ಕನ್ನಡಪ್ರಭ ವಾರ್ತೆ ಪಾಂಡವಪುರ
ಮನ್ಮುಲ್ ಒಕ್ಕೂಟದಿಂದ ರೈತರಿಗೆ ದೊರೆಯುವ ಎಲ್ಲಾ ಸೌಲಭ್ಯಗಳ ವ್ಯವಹಾರವನ್ನು ಇನ್ನು ಮುಂದೆ ಡಿಜಿಟಲ್ ಪೇಮೆಂಟ್ ಮೂಲಕ ವ್ಯವಹರಿಸಲಾಗುವುದು ಎಂದು ನಿರ್ದೇಶಕ ಸಿ.ಶಿವಕುಮಾರ್ ಹೇಳಿದರು.ಪಟ್ಟಣದ ಮನ್ಮುಲ್ ಉಪವ್ಯವಸ್ಥಾಪಕರ ಕಚೇರಿಯಲ್ಲಿ ರಾಸು ವಿಮೆ ಯೋಜನೆ ಹಣದ ಚೆಕ್ ಅನ್ನು ಫಲಾನುಭವಿಗೆ ವಿತರಿಸಿ, ಬಳಿಕ ನಿವೃತ್ತಿಗೊಂಡ ಕಾರ್ಯದರ್ಶಿಗಳನ್ನು ಅಭಿನಂದಿಸಿ ಮಾತನಾಡಿದರು.
ರೈತ ಫಲಾನುಭವಿಗಳಿಗೆ ನೀಡುವ ರಾಸು ವಿಮೆ, ರೈತ ಕಲ್ಯಾಣ ಟ್ರಸ್ಟ್, ಹಾಲು ಕರೆಯುವ ಯಂತ್ರದ ಸಬ್ಸಡಿ ಸೇರಿದಂತೆ ಅನೇಕ ಸೌಲಭ್ಯಗಳ ಹಣದ ವ್ಯವಹಾರವನ್ನು ಚೆಕ್ ಮೂಲಕ ವಿತರಣೆ ಮಾಡಲಾಗುತ್ತಿತ್ತು. ಇದರಲ್ಲಿ ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಇನ್ನೂ ಮುಂದೆ ಹಣದ ಎಲ್ಲಾ ವ್ಯವಹಾರ ಡಿಜಿಟಲ್ ಮೂಲಕ ಮಾಡಲು ಆಡಳಿತ ಮಂಡಳಿಯಲ್ಲಿ ತೀರ್ಮಾನಿಸಲಾಗಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.ನಾನು ನಿರ್ದೇಶಕನಾಗಿ ಆಯ್ಕೆಯಾದ ಬಳಿಕ ಇಲ್ಲಿಯವರೆಗೆ ಒಕ್ಕೂಟದ ಹಲವು ಯೋಜನೆಗಳಿಂದ ಸುಮಾರು 4 ಕೋಟಿಯಷ್ಟು ಹಣದ ಚೆಕ್ ಗಳನ್ನು ರೈತಫಲಾನುಭವಿಗಳಿಗೆ ವಿತರಿಸಿದ್ದೇನೆ. ಒಕ್ಕೂಟಗಳಿಂದ ದೊರೆಯುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಡೇರಿಗಳಿಗೆ ಕೊಡಿಸುವ ಕೆಲಸ ಮಾಡುತ್ತೇನೆ ಎಂದರು.
ನಾನೆಂದು ಸಹಕಾರ ಸಂಘದಲ್ಲಿ ರಾಜಕೀಯ ಮಾಡೋದಿಲ್ಲ. ಇಲ್ಲಿ ಕೆಲಸ ಮಾಡುವ ಎಲ್ಲರು ನಮ್ಮ ಕುಟುಂಬದ ಸದಸ್ಯರು ಇದ್ದಂತೆ. ಹಲವಾರು ಯುವ ಕಾರ್ಯದರ್ಶಿ ಕೆಲಸ ಮಾಡುತ್ತಿದ್ದೀರಾ. ನೀವುಗಳು ಹಿರಿಯ ಕಾರ್ಯದರ್ಶಿಗಳಿಂದ ಸಲಹೆ, ಸಹಕಾರ, ಮಾಹಿತಿ ಪಡೆದು ಕೆಲಸ ನಿರ್ವಹಿಸಬೇಕು ಎಂದರು.
ನಿವೃತ್ತಿ ಹೊಂದಿದ ಕೆರೆತೊಣ್ಣೂರು ಡೇರಿ ಕಾರ್ಯದರ್ಶಿ ಸಿದ್ದಲಿಂಗೇಗೌಡ, ಹಿರೇಮರಳಿ ಡೇರಿ ಕಾರ್ಯದರ್ಶಿ ಜಗದೀಶ್ ಹಾಗೂ ನುಗ್ಗಹಳ್ಳಿ ಡೇರಿ ಕಾರ್ಯದರ್ಶಿ ಸಿದ್ದರಾಮೇಗೌಡ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಜಿಲ್ಲಾ ಸಹಕಾರಿ ಯೂನಿಯನ್‌ಗೆ ನಿರ್ದೇಶಕರಾಗಿ ಆಯ್ಕೆಯಾದ ಸಿ.ಶಿವಕುಮಾರ್ ಅವರನ್ನು ಎಲ್ಲಾ ಕಾರ್ಯದರ್ಶಿಗಳು, ಸಿಬ್ಬಂದಿ ಅಭಿನಂದಿಸಿದರು.
ಈ ವೇಳೆ ಮನ್ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್, ಸಹಾಯಕ ವ್ಯವಸ್ಥಾಪಕರಾದ ಡಾ.ಸಂತೋಷ್ ಬುಡುಗೌದ್ರ, ಡಾ.ಪ್ರಕಾಶ್ ಬೆಳಗಲಿ, ಡಾ.ಮಣಿಕಂಠ, ವಿಸ್ತರ್ಣಾಧಿಕಾರಿಗಳಾದ ಮಧುಶಂಕರ್ ಸಿ.ಎನ್, ನಾಗೇಂದ್ರಕುಮಾರ್, ಪ್ರಜ್ವಲ್‌ಗೌಡ, ಉಷಾ, ಟೆಕ್ನಿಷಿಯನ್ ಆನಂದ್ ಸೇರಿದಂತೆ ಹಲವರು ಇದ್ದರು.