವಕೀಲರ ಸಂಘದ ಅಧ್ಯಕ್ಷ ಪಿಸಿಕೆರೆಡ್ಡಿ,ನೌಕರರ ಸಂಘದ ಜಿಲ್ಲಾಧ್ಯಕ್ಷ ರಂಗಪ್ಪ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋಪಾಲಯ್ಯ,ಆಧಿನಾರಾಯಣರೆಡ್ಡಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ಅಕ್ರಮ ಮನೆಗಳ ತೆರವು ಎನ್‌ಐಎ ತನಿಖೆಗೆ ನೀಡಲು ಆಗ್ರಹ
ಒಳ್ಳೆ ರಿಸಲ್ಟ್‌ಗಾಗಿ ಶಿಕ್ಷಕರಿಂದ್ಲೇಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಲೀಕ್