ತಾಕತ್ತಿದ್ದರೆ ಸೈದ್ಧಾಂತಿಕವಾಗಿ ಚರ್ಚೆಗೆ ಬರಲಿ: ಸಿ.ಡಿ.ಗಂಗಾಧರ್

KannadaprabhaNewsNetwork |  
Published : Jun 03, 2026, 01:30 AM IST
೨ಕೆಎಂಎನ್‌ಡಿ-೧ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿದರು. | Kannada Prabha

ಸಾರಾಂಶ

ಸುರೇಶ್‌ಗೌಡರಿಗೆ ಮುಂಬರುವ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಟಿಕೆಟ್ ಸಿಗುವ ಸಾಧ್ಯತೆಗಳಿಲ್ಲ. ಅವರ ಪಕ್ಷದವರೇ ಟಿಕೆಟ್ ತಪ್ಪಿಸುವುದಕ್ಕೆ ಹೊರಟಿದ್ದಾರೆ. ಆ ಭಯದಿಂದ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರನ್ನು ಓಲೈಕೆ ಮಾಡಿಕೊಳ್ಳುವುದಕ್ಕೆ ಚಲುವರಾಯಸ್ವಾಮಿ ವಿರುದ್ಧ ನಾಲಿಗೆ ಹರಿಯಬಿಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಾಜಿ ಶಾಸಕ ಕೆ.ಸುರೇಶ್‌ಗೌಡ ಅವರು ಅಭಿವೃದ್ಧಿ ವಿಚಾರವಾಗಿ ಸೈದ್ಧಾಂತಿಕವಾಗಿ ಚರ್ಚೆಗೆ ಬರಲಿ. ಅದಕ್ಕೆ ನಾವು ಸಿದ್ಧರಿದ್ದೇವೆ. ಅವರು ಎಲ್ಲಿಗೇ ಕರೆದರೂ ಬರಲು ನಾವು ರೆಡಿಯಾಗಿದ್ದೇವೆ ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಸವಾಲು ಹಾಕಿದರು.

ದೇವೇಗೌಡರು ಮತ್ತು ಕುಮಾರಸ್ವಾಮಿ ಬಗ್ಗೆ ಹಗುರವಾಗಿ ಮಾತನಾಡಿದರೆ ನಾಲಿಗೆ ಕತ್ತರಿಸುವುದಾಗಿ ಹೇಳಿದ್ದಾರೆ. ನಮ್ಮ ನಾಯಕರ ತನಕ ಹೋಗುವುದು ಬೇಡ. ಮೊದಲಿಗೆ ನಮ್ಮನ್ನು ಮುಟ್ಟಲಿ ನೋಡೋಣ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸುರೇಶ್‌ಗೌಡರಿಗೆ ಮುಂಬರುವ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಟಿಕೆಟ್ ಸಿಗುವ ಸಾಧ್ಯತೆಗಳಿಲ್ಲ. ಅವರ ಪಕ್ಷದವರೇ ಟಿಕೆಟ್ ತಪ್ಪಿಸುವುದಕ್ಕೆ ಹೊರಟಿದ್ದಾರೆ. ಆ ಭಯದಿಂದ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರನ್ನು ಓಲೈಕೆ ಮಾಡಿಕೊಳ್ಳುವುದಕ್ಕೆ ಚಲುವರಾಯಸ್ವಾಮಿ ವಿರುದ್ಧ ನಾಲಿಗೆ ಹರಿಯಬಿಟ್ಟಿದ್ದಾರೆ ಎಂದು ಕುಟುಕಿದರು.

ಜಿಲ್ಲೆ ಹಾಗೂ ರಾಜ್ಯ ರಾಜಕಾರಣದಲ್ಲಿ ಕಳೆದ ಮೂವತ್ತು ವರ್ಷಗಳಿಂದ ನಿಷ್ಕಳಂಕ ಸೇವೆ ಸಲ್ಲಿಸಿರುವ ಹಿರಿಯ ರಾಜಕಾರಣಿ ಎನ್.ಚಲುವರಾಯಸ್ವಾಮಿ ಬಗ್ಗೆ ಮಾತನಾಡುವ ಅರ್ಹತೆ, ಯೋಗ್ಯತೆ ಮಾಜಿ ಶಾಸಕ ಸುರೇಶ್‌ಗೌಡ ಅವರಿಗಿಲ್ಲ. ದೇವೇಗೌಡರು ಮತ್ತು ಅವರ ಕುಟುಂಬ ಸದಸ್ಯರನ್ನು ಹೊಗಳುವುದನ್ನು ಬಿಟ್ಟು ಇನ್ನಾವುದೇ ಅಭಿವೃದ್ಧಿ ಅಥವಾ ಪಕ್ಷದ ಸಂಘಟನೆ ಇವರಿಂದ ಸಾಧ್ಯವಾಗಿಲ್ಲ ಎಂದು ಟೀಕಿಸಿದರು.

ಕಳೆದ ಸಹಕಾರಿ ಸಂಸ್ಥೆಗಳ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಫಲಾಯನವಾದ ಅನುಸರಿಸಿದ ಜೆಡಿಎಸ್ ಅಧ್ಯಕ್ಷರು ಗೂಸೆಂಬೆತನದ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಡಿ.ರಮೇಶ್‌ಗೆ ಗ್ರಾಮ ಪಂಚಾಯ್ತಿಯಂತಹ ಚುನಾವಣೆಯನ್ನೂ ಎದುರಿಸುವ ತಾಕತ್ತಿಲ್ಲ. ಪಕ್ಷ ಸಂಘಟನೆ ಮಾಡುವ ಸಾಮರ್ಥ್ಯವಿಲ್ಲದೆ, ಚುನಾವಣೆ ಎದುರಿಸುವ ಧೈರ್ಯವಿಲ್ಲದೆ ಸದಾಕಾಲ ದೇವೇಗೌಡರ ಮನೆ ಬಾಗಿಲು ಕಾಯುವ ಕೆಲಸ ಮಾಡುತ್ತಿರುವವರು ಚಲುವರಾಯಸ್ವಾಮಿಯವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಆ ಮೂಲಕ ದೊಡ್ಡ ನಾಯಕರಾಗುವ ಭ್ರಮೆಯಲ್ಲಿದ್ದಾರೆ ಎಂದು ಜರಿದರು.

ಎರಡು ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿರುವ ಸುರೇಶ್‌ಗೌಡ ಅವರು ನಾಲಿಗೆ ಕತ್ತರಿಸುವ ಮಾತನಾಡುವುದು ಅವರಿಗೆ ಮತ್ತು ಅವರ ಪಕ್ಷಕ್ಕೆ ಶೋಭೆ ತರುವುದಿಲ್ಲ. ಸುರೇಶ್‌ಗೌಡರ ಆಕ್ರೋಶದ ಮಾತನ್ನು ಕೇಂದ್ರ ಸಚಿವರಾದ ಕುಮಾರಸ್ವಾಮಿಯವರೂ ಸಹ ಸಮರ್ಥಿಸಿಕೊಳ್ಳುವುದಿಲ್ಲ. ನಾಲಿಗೆ ಕತ್ತರಿಸುವ ಹೇಳಿಕೆ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಸೈದ್ಧಾಂತಿಕವಾಗಿ ಮತ್ತು ರಾಜಕೀಯವಾಗಿ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ಅದು ಬಿಟ್ಟು ಕಡಿ, ಹೊಡಿ, ಬಡಿ ಎನ್ನುವುದು ನಮ್ಮ ಸಂಸ್ಕೃತಿಯಲ್ಲ. ನಾವು ಸ್ವಾತಂತ್ರ್ಯವನ್ನು ಅಹಿಂಸಾತ್ಮಕವಾಗಿ ಹೋರಾಟ ಮಾಡಿ ತಂದಿದ್ದೇವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ತಿಳಿಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹಾಲಹಳ್ಳಿ ಅಶೋಕ್, ದಿನೇಶ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಶರತ್ ರಾಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ್ ಉಪಸ್ಥಿತರಿದ್ದರು. ಬಿ-ಫಾರಂ ತಪ್ಪುವ ಆತಂಕದಿಂದ ನಾಲಿಗೆ ಕತ್ತರಿಸುವ ಮಾತು: ರಾಜೇಶ್ ಕಿಡಿ

ಕನ್ನಡಪ್ರಭ ವಾರ್ತೆ ಮಂಡ್ಯ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿ ಫಾರಂ ದೊರೆಯದೆಂಬ ಆತಂಕದಿಂದ ಸಚಿವ ಚಲುವರಾಯಸ್ವಾಮಿ ನಾಲಿಗೆ ಕತ್ತರಿಸುವ ಬಗ್ಗೆ ಮಾಜಿ ಶಾಸಕ ಸುರೇಶ್‌ಗೌಡ ಮಾತನಾಡಿದ್ದಾರೆ ಎಂದು ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ. ರಾಜೇಶ್ ಕಿಡಿಕಾರಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸುರೇಶ್‌ಗೌಡ ಅದೃಷ್ಟವಂತ ರಾಜಕಾರಣಿ. ಯಾವುದೇ ಶ್ರಮವಿಲ್ಲದೆ ಅದೃಷ್ಟದಿಂದ ವರಿಷ್ಠರ ಕೃಪೆ ಹಾಗೂ ಮತದಾರರ ಅನುಕಂಪ ಗಿಟ್ಟಿಸಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾದರು. ಆದರೆ, ಅವರ ಭ್ರಷ್ಟಾಚಾರಕ್ಕೆ ಅಂಕುಶವಿಲ್ಲ ಎಂದು ಆರೋಪಿಸಿದರು.

ಜಿಲ್ಲೆಯ ಹಿರಿಯ ರಾಜಕಾರಣಿಯ ಬಗ್ಗೆ ಆಕ್ರೋಶ ಹೊರ ಹಾಕುವ ವೇಳೆ ನಾಲಿಗೆ ಕತ್ತರಿಸುವ ಮಾತನಾಡಿರುವುದು ಸರಿಯಲ್ಲ. ಇವರಿಗೆ ಧೈರ್ಯ ಹಾಗೂ ತಾಕತ್ತು ಇದ್ದರೆ ಅವರು ಹೇಳುವ ಜಾಗಕ್ಕೇ ನಾವೇ ಹೋಗುತ್ತೇವೆ. ಮೊದಲು ನಮ್ಮ ನಾಲಿಗೆಯನ್ನು ಕತ್ತರಿಸಲಿ ಎಂದು ಸವಾಲು ಹಾಕಿದರು.

ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದರೆ ದೇಶ ತ್ಯಜಿಸುವ ಮಾತನಾಡಿದ್ದ ದೇವೇಗೌಡರು ಆ ನಂತರದಲ್ಲಿ ದೇಶ ತ್ಯಜಿಸಿದರೇ ಎಂದು ಪ್ರಶ್ನಿಸಿದ ಅವರು, ಅದೇ ರೀತಿ ಸದಾ ಜೇಬಿನಲ್ಲಿ ಪೆನ್‌ಡ್ರೈವ್ ಇಟ್ಟುಕೊಂಡು ಆರೋಪ ಮಾಡುತ್ತಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಹಾಸನ ಪೆನ್‌ಡ್ರೈವ್ ಹೊರತಂದರೇ ಎಂದು ಕುಹುಕವಾಡಿದರು.

ಚಲುವರಾಯಸ್ವಾಮಿ ಅವರು ಜಿಲ್ಲೆಯ ಕೃಷಿಕರಿಗೆ ಆಸರೆಯಾಗುವ ಸದುದ್ದೇಶದಿಂದ ಕೃಷಿ ವಿವಿ ಅನುಷ್ಠಾನಗೊಳಿಸಿದ್ದಾರೆ. ಆದರೆ, ದೇವೇಗೌಡರು ಮತ್ತು ಕುಮಾರಸ್ವಾಮಿ ಜಿಲ್ಲೆಗೆ ಯಾವ ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲೆ ಮಕ್ಕಳಿಗೆ ಮನ್ಮುಲ್ ಒಕ್ಕೂಟದ ದರ್ಶನ: ಸಿ.ಶಿವಕುಮಾರ್
ರೈತ ಫಲಾನುಭವಿಗಳಿಗೆ ಮನ್ಮುಲ್‌ನಿಂದ ಡಿಜಿಟಲ್ ಪೇಮೆಂಟ್: ಸಿ.ಶಿವಕುಮಾರ್